ADVERTISEMENT

ಅರಣ್ಯ ಸಂರಕ್ಷಣೆ: ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡ ಉಪಲೋಕಾಯುಕ್ತ ನ್ಯಾಯಮೂರ್ತಿ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2025, 15:47 IST
Last Updated 24 ಅಕ್ಟೋಬರ್ 2025, 15:47 IST
   

ಬೆಂಗಳೂರು: ಅರಣ್ಯ ಪ್ರದೇಶಗಳ ಸಂರಕ್ಷಣೆ, ಅಭಿವೃದ್ಧಿ ಕುರಿತಾಗಿ ರಾಜ್ಯದ 16 ಜಿಲ್ಲೆಗಳ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಮತ್ತು ವಲಯ ಅರಣ್ಯಾಧಿಕಾರಿಗಳ ವಿರುದ್ಧ ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಅವರು ಸ್ವಯಂಪ್ರೇರಿತ ದೂರು ದಾಖಿಸಿಕೊಂಡಿದ್ದಾರೆ.

ಅರಣ್ಯ ಒತ್ತುವರಿ ತೆರವು, ಹಸಿರು ಹೊದಿಕೆ ಸಂರಕ್ಷಣೆ ಮತ್ತು ಅಭಿವೃದ್ಧಿ, ಈ ಎಲ್ಲ ಕಾರ್ಯಗಳಿಗಾಗಿ ಮೂರು ವರ್ಷಗಳಲ್ಲಿ ಮಾಡಿದ ವೆಚ್ಚ ಮತ್ತಿತರ ವಿವರಗಳನ್ನು ಸಲ್ಲಿಸಿ ಎಂದು ಸೂಚಿಸಿದ್ದಾರೆ.

ಬೆಂಗಳೂರು ಗ್ರಾಮಾಂತರ, ಬೀದರ್‌, ಬಳ್ಳಾರಿ, ಬಾಗಲಕೋಟೆ, ಬೆಳಗಾವಿ, ದಕ್ಷಿಣ ಕನ್ನಡ, ದಾವಣಗೆರೆ, ಹಾವೇರಿ, ಕಲಬುರಗಿ, ಕೊಪ್ಪಳ, ಕೋಲಾರ, ಮಂಡ್ಯ, ರಾಯಚೂರು, ತುಮಕೂರು, ವಿಜಯನಗರ ಮತ್ತು ಉಡುಪಿ ಜಿಲ್ಲಾ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಮತ್ತು ವಲಯ ಅರಣ್ಯಾಧಿಕಾರಿಗಳ ವಿರುದ್ಧ 16 ಸ್ವಯಂಪ್ರೇರಿತ ದೂರು ದಾಖಲಿಸಿದ್ದಾರೆ.

ADVERTISEMENT

ದೂರುಗಳ ಪ್ರತಿಯನ್ನು ಅರಣ್ಯ ಸಚಿವ, ಆಯಾ ಜಿಲ್ಲಾ ಉಸ್ತುವಾರಿ ಸಚಿವರು, ಆಯಾ ಜಿಲ್ಲಾಧಿಕಾರಿ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯಕಾರ್ಯದರ್ಶಿಗೆ ಕಳುಹಿಸಿ ಎಂದು ಸೂಚಿಸಿದ್ದಾರೆ. 

ಉಪಲೋಕಾಯುಕ್ತರು ಕೇಳಿದ ಮಾಹಿತಿ...

ವಲಯ ಅರಣ್ಯಾಧಿಕಾರಿ ಮತ್ತು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು
ಈ ಮುಂದಿನ ಮಾಹಿತಿ ನೀಡಬೇಕು ಎಂದು ಉಪ ಲೋಕಾಯುಕ್ತರು ಸೂಚಿಸಿದ್ದಾರೆ.

  • ಅರಣ್ಯಗಳು ನೈಸರ್ಗಿಕವಾಗಿಯೇ ಅಭಿವೃದ್ಧಿಯಾಗಿದ್ದರ ಮತ್ತು ನಾಶವಾದುದರ ಹೆಕ್ಟೇರ್‌ವಾರು ದತ್ತಾಂಶ

  • ಅರಣ್ಯ ಜಾಗೃತ ದಳ ಸ್ಥಳ ಪರಿಶೀಲನೆ ನಡೆಸಿದ ಮತ್ತು ಸಂಬಂಧಿಸಿದ ವರದಿಯ ವಿವರ

  • ಅರಣ್ಯ ಪ್ರದೇಶದಲ್ಲಿ ಹೊಸದಾಗಿ ನೆಡಲಾದ ಗಿಡ, ಅವುಗಳ ನಿರ್ವಹಣೆ ಲೆಕ್ಕಪತ್ರ

  • ಸಸಿ ನೆಡಲು ಸರ್ಕಾರದಿಂದ ಮಂಜೂರಾದ ಮತ್ತು ಬಳಕೆಯಾದ ಅನುದಾನದ ದತ್ತಾಂಶ

  • ತಾಲ್ಲೂಕುವಾರು ಡೀಮ್ಡ್‌ ಮತ್ತು ಪ್ರಾದೇಶಿಕ ಅರಣ್ಯ ಸಂರಕ್ಷಣಾ ಕ್ರಮ

  • ಅಕ್ರಮ ಕಲ್ಲು ಮತ್ತು ಮರಳು ಗಣಿಗಾರಿಕೆ ಪ್ರಕರಣಗಳು ಹಾಗೂ ಅವುಗಳ ತಡೆಗೆ ತೆಗೆದುಕೊಂಡ ಕ್ರಮ

  • ಕಾಳ್ಗಿಚ್ಚು ತಡೆಗೆ ರಚಿಸಿದ ಬೆಂಕಿ ರೇಖೆ, ಜನರಲ್ಲಿ ಜಾಗೃತಿ ಮೂಡಿಸಲು ನಡೆಸಿದ ಕಾರ್ಯಕ್ರಮಗಳ ವಿವರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.