ADVERTISEMENT

ಐವನ್ ಡಿಸೋಜಗೆ ಕೋವಿಡ್: ಸ್ವಯಂ‌ ಕ್ವಾರಂಟೈನ್‌ಗೆ ಒಳಗಾದ ಖಾದರ್

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2020, 8:19 IST
Last Updated 2 ಆಗಸ್ಟ್ 2020, 8:19 IST
ವಿಧಾನ ಪರಿಷತ್‌ನ ಮಾಜಿ ಸದಸ್ಯ ಐವನ್‌ ಡಿಸೋಜ
ವಿಧಾನ ಪರಿಷತ್‌ನ ಮಾಜಿ ಸದಸ್ಯ ಐವನ್‌ ಡಿಸೋಜ   

ಮಂಗಳೂರು: ಕೊರೊನಾ ಸೋಂಕು ದೃಢಪಟ್ಟ ವಿಧಾನ ಪರಿಷತ್‌ನ ಮಾಜಿ ಸದಸ್ಯ ಐವನ್‌ ಡಿಸೋಜ ಅವರ ಪ್ರಾಥಮಿಕ ಸಂಪರ್ಕ ಹೊಂದಿದ್ದ ಶಾಸಕ ಯು.ಟಿ. ಖಾದರ್‌ ಸ್ವಯಂ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ.

ಈ ಬಗ್ಗೆ ಸ್ವತಃ ಅವರೇ ಟ್ವೀಟ್‌ ಮಾಡಿದ್ದು, 'ಮಾಜಿ ಶಾಸಕ ಐವನ್ ಡಿಸೋಜ ಹಾಗೂ ಲಕ್ಷಾಂತರ ಮಂದಿ ಕೋವಿಡ್ ಸೋಂಕಿತರಾಗಿರಾಗಿದ್ದಾರೆ. ಇವರೆಲ್ಲರೂ ಶೀಘ್ರದಲ್ಲೇ ಗುಣಮುಖರಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಕೆಲ ದಿನಗಳಿಂದ ಐವನ್ ಡಿಸೋಜ ಅವರ ಜೊತೆ ಪ್ರಾಥಮಿಕ‌ ಸಂಪರ್ಕದಲ್ಲಿದ್ದ ಕಾರಣ ನಾನು ಕೆಲ‌ವು ದಿನಗಳ ಕಾಲ ಸ್ವಯಂ‌ ನಿರ್ಬಂಧ ಹಾಕಿಕೊಂಡಿದ್ದೇನೆ' ಎಂದು ಹೇಳಿದ್ದಾರೆ.

'ಹೀಗಾಗಿ ಇಂದು ನಿಗದಿಯಾಗಿದ್ದ ಜನಸಾಮಾನ್ಯರ ಭೇಟಿ, ಕ್ಷೇತ್ರದ ಅಭಿವೃದ್ದಿ ಬಗ್ಗೆ ಜಿಲ್ಲಾಧಿಕಾರಿಗಳ ಜೊತೆಗಿನ ಸಭೆ, ಕ್ಷೇತ್ರದಲ್ಲಿ‌ ನಿಗದಿಯಾಗಿದ್ದ ವಿವಿಧ ಕಾರ್ಯಕ್ರಮಗಳು ಮುಂದೂಡಲ್ಪಟ್ಟಿದ್ದೆ. ಜನ ಸಾಮಾನ್ಯರ ಸೇವೆಗೆ ದೂರವಾಣಿ ಮೂಲಕ‌ ಲಭ್ಯವಿದ್ದು, ಅಗತ್ಯವಿದ್ದಲ್ಲಿ ನೇರವಾಗಿ ದೂರವಾಣಿ ಮೂಲಕ ನನ್ನನ್ನು ಎಂದಿನಂತೆ ಸಂಪರ್ಕಿಸಬಹುದಾಗಿದೆ' ಎಂದು ತಿಳಿಸಿದ್ದಾರೆ.

ADVERTISEMENT

'ಇದೇ ವೇಳೆ ಐವನ್ ಡಿಸೋಜ ಜೊತೆಗೆ ಪ್ರಾಥಮಿಕ ಸಂಪರ್ಕಿತದಲ್ಲಿದ್ದವರು ಕೆಮ್ಮು ಜ್ವರ ಮುಂತಾದ ಲಕ್ಷಣ ಕಂಡು ಬಂದಲ್ಲಿ ತಕ್ಷಣ ಪರೀಕ್ಷೆಗೆ ಒಳಗಾಗುವಂತೆ ಮನವಿ ಮಾಡುತ್ತೇನೆ' ಎಂದು ಹೇಳಿದ್ದಾರೆ.

ಪತ್ರಕರ್ತರಿಗೂ ಆತಂಕ: ಐವನ್ ಡಿಸೋಜ ಅವರಿಗೆ ಕೋವಿಡ್ ದೃಢಪಟ್ಟಿದ್ದು, ಜುಲೈ 31ರಂದು ಡಿ.ಕೆ.‌ ಶಿವಕುಮಾರ್ ಅವರೊಂದಿಗೆ ಐವನ್ ಕೂಡ ಇದ್ದರು. ಈ‌ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿರುವ ಪತ್ರಕರ್ತರಿಗೂ ಈಗ ಆತಂಕ ಎದುರಾಗಿದೆ.

ಈ ಕಾರ್ಯಕ್ರಮದಲ್ಲಿ ಕೆಲ ಪತ್ರಕರ್ತರು ಕೋವಿಡ್‌ ದೃಢವಾಗಿರುವ ಮಾಜಿ ಶಾಸಕರ ನಿಕಟ ಅಂತರದಲ್ಲಿ ಭಾಗವಹಿಸಿರುವ ಮಾಹಿತಿ ಬಂದಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಇವರ ಸಮೀಪ ಸಂಪರ್ಕಕ್ಕೆ ಹೋದ ಎಲ್ಲ ಪತ್ರಕರ್ತರು ಸ್ವಯಂ ಕ್ವಾರಂಟೈನ್ ಆಗುವಂತೆ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಮನವಿ‌ ಮಾಡಿದ್ದಾರೆ.

ಈ ಎಲ್ಲಾ ಪತ್ರಕರ್ತರು ತಮ್ಮ ಆರೋಗ್ಯ ಬಗ್ಗೆ ಗಮನಿಸಿ, ಏನಾದರೂ ಲಕ್ಷಣಗಳು ಕಂಡು ಬಂದಲ್ಲಿ ಆಸ್ಪತ್ರೆಯನ್ನು ತಕ್ಷಣ ಸಂಪರ್ಕಿಸಬೇಕು. ಹೊರಗಡೆ ಓಡಾಟ ಮಾಡಬಾರದು. ಆದರೆ ಯಾವುದೇ ಗಾಬರಿಪಡುವ ಅಗತ್ಯವಿಲ್ಲ. ಸಹಕರಿಸುವಂತೆ ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.