ADVERTISEMENT

ಶಾಸಕರು, ಮುಖಂಡರ ಸಭೆಯಲ್ಲಿ ಮೂಡದ ಒಮ್ಮತ: ವಿಜಯನಗರ ಜಿಲ್ಲೆ ರಚನೆ ಸದ್ಯಕ್ಕಿಲ್ಲ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2019, 19:59 IST
Last Updated 2 ಅಕ್ಟೋಬರ್ 2019, 19:59 IST
ಮುಖ್ಯಮಂತ್ರಿ  ಬಿ.ಎಸ್‌.ಯಡಿಯೂರಪ್ಪ  ಅವರು ಬಳ್ಳಾರಿ ಜಿಲ್ಲೆಯ ಶಾಸಕರು ಮತ್ತು ಸಂಸದರನ್ನು ಭೇಟಿಯಾಗಿ ನೂತನವಾಗಿ ವಿಜಯನಗರ ಜಿಲ್ಲೆಯ ಘೋಷಣೆ  ಕುರಿತು  ಚರ್ಚಿಸಿದರು.
ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಬಳ್ಳಾರಿ ಜಿಲ್ಲೆಯ ಶಾಸಕರು ಮತ್ತು ಸಂಸದರನ್ನು ಭೇಟಿಯಾಗಿ ನೂತನವಾಗಿ ವಿಜಯನಗರ ಜಿಲ್ಲೆಯ ಘೋಷಣೆ ಕುರಿತು ಚರ್ಚಿಸಿದರು.    

ಬೆಂಗಳೂರು: ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿ ವಿಜಯನಗರ ಜಿಲ್ಲೆ ರಚನೆಗೆ ಬಿಜೆಪಿ ಶಾಸಕರ ನಡುವೆ ಒಮ್ಮತ ಮೂಡದ ಕಾರಣ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಯಾವುದೇ ನಿರ್ಧಾರ ಕೈಗೊಳ್ಳಲಿಲ್ಲ.

ಉಪಚುನಾವಣೆ ನಂತರ ಮತ್ತೆ ಸಭೆ ನಡೆಸಿ ಶಾಸಕರ ಜತೆಗೆ ಸಮಗ್ರವಾಗಿ ಚರ್ಚಿಸಿ ನಿರ್ಧಾರ ಕೈಗೊಳ್ಳಲು ಯಡಿಯೂರಪ್ಪ ನಿರ್ಧರಿಸಿದ್ದಾರೆ. ಹೊಸಜಿಲ್ಲೆ ರಚನೆ ಸಂಬಂಧ ಬಳ್ಳಾರಿ ಜಿಲ್ಲೆ ಶಾಸಕರು ಹಾಗೂ ಮುಖಂಡರ ಸಭೆಯನ್ನು ಬುಧವಾರ ಮುಖ್ಯಮಂತ್ರಿ ಕರೆದಿದ್ದರು.

ಅನರ್ಹ ಶಾಸಕ ಆನಂದ್ ಸಿಂಗ್ ವಿಜಯನಗರ ಜಿಲ್ಲೆ ರಚನೆಗೆ ಒತ್ತಾಯಿಸಿದರೆ, ಬಿಜೆಪಿ ಶಾಸಕರಾದ ಜಿ.ಸೋಮಶೇಖರರೆಡ್ಡಿ, ಜಿ.ಕರುಣಾಕರ ರೆಡ್ಡಿ ಸೇರಿದಂತೆ ಜಿಲ್ಲೆಯ ಇತರ ಮುಖಂಡರು ಹೊಸ ಜಿಲ್ಲೆ ರಚನೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.

ADVERTISEMENT

‘ಜಿಲ್ಲೆಯನ್ನು ವಿಭಜಿಸುವುದು ಬೇಡ. ಬೇಕಿದ್ದರೆ ಬಳ್ಳಾರಿ ಹೆಸರಿನ ಬದಲು ವಿಜಯನಗರ ಜಿಲ್ಲೆ ಎಂದು ನಾಮಕರಣ ಮಾಡಬಹುದು’ ಎಂದು ಬಹುತೇಕ ಶಾಸಕರು ಸಭೆಯಲ್ಲಿ ಸಲಹೆ ಮಾಡಿದ್ದಾರೆ. ಒಂದು ಹಂತದಲ್ಲಿ ಸೋಮಶೇಖರರೆಡ್ಡಿ ಏರುಧ್ವನಿಯಲ್ಲೇ ಆಕ್ಷೇಪ ವ್ಯಕ್ತಪಡಿಸಿ, ಜಿಲ್ಲೆ ಪ್ರತ್ಯೇಕಿಸಲು ವಿರೋಧಿಸಿದರು ಎಂದು ಮೂಲಗಳು ತಿಳಿಸಿವೆ.

ಪರ–ವಿರೋಧ ಚರ್ಚೆ ಕಾವೇರಿದಾಗ ಯಡಿಯೂರಪ್ಪ ಎಲ್ಲರನ್ನೂ ಸಮಾಧಾನಪಡಿಸಿ ‘ಈಗ ಯಾವುದೇ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ. ಉಪಚುನಾವಣೆ ನಂತರ ನಿಮ್ಮನ್ನೆಲ್ಲ ಕರೆದು ಚರ್ಚಿಸುತ್ತೇನೆ’ ಎಂದು ಹೇಳಿ ಸಭೆಯನ್ನು ಮುಂದೂಡಿದ್ದಾರೆ.

ಅನರ್ಹ ಶಾಸಕ ಆನಂದ್ ಸಿಂಗ್ ವಿಜಯನಗರ ಜಿಲ್ಲೆ ರಚನೆಗೆ ಒತ್ತಾಯಿಸುತ್ತಾ ಬಂದಿದ್ದು, ಇದೇ ಕಾರಣವನ್ನು ಮುಂದಿಟ್ಟುಕೊಂಡು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಬಿಜೆಪಿ ಸರ್ಕಾರ ರಚನೆಯಾದ ನಂತರ ಜಿಲ್ಲೆ ರಚನೆಗೆ ಆಗ್ರಹಿಸಿ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದಾರೆ.

ಈಗ ತಮ್ಮ ಪಕ್ಷದಶಾಸಕರಿಂದಲೇ ವಿರೋಧ ವ್ಯಕ್ತವಾಗಿದ್ದು, ಮುಖ್ಯಮಂತ್ರಿಗೆ ಹೊಸ ಜಿಲ್ಲೆ ರಚನೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಆನಂದ್ ಸಿಂಗ್ ಒತ್ತಡಕ್ಕೆ ಮಣಿಯಬೇಕೊ, ಇಲ್ಲವೆ ಪಕ್ಷದ ಶಾಸಕರ ನಿಲುವಿಗೆ ಸಹಮತ ವ್ಯಕ್ತಪಡಿಸಬೇಕೊ ಎಂಬ ಗೊಂದಲಕ್ಕೆ ಸಿಲುಕಿದ್ದಾರೆ.

ಹೊಸ ಜಿಲ್ಲೆ ವಿಚಾರ ಪ್ರಸ್ತಾಪವಾಗುತ್ತಿದ್ದಂತೆ ಶಾಸಕ ಜಿ.ಪರಮೇಶ್ವರ ಅವರು ಮುಖ್ಯಮಂತ್ರಿಗೆ ಪತ್ರ ಬರೆದು ತುಮಕೂರು ಜಿಲ್ಲೆಯನ್ನು ವಿಭಜಿಸಿ ಹೊಸದಾಗಿ ಮಧುಗಿರಿ ಜಿಲ್ಲೆ ರಚಿಸುವಂತೆ ಒತ್ತಾಯಿಸಿದ್ದರು. ತುಮಕೂರು ಭೌಗೋಳಿಕವಾಗಿ ದೊಡ್ಡ ಜಿಲ್ಲೆಯಾಗಿದ್ದು, ವಿಭಜಿಸಿದರೆ ಆಡಳಿತ ನಡೆಸಲು ಸುಸೂತ್ರವಾಗುತ್ತದೆ ಎಂದು ಸಲಹೆ ಮಾಡಿದ್ದರು.

ಬಳ್ಳಾರಿ ಜಿಲ್ಲೆಗಿಂತ ಮೊದಲು ಬೆಳಗಾವಿ ಜಿಲ್ಲೆ ವಿಭಜಿಸುವಂತೆ ಆ ಭಾಗದ ಜನಪ್ರತಿನಿಧಿಗಳು ಒತ್ತಾಯಿ
ಸಿದ್ದರು. ರಾಜ್ಯದಲ್ಲಿ ಇತರ ಎಲ್ಲ ಜಿಲ್ಲೆಗಳಿಗಿಂತ ಬೆಳಗಾವಿ ಜಿಲ್ಲೆ ವಿಸ್ತಾರದಲ್ಲಿ ದೊಡ್ಡದಿದ್ದು, ಮೊದಲು ನಮ್ಮ ಜಿಲ್ಲೆ ವಿಭಜಿಸಬೇಕು. ಸಾಕಷ್ಟು ಹಿಂದಿನಿಂದಲೂ ಪ್ರತ್ಯೇಕ ಜಿಲ್ಲೆಗೆ ಬೇಡಿಕೆ ಸಲ್ಲಿಸುತ್ತಲೇ ಬಂದಿದ್ದೇವೆ. ಆದರೆ ಬೆಳಗಾವಿ ಬಿಟ್ಟು ಬಳ್ಳಾರಿ ವಿಭಜನೆಗೆ ಮುಂದಾಗಿರುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು. ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಸಹ ಬೆಳಗಾವಿಜಿಲ್ಲೆ ಪ್ರತ್ಯೇಕಿಸಲು ಆಗ್ರಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.