ADVERTISEMENT

ಹಳ್ಳಿಗರಿಗೆ ಸ್ವಂತ ಬಳಕೆಗಾಗಿ ಉಚಿತ ಮರಳು: ನಿರಾಣಿ

ಹೊಸ ನೀತಿಯಲ್ಲಿ ಬದಲಾವಣೆ: ಸಚಿವ ನಿರಾಣಿ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2021, 18:19 IST
Last Updated 10 ಫೆಬ್ರುವರಿ 2021, 18:19 IST
ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ ನಿರಾಣಿ
ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ ನಿರಾಣಿ   

ಬೆಂಗಳೂರು: ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ ಸಾರ್ವಜನಿಕರು ಸ್ವಂತ ಬಳಕೆಗೆ ಉಚಿತವಾಗಿ ಮರಳು ತೆಗೆಯಲು ಅವಕಾಶ ನೀಡುವ ಉದ್ದೇಶದಿಂದ ಕಾಯ್ದೆಗೆ ತಿದ್ದುಪಡಿ ತರಲಾಗುವುದು ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ ನಿರಾಣಿ ಹೇಳಿದರು.

ಇದರಿಂದ ಗ್ರಾಮೀಣ ಪ್ರದೇಶದಲ್ಲಿ ಆಶ್ರಯ ಮತ್ತು ಇತರ ಸಣ್ಣಪುಟ್ಟ ವಸತಿ ಯೋಜನೆಗಳಿಗೆ ಅನುಕೂಲವಾಗುತ್ತದೆ ಎಂದು ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಗಣಿ, ಅರಣ್ಯ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳಿಂದ ಆಗು ತ್ತಿರುವ ಕಿರುಕುಳವನ್ನು ತಪ್ಪಿಸುವುದು ಸರ್ಕಾರದ ಉದ್ದೇಶ ಎಂದರು.

ADVERTISEMENT

ಈ ರೀತಿ ತೆಗೆದ ಮರಳನ್ನು ಸ್ವಂತ ಮನೆ ಅಥವಾ ಕಟ್ಟಡಗಳಿಗೆ ಮಾತ್ರ ಉಪಯೋಗಿಸಬೇಕು. ಅದನ್ನು ಮಾರಾಟ ಮಾಡುವಂತಿಲ್ಲ. ಜಿಲ್ಲೆಯ ವ್ಯಾಪ್ತಿಯಲ್ಲಿ ಎತ್ತಿನ ಬಂಡಿ, ದ್ವಿಚಕ್ರ ವಾಹನ ಮತ್ತು ಕತ್ತೆಗಳ ಮೇಲೆ ಮಾತ್ರ ಸಾಗಿಸಬಹುದು. ಹೊರ ಜಿಲ್ಲೆಗಳಿಗೆ ಸಾಗಿಸುವುದಕ್ಕೆ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದರು.

ಮರಳು ಗಣಿಗಾರಿಕೆಗೆ ನಿಗದಿ ಮಾಡಿದ ಪ್ರದೇಶ ಬಿಟ್ಟು ಬೇರೆ ಕಡೆಯಲ್ಲಿ ಮರಳು ತೆಗೆಯಬಹುದು. ಹಳ್ಳ, ತೊರೆ
ಗಳಿಂದಲೂ ಮರಳು ತೆಗೆಯಬಹುದು. ಆದರೆ ಮರಳನ್ನು ಸಂಗ್ರಹಿಸಿಡುವಂತಿಲ್ಲ ಮತ್ತು ಮಾರುವುದಕ್ಕೆ ಅವಕಾಶವಿಲ್ಲ. ಮರಳು ತೆಗೆಯುವವರು ಗ್ರಾಮಪಂಚಾಯ್ತಿಗೆ ₹100 ಪಾವತಿಸಬೇಕು ಎಂದರು.

183 ಬ್ಲಾಕ್‌ಗಳಲ್ಲಿ ಮರಳು ತೆಗೆಯಲು ಅವಕಾಶ: ರಾಜ್ಯದಲ್ಲಿ ಒಟ್ಟು 183 ಬ್ಲಾಕ್‌ಗಳಲ್ಲಿ ಮಾತ್ರ ಮರಳು ತೆಗೆಯಲು ಅವಕಾಶ ನೀಡಲಾಗುವುದು. ಪ್ರತಿ ಟನ್‌ ಮರಳು ತೆಗೆಯಲು ₹300 ನಿಗದಿ ಮಾಡಲಾಗುವುದು. ಟಿಪ್ಪರ್‌, ಲಾರಿ ಮತ್ತಿತರ ವಾಹನಗಳಲ್ಲಿ ಮರಳು ಸಾಗಣೆ ಮಾಡಬಹುದು. ಇದರ ಮೇಲೆ ರಾಯಧನ ವಿಧಿಸಲಾಗುವುದು. ತಮ್ಮ ಜಿಲ್ಲೆಯಲ್ಲೇ ಮಾರಾಟ ಮಾಡಿ
ಕೊಳ್ಳಬಹುದು. ಆದರೆ, ನೆರೆಯ ಜಿಲ್ಲೆ ಮತ್ತು ರಾಜ್ಯಗಳಿಗೆ ಸಾಗಿಸುವಂತಿಲ್ಲ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.