ಬೆಂಗಳೂರು: ಐಫೋನ್ ಮತ್ತು ಅದರ ಬಿಡಿಭಾಗಗಳ ತಯಾರಿಕೆಗೆ ಹೆಸರಾಗಿರುವ ಫಾಕ್ಸ್‌ಕಾನ್ ಕಂಪನಿಯ ಭಾರತದ ಮುಖ್ಯಸ್ಥ ರಾಬರ್ಟ್ ವೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜತೆ ಭಾನುವಾರ ಚರ್ಚೆ ನಡೆಸಿದರು.
ಭೇಟಿಯ ನಂತರ ಈ ಕುರಿತು ಮಾಹಿತಿ ನೀಡಿದ ಮುಖ್ಯಮಂತ್ರಿ, ‘ಫಾಕ್ಸ್‌ಕಾನ್ ಕಂಪನಿ ದೇವನಹಳ್ಳಿ ಘಟಕದಲ್ಲಿ ಉತ್ಪಾದನಾ ಚಟುವಟಿಕೆ ಆರಂಭಿಸಿದೆ. ಘಟಕ ವಿಸ್ತರಣೆ, ಮತ್ತಷ್ಟು ಬಂಡವಾಳ ಹೂಡಿಕೆ ಕುರಿತು ಮಾತುಕತೆ ನಡೆಸಿದ್ದೇವೆ. ಕಂಪನಿಗೆ ಅಗತ್ಯವಿರುವ ಎಲ್ಲ ರೀತಿಯ ಸಹಕಾರ ನೀಡಲಾಗುವುದು’ ಎಂದರು.
ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಮಾತನಾಡಿ, ‘ದೇವನಹಳ್ಳಿಯಲ್ಲಿರುವ ಘಟಕವು ಫಾಕ್ಸ್‌ಕಾನ್ ಕಂಪನಿಯ ಎರಡನೇ ಅತಿದೊಡ್ಡ ಘಟಕ. ₹ 22 ಸಾವಿರ ಕೋಟಿ ಹೂಡಿಕೆ ಮಾಡಲಾಗಿದೆ. ಆ್ಯಪಲ್ ಕಂಪನಿಗೆ ಐಫೋನ್ ಬಿಡಿಭಾಗಗಳನ್ನು ಜಾಗತಿಕ ಮಟ್ಟದಲ್ಲಿ ಪೂರೈಸುತ್ತದೆ. ದೇವನಹಳ್ಳಿಯಲ್ಲಿ ತಯಾರಾಗುವ ಉತ್ಪನ್ನಗಳನ್ನು ಹಲವು ದೇಶಗಳಿಗೆ ರಫ್ತು ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ, ಕೌಶಲಾಭಿವೃದ್ಧಿ ಸಚಿವ ಶರಣಪ್ರಕಾಶ ಪಾಟೀಲ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್. ಮುನಿಯಪ್ಪ, ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತೆ ಗುಂಜನ್ ಕೃಷ್ಣ, ಕರ್ನಾಟಕ ಉದ್ಯೋಗ ಮಿತ್ರ ವ್ಯವಸ್ಥಾಪಕ ನಿರ್ದೇಶಕ ದೊಡ್ಡ ಬಸವರಾಜು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.