
ಈಶ್ವರ ಬಿ. ಖಂಡ್ರೆ
ಪ್ರಜಾವಾಣಿ ವಾರ್ತೆ
ಬೆಂಗಳೂರು: ಅರಣ್ಯ ಇಲಾಖೆಯ ಜಾಗೃತ ದಳ ವಿಭಾಗದ ಪ್ರಗತಿ ಪರಿಶೀಲನಾ ಸಭೆಯನ್ನು ನಿಯಮಿತವಾಗಿ ನಡೆಸಬೇಕು ಎಂದು ವನ್ಯಜೀವಿ ಸಂರಕ್ಷಣಾ ಕಾರ್ಯಕರ್ತ ಗಿರಿಧರ್ ಕುಲಕರ್ಣಿ ಅವರು ಅರಣ್ಯ ಸಚಿವ ಈಶ್ವರ ಖಂಡ್ರೆ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.
ರಾಜ್ಯದಲ್ಲಿ 11 ಅರಣ್ಯ ಜಾಗೃತ ದಳಗಳು ಕಾರ್ಯ ನಿರ್ವಹಿಸುತ್ತಿವೆ. ಇಲಾಖೆಗೆ ಬರುವ ದೂರುಗಳು ಮತ್ತು ಪ್ರಕರಣಗಳ ಬಗ್ಗೆ ಜಾಗೃತ ದಳಗಳು ತನಿಖೆ ನಡೆಸುತ್ತವೆ. ಆದರ, ಜಾಗೃತ ದಳಗಳು ನೀಡಿರುವ ವರದಿಗಳು ದೂಳು ಹಿಡಿದು ಕುಳಿತಿವೆ. ಬಹುತೇಕ ಪ್ರಕರಣಗಳಲ್ಲಿ ಯಾವುದೇ ಕ್ರಮ ಜರುಗಿಸುತ್ತಿಲ್ಲ. ಬಹಳ ಸಮಯದಿಂದ ಪ್ರಗತಿ ಪರಿಶೀಲನಾ ಸಭೆ ನಡೆದಿಲ್ಲ. ಆದ್ದರಿಂದ ಪ್ರಗತಿ ಪರಿಶೀಲನೆ ನಡೆಸುವ ಅಗತ್ಯವಿದೆ ಎಂದು ಅವರು ಪತ್ರದಲ್ಲಿ ಹೇಳಿದ್ದಾರೆ.
ಅರಣ್ಯ ಇಲಾಖೆಯಲ್ಲಿ ಜಾಗೃತ ದಳವು ಬಹುಮುಖ್ಯವಾದ ವಿಭಾಗ. ಹೆಚ್ಚುವರಿ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ (ಜಾಗೃತ) ಮುಖ್ಯಸ್ಥರಾಗಿದ್ದು, ಇವರ ಸಹಾಯಕರಾಗಿ ಅರಣ್ಯ ಸಂರಕ್ಷಣಾಧಿಕಾರಿ ಕಾರ್ಯನಿರ್ವಹಿಸುತ್ತಾರೆ. ಇಲಾಖೆ ಸ್ವೀಕರಿಸಿದ ವಿವಿಧ ದೂರು ಅರ್ಜಿಗಳ ತನಿಖೆ, ತಪ್ಪು ಮಾಡಿದ ಅಧಿಕಾರಿಗಳು ಮತ್ತು ಸಿಬ್ಬಂದಿ ವಿರುದ್ಧ ಬರುವ ದೂರುಗಳ ಸತ್ಯಾಸತ್ಯತೆ ಪರಿಶೀಲಿಸಿ ಮುಂದಿನ ಕ್ರಮಕ್ಕೆ ಮೇಲಧಿಕಾರಿಗಳಿಗೆ ಶಿಫಾರಸು ಮಾಡಲಾಗುತ್ತದೆ ಎಂದಿದ್ದಾರೆ.
ಬಾಕಿ ಇರುವ ಎಲ್ಲ ದೂರುಗಳು ಮತ್ತು ಪ್ರಕರಣಗಳ ಕುರಿತು ಕಾಲಮಿತಿಯಲ್ಲಿ ತನಿಖೆ ನಡೆಸಿ, ತಪ್ಪಿತಸ್ಥ ಅಧಿಕಾರಿಗಳು ಮತ್ತು ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲು ಶಿಸ್ತು ಪ್ರಾಧಿಕಾರಗಳಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಅವರು ಕೋರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.