ಬೆಂಗಳೂರು: ಅರಣ್ಯ ಹಕ್ಕು ಕಾಯ್ದೆ-2006ರ ಪ್ರಕಾರ ಅರಣ್ಯ ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸುವ ಕಾರ್ಯವನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಸೂಚಿಸಿದರು.
ಶರಾವತಿ ಹಾಗೂ ಇತರೆ ಯೋಜನೆಗಳ ಮುಳುಗಡೆ ಸಂತ್ರಸ್ತರು, ಪಾರಂಪರಿಕ ಅರಣ್ಯ ವಾಸಿಗಳು ಮತ್ತು ಅರಣ್ಯ–ಕಂದಾಯ ಭೂ ಹಕ್ಕುಗಳ ಸಮಸ್ಯೆಗಳ ಪರಿಹಾರಕ್ಕಾಗಿ ಕರೆಯಲಾಗಿದ್ದ ಜನಪ್ರತಿನಿಧಿಗಳು, ಉನ್ನತಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಕರ್ನಾಟಕ ಅರಣ್ಯ ಕಾಯ್ದೆ 1963ರ ಪ್ರಕಾರ ಮೀಸಲು ಅರಣ್ಯದ ಅಂತಿಮ ಅಧಿಸೂಚನೆಗೆ ಕಾಲಮಿತಿ ನಿಗದಿಪಡಿಸಬೇಕು. ಅನುಮೋದನೆ ನೀಡಬೇಕು. ಶಿವಮೊಗ್ಗ ಜಿಲ್ಲೆಯ ಸೊಪ್ಪಿನ ಬೆಟ್ಟ, ಕಾನು ಭೂಮಿಗಳ ಅನಧಿಕೃತ ಸಾಗುವಳಿ ಸಕ್ರಮಗೊಳಿಸುವಿಕೆ, ಹಂಗಾಮಿ ಮನೆಗಳಿಗೆ ಕಾಯಂ ಹಕ್ಕುಪತ್ರ ನೀಡಲು ಅಗತ್ಯ ಕ್ರಮ ಕೈಗೊಳ್ಳಬೇಕು. ಕಂದಾಯ ದಾಖಲೆಗಳಲ್ಲಿ ತಪ್ಪಾಗಿ ನಮೂದಿಸಲಾಗಿರುವ ಸೂಚಿತ ಅರಣ್ಯ ಉಲ್ಲೇಖವನ್ನು ಕೈಬಿಡಬೇಕು ಎಂದು ಹೇಳಿದರು.
ಹಿಂದೆ ಮೈಸೂರು ಸರ್ಕಾರ ನೀಡಿದ್ದ ಹಕ್ಕುಪತ್ರಗಳಿಗೆ ಇ-ಸ್ವತ್ತು ದಾಖಲೆ ಸೃಜಿಸುವುದು, ಶರಾವತಿ ಸೇರಿದಂತೆ ಸರ್ಕಾರದ ವಿವಿಧ ನೀರಾವರಿ ಹಾಗೂ ವಿದ್ಯುತ್ ಯೋಜನೆಗಳ ಮುಳುಗಡೆ ಸಂತ್ರಸ್ತರ ಪುನರ್ವಸತಿ ಜಮೀನುಗಳನ್ನು ಅರಣ್ಯ ಭೂಮಿ ಇಂಡೀಕರಣ ಪ್ರಸ್ತಾವನೆಯಿಂದ ಕೈಬಿಡುವುದು, 1978ರ ಪೂರ್ವದ ಮೂರು ಎಕರೆ ಅರಣ್ಯ ಭೂಮಿಯನ್ನು ಸಕ್ರಮಗೊಳಿಸುವ ಕುರಿತು ತ್ವರಿತ ಕ್ರಮಕೈಗೊಳ್ಳುವಂತೆ ಸೂಚಿಸಿದರು.
ವಾರಾಹಿ, ಚಕ್ರ, ಸಾವೆಹಕ್ಲು, ಭದ್ರಾ, ತುಂಗಾ ಹಾಗೂ ಇತರೆ ಯೋಜನೆಗಳ ಮುಳುಗಡೆ ಸಂತ್ರಸ್ತರ ಭೂ ಹಕ್ಕಿನ ಸಮಸ್ಯೆಗಳು ಹಾಗೂ 5 ಗುಂಟೆ ಒಳಗಿನ ವಿಸ್ತೀರ್ಣದ ಕಂದಾಯ ನಿವೇಶನವನ್ನು ಭೂ ಪರಿವರ್ತನೆ ಮಾಡುವ ಕುರಿತು ಸೂಕ್ತ ಪ್ರಸ್ತಾವ ಸಲ್ಲಿಸುವಂತೆ ಸಲಹೆ ನೀಡಿದರು.
ಶಾಸಕರಾದ ಗೋಪಾಲಕೃಷ್ಣ ಬೇಳೂರು, ಶಾರದಾ ಪೂರ್‍ಯಾ ನಾಯ್ಕ, ವಿಧಾನ ಪರಿಷತ್ ಸದಸ್ಯೆ ಬಲ್ಕೀಸ್ ಬಾನು, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಗ್ರಾಮೀಣಾಭಿವೃದ್ಧಿ ಇಲಾಖೆ ಮುಖ್ಯಕಾರ್ಯದರ್ಶಿ ಅಂಜುಂ ಪರ್ವೇಜ್, ಹಿರಿಯ ವಕೀಲ ಬಿ.ಎ. ರಮೇಶ್ ಹೆಗ್ಡೆ, ಜಯಂತ್, ಶೇಖರ್ ಉಪಸ್ಥಿತರಿದ್ದರು.
ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿದ್ದಾರೆ. ದಶಕಗಳಿಂದ ನನೆಗುದಿಗೆ ಬಿದ್ದಿರುವ ಮುಳುಗಡೆ ಸಂತ್ರಸ್ತರು ಅರಣ್ಯವಾಸಿಗಳ ಸಮಸ್ಯೆಗೆ ಶೀಘ್ರ ಪರಿಹಾರ ಸಿಗಲಿದೆಮಧು ಬಂಗಾರಪ್ಪ ಶಾಲಾ ಶಿಕ್ಷಣ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.