ADVERTISEMENT

ತೈಲ ಬೆಲೆ ಏರಿಕೆ: ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್‌ ನಾಯಕರ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 9 ಜೂನ್ 2021, 11:08 IST
Last Updated 9 ಜೂನ್ 2021, 11:08 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಬೆಂಗಳೂರು: ‘ಕೋವಿಡ್‌ ಸಂಕಷ್ಟದ ಸಂದರ್ಭದಲ್ಲೂ ತೈಲದ ಮೇಲೆ ತೆರಿಗೆ ವಿಧಿಸಿ, ಕೇಂದ್ರ ಸರ್ಕಾರ ತೆರಿಗೆ ಭಯೋತ್ಪಾದನೆ ನಡೆಸುತ್ತಿದೆ’ ಎಂದು ಕಾಂಗ್ರೆಸ್‌ ಶಾಸಕ ಕೃಷ್ಣ ಬೈರೇಗೌಡ ಕಿಡಿಕಾರಿದರು.

ಪಕ್ಷದ ಮತ್ತೊಬ್ಬ ಶಾಸಕ ಪ್ರಿಯಾಂಕ್ ಖರ್ಗೆ ಜೊತೆ ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ‘ಮುಂದಿನ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ಮತ್ತೊಂದು ಭಾವನಾತ್ಮಕ ವಿಷಯ ತಂದು ಜನರ ಗಮನವನ್ನು ಬೇರೆಡೆ ಸೆಳೆಯುವ ಸಾಧ್ಯತೆ ಇದೆ. ಹಿಂದೆ, ಕಾಂಗ್ರೆಸ್ ಅವಧಿಯಲ್ಲಿ ಪೆಟ್ರೋಲ್ ಬೆಲೆ ಏರಿಕೆ ಆದಾಗ ಸೈಕಲ್ ಜಾಥಾ ಮಾಡಿದ್ದ ಬಿಜೆಪಿ ನಾಯಕರು. ಈಗ ಮಾತೇ ಆಡುತ್ತಿಲ್ಲ. ಹೀಗಾಗಿ, ಮುಖ್ಯಮಂತ್ರಿಗೆ ಸೈಕಲ್ ನೀಡಲಾಗುವುದು’ ಎಂದರು.

‘ನೆರೆ ರಾಷ್ಟ್ರಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಕಡಿಮೆ ಇದೆ. ಭಾರತದಿಂದ ತೈಲ ಆಮದು ಮಾಡಿಕೊಳ್ಳುತ್ತಿರುವ ಭೂತಾನ್ ದೇಶದಲ್ಲೂ ಇಲ್ಲಿಗಿಂತ ಕಡಿಮೆ ಬೆಲೆ ಇದೆ. ತೆರಿಗೆ ವಸೂಲಿ ಬೂತ್‌ಗಳಾಗಿ ಪೆಟ್ರೋಲ್ ಬಂಕ್‌ಗಳು ಪರಿವರ್ತನೆ ಆಗಿವೆ. ಸರ್ಕಾರ ತಕ್ಷಣ ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆ ಕಡಿಮೆ ಮಾಡಬೇಕು’ ಎಂದು ಕೃಷ್ಣ ಬೈರೇಗೌಡ ಆಗ್ರಹಿಸಿದರು.

ADVERTISEMENT

‘ತೈಲ ಬೆಲೆ ಏರಿಕೆಯಿಂದ ದಿನಸಿ ಪದಾರ್ಥಗಳ ಬೆಲೆಯ ಮೇಲೂ ಪರಿಣಾಮ ಬೀರಿದೆ. ಪ್ರತಿ ಕುಟುಂಬದ ಅಗತ್ಯ ಪದಾರ್ಥಗಳ ವೆಚ್ಚ ತೈಲ ಬೆಲೆ ಏರಿಕೆಯಿಂದ ಶೇ 5ರಷ್ಟು ಏರಿಕೆಯಾಗಿದೆ. ಬೆಳೆಗಳಿಗೆ ಶೇ 12ರಷ್ಟು ಬೆಲೆ ಏರಿಕೆ ಹಾಗೂ ಮೊಟ್ಟೆ ಮತ್ತು ಮಾಂಸದ ಮೇಲೆ ಶೇ 11ರಿಂದ ಶೇ 16ರಷ್ಟು ಬೆಲೆ ಏರಿಕೆ ಆಗಿದೆ ಎಂದು ಕೇಂದ್ರದ ಅಂಕಿಅಂಶಗಳು ಹೇಳುತ್ತಿವೆ’ ಎಂದರು.

ಪ್ರಿಯಾಂಕ್ ಖರ್ಗೆ ಮಾತನಾಡಿ, ‘ಡೀಸೆಲ್, ಪೆಟ್ರೋಲ್ ಬೆಲೆ ಏರಿಕೆಯಿಂದ ಎಲ್ಲ ವಾಣಿಜ್ಯ ಚಟುವಟಿಕೆ ಮೇಲೆ ಪರಿಣಾಮ ಬೀರಿದೆ. ಜನಸಾಮಾನ್ಯರ ಕೆಲಸದ ಅಭದ್ರತೆ ನಡುವೆ ತೈಲ ಬೆಲೆ ಏರಿಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ’ ಎಂದು ವಾಗ್ದಾಳಿ ನಡೆಸಿದರು.

‘ಬೇಡಿಕೆಯ ಕುಸಿತದಿಂದ ನಿರುದ್ಯೋಗ ಸಮಸ್ಯೆ ಹೆಚ್ಚಳ ಆಗಲಿವೆ. ತೈಲ ಸಚಿವಾಲಯದ ಪೆಟ್ರೋಲ್ ಯೋಜನೆ ಇಲಾಖೆ ಹೇಳುವ ಪ್ರಕಾರ ತೈಲ ಬಳಕೆ ಶೇ 5ರಷ್ಟು ಕಡಿಮೆ ಆಗಿದೆ. ಬೇಡಿಕೆ ಶೇ 4.6ರಷ್ಟು ಕುಸಿತ ಆಗಿದ್ದು, ಮತ್ತೊಂದು ಸರ್ವೇ ಪ್ರಕಾರ ಶೇ 51ರಷ್ಟು ಜನರು ಇತರೆ ವೆಚ್ಚಗಳನ್ನು ನಿಯಂತ್ರಿಸಿ ಪೆಟ್ರೋಲ್ ಡೀಸೆಲ್ ಹೆಚ್ಚು ಹಣ ಖರ್ಚು ಮಾಡುವ ಪರಿಸ್ಥಿತಿ ಇದೆ. ಉಳಿತಾಯ ಹಣವನ್ನೂ ಪೆಟ್ರೋಲ್ ಹಾಕಿಸಿಕೊಳ್ಳಲು ಬಳಸುತ್ತಿದ್ದಾರೆ’ ಎಂದರು.

‘ಕೇಂದ್ರ ಸರ್ಕಾರ ಕೇವಲ ಶ್ರೀಮಂತರಿಗೆ ಓಲೈಕೆಯಲ್ಲಿ ತೊಡಗಿದೆ. ರಾಜ್ಯದ ಮುಖ್ಯಮಂತ್ರಿ ಬದಲಾವಣೆಗೆ ದೆಹಲಿಗೆ ಹೋಗುವ ಬದಲು ಬೆಲೆ ಏರಿಕೆ ಹಾಗೂ ಜನಸಾಮಾನ್ಯರ ಕಷ್ಟ ಹೇಳಲು ಹೋಗಲಿ’ ಎಂದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.