
ನಮ್ಮನ್ನು ರಕ್ಷಿಸಿ ಎಂದು ಗೋಗರೆದು ಅರಣ್ಯಭವನದ ಮುಂದೆ ಆರ್‌ಎಫ್‌ಒಗಳ ಪ್ರತಿಭಟನೆ
ಬೆಂಗಳೂರು: ಮಾನವ ವನ್ಯಜೀವಿ ಸಂಘರ್ಷದ ವೇಳೆ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಕೆಳ ಹಂತದ ಅಧಿಕಾರಿಗಳು, ಸಿಬ್ಬಂದಿ ಮೇಲೆ ದಾಳಿ ನಡೆಯುತ್ತಿದ್ದರೂ ಅರಣ್ಯ ಇಲಾಖೆ ಉನ್ನತ ಅಧಿಕಾರಿಗಳು ನೈತಿಕಸ್ಥೈರ್ಯ ತುಂಬುತ್ತಿಲ್ಲ, ರಕ್ಷಣೆ ಸಿಗುತ್ತಿಲ್ಲ ಎಂದು ಆರೋಪಿಸಿ ರಾಜ್ಯದ ವಲಯ ಅರಣ್ಯಾಧಿಕಾರಿಗಳು ಪ್ರತಿಭಟನೆ ನಡೆಸಿದರು.
ನಗರದ ಮಲ್ಲೇಶ್ವರಂನಲ್ಲಿರುವ ಅರಣ್ಯಭವನದಲ್ಲಿ ಆರ್‌ಎಫ್‌ಒಗಳ ಸಂಘದ ಅಧ್ಯಕ್ಷ ಚಂದ್ರಶೇಖರರೆಡ್ಡಿ ಹಾಗೂ ಪ್ರಧಾನ ಕಾರ್ಯದರ್ಶಿ ಕಿರಣ್ ನೇತೃತ್ವದಲ್ಲಿ ರಾತ್ರಿವರೆಗೂ ಪ್ರತಿಭಟನೆ ನಡೆಸಿದರು.
ಬಂಡೀಪುರ ವ್ಯಾಪ್ತಿಯಲ್ಲಿ ಕೆಲ ದಿನಗಳಿಂದ ಹುಲಿ ದಾಳಿ, ಸೆರೆ ಪ್ರಕರಣಗಳು ನಡೆದಿವೆ. ಹುಲಿ ಸೆರೆ ಹಿಡಿಯುವ ವೇಳೆ ವಲಯ ಅರಣ್ಯಾಧಿಕಾರಿ ಹಾಗೂ ಕೆಳ ಹಂತದ ಸಿಬ್ಬಂದಿ ಸ್ಥಳದಲ್ಲಿದ್ದು ಕಾರ್ಯಾಚರಣೆ ನಡೆಸುವ ಜತೆಗೆ ಜನರನ್ನು ನಿಯಂತ್ರಿಸುವ ಸ್ಥಿತಿಯಿದೆ. ಈ ವೇಳೆ ಆರ್‌ಎಫ್‌ಒ ಮೇಲೆ ದಾಳಿಯಾಗಿ ಆಸ್ಪತ್ರೆಗೆ ದಾಖಲಾದರೂ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಸಾಂತ್ವನ ಹೇಳುತ್ತಿಲ್ಲ. ಚಿರತೆ ದಾಳಿಯಿಂದ ಗಾಯಗೊಂಡ ಸಿಬ್ಬಂದಿಯನ್ನೂ ಯಾರೂ ಭೇಟಿ ಮಾಡಿಲ್ಲ ಎಂದು ಆರೋಪಿಸಿದರು.
ಮನವಿ ಸ್ವೀಕರಿಸಲು ಅರಣ್ಯ ಸಚಿವರೂ ಬರಲಿಲ್ಲ. ಅರಣ್ಯ ಪಡೆಗಳ ಮುಖ್ಯಸ್ಥರು ಬರುತ್ತಿಲ್ಲ. ಸರಿಯಾದ ಜೀಪ್ ವ್ಯವಸ್ಥೆಯಿಲ್ಲ. ಗನ್‌ಗಳು ಕೂಡ ಸರಿಯಾಗಿಲ್ಲ. ರೈತಸಂಘದವರು ಮನಸೋ ಇಚ್ಛೆ ಟೀಕಿಸುತ್ತಲೇ ಇದ್ದಾರೆ. ಪರಿಸ್ಥಿತಿ ಹೀಗಿದ್ದರೂ ನಮ್ಮ ಕಷ್ಟಗಳನ್ನು ಇಲಾಖೆ ಮುಖ್ಯಸ್ಥರು ಕೇಳದೇ ಇದ್ದರೆ ಕೆಲಸ ಮಾಡುವುದು ಹೇಗೆ ಎಂದು ಪ್ರಶ್ನಿಸಿದರು.
ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ(ಸಂಶೋಧನೆ) ಬಿ.ಪಿ.ರವಿ, ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ(ಸಮನ್ವಯ) ಕುಮಾರಪುಷ್ಕರ್ ಆಗಮಿಸಿ ಬೇಡಿಕೆ ಪರಿಶೀಲಿಸುವುದಾಗಿ ಹೇಳಿದರೂ ಅದಕ್ಕೆ ಆರ್‌ಎಫ್‌ಒಗಳು ಒಪ್ಪಲಿಲ್ಲ.
ಅರಣ್ಯ ಪಡೆಗಳ ಮುಖ್ಯಸ್ಥರು ನಮ್ಮನ್ನು ಭೇಟಿ ಮಾಡಿಲ್ಲ. ನಮ್ಮ ಹೋರಾಟ ಮಂಗಳವಾರವೂ ಮುಂದುವರಿಯಲಿದ್ದು, ಉಪವಲಯ ಅರಣ್ಯಾಧಿಕಾರಿಗಳು, ಅರಣ್ಯ ರಕ್ಷಕರ ಸಂಘವೂ ಬೆಂಬಲ ಸೂಚಿಸಲಿದ್ದಾರೆ ಎಂದು ಸಂಘಟಕರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.