ADVERTISEMENT

180 ವಿದ್ಯಾರ್ಥಿಗಳಿಗೆ ಉಚಿತ ಊಟ, ವಸತಿ: ಸಾಣೇಹಳ್ಳಿ ಮಠದ ಶಾಲೆಗೆ ಉಚಿತ ಪ್ರವೇಶ

ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 19 ಜೂನ್ 2021, 1:28 IST
Last Updated 19 ಜೂನ್ 2021, 1:28 IST
ಹೊಸದುರ್ಗ ತಾಲ್ಲೂಕಿನ ಸಾಣೇಹಳ್ಳಿಯಲ್ಲಿರುವ ಶಿವಕುಮಾರ ಸ್ವಾಮೀಜಿ ವಿದ್ಯಾರ್ಥಿ ನಿಲಯ
ಹೊಸದುರ್ಗ ತಾಲ್ಲೂಕಿನ ಸಾಣೇಹಳ್ಳಿಯಲ್ಲಿರುವ ಶಿವಕುಮಾರ ಸ್ವಾಮೀಜಿ ವಿದ್ಯಾರ್ಥಿ ನಿಲಯ   

ಸಾಣೇಹಳ್ಳಿ (ಹೊಸದುರ್ಗ): ತಾಲ್ಲೂಕಿನ ಸಾಣೇಹಳ್ಳಿ ತರಳಬಾಳು ಶಾಖಾ ಮಠದ ಆಶ್ರಯದಲ್ಲಿ ನಡೆಯುತ್ತಿರುವ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಈ ಬಾರಿ ಉಚಿತ ಪ್ರವೇಶ ನೀಡಲಾಗುವುದು.

‘2 ವರ್ಷಗಳಿಂದ ಸತತವಾಗಿ ಕಾಡುತ್ತಿರುವ ಕೋವಿಡ್ ಎಲ್ಲ ಕ್ಷೇತ್ರಗಳನ್ನು ಹೈರಾಣಾಗಿಸಿದೆ. ಆರ್ಥಿಕವಾಗಿ ಸುಸ್ಥಿತಿಯಲ್ಲಿದ್ದ ಅನೇಕ ಕುಟುಂಬಗಳು ಸೂಕ್ತ ವರಮಾನವಿಲ್ಲದೇ ಒಂದು ಹೊತ್ತಿನ ಊಟಕ್ಕೂ ಪರದಾಡುವಂತಾಗಿದೆ. ಹೀಗಾಗಿ ಶ್ರೀಮಠವನ್ನು ಆಶ್ರಯಿಸಿ ಬರುವವರ ಸಂಖ್ಯೆಯೂ ಹೆಚ್ಚಾಗಿದೆ. ಅದರಲ್ಲೂ ಪ್ರಾಥಮಿಕ ಮತ್ತುಪ್ರೌಢಶಾಲೆಗಳಿಗೆ ಮಕ್ಕಳನ್ನು ಸೇರಿಸುವ ಇಂಗಿತವನ್ನು ವ್ಯಕ್ತಪಡಿಸುವವರ ಸಂಖ್ಯೆ ಹೆಚ್ಚುತ್ತಿದೆ. ಹೀಗಾಗಿ ನಮ್ಮಲ್ಲಿರುವ ಭೌತಿಕ ಮತ್ತು ಮಾನವ ಸಂಪನ್ಮೂಲಗಳನ್ನು ದೃಷ್ಟಿಯಲ್ಲಿಟ್ಟುಕೊಂಡು5ರಿಂದ 10ನೇ ತರಗತಿಯವರೆಗಿನ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಪ್ರತಿ ತರಗತಿಗೆ 30 ವಿದ್ಯಾರ್ಥಿಗಳಂತೆ 180 ವಿದ್ಯಾರ್ಥಿಗಳಿಗೆ ಉಚಿತ ಊಟ, ವಸತಿ ನೀಡುವ ಸಂಕಲ್ಪಮಾಡಿದ್ದೇವೆ’ ಎಂದು ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ.

ಈಗಾಗಲೇ ₹ 30 ಲಕ್ಷವೆಚ್ಚದಲ್ಲಿ ಪ್ರಾಥಮಿಕ, ಪ್ರೌಢಶಾಲೆ ಮತ್ತು ಬಾಲಕಿಯರ ಮತ್ತು ಬಾಲಕರ ವಿದ್ಯಾರ್ಥಿ ನಿಲಯಗಳನ್ನು ದುರಸ್ತಿ ಮಾಡಿಸಿ ಸುಣ್ಣ, ಬಣ್ಣ ಮಾಡಿಸಲಾಗಿದೆ. ಶೈಕ್ಷಣಿಕ ಪ್ರಗತಿಗೆ ಸಿಬ್ಬಂದಿ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಕೈಲಾದ ಮಟ್ಟಿಗೆ ನೆರವಾಗುವುದು ಎಲ್ಲರ ಆದ್ಯ ಕರ್ತವ್ಯ. ಹೀಗಾಗಿ ಎಂದಿನಂತೆ ಮಠದ ಭಕ್ತರು, ಅನುಯಾಯಿ, ಅಭಿಮಾನಿಗಳು, ಹಳೆಯ ವಿದ್ಯಾರ್ಥಿಗಳು ಮೊದಲಾದವರೆಲ್ಲರೂ ಹಣದ ರೂಪದಲ್ಲಿ, ದವಸ–ಧಾನ್ಯ, ತರಕಾರಿ, ಶೈಕ್ಷಣಿಕ ಪರಿಕರಗಳ ರೂಪದಲ್ಲಿ ಸಹಾಯ ಮಾಡುವವರು ಮುಂದೆ ಬರಬೇಕಾಗಿದೆ.

ADVERTISEMENT

ಹಣದ ರೂಪದಲ್ಲಿ ಸಹಾಯ ಮಾಡುವವರು ಎಸ್‌ಬಿ ಖಾತೆ ಸಂಖ್ಯೆ: 10796101011119 (IFSC: PKGB0010796)ಗೆ ಆರ್‌ಟಿಜಿಎಸ್ ಅಥವಾ ನೆಫ್ಟ್‌ ಮೂಲಕ ವರ್ಗಾಯಿಸಬಹುದು. ಆದಾಯ ತೆರಿಗೆ ವಿನಾಯಿತಿಗೆ ಸಂಬಂಧಿಸಿ ‘80 ಜಿ’ ರಸೀದಿಯನ್ನು ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ಮೊ. 9663177254, 9741014115, 9972704696 ಸಂಪರ್ಕಿಸಬಹುದು ಎಂದು ಮಠದ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.