ADVERTISEMENT

2 ವರ್ಷದೊಳಗೆ ಎತ್ತಿನಹೊಳೆ ಯೋಜನೆ ಪೂರ್ಣ: ಜಿ. ಪರಮೇಶ್ವರ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2023, 8:54 IST
Last Updated 18 ಡಿಸೆಂಬರ್ 2023, 8:54 IST
ಡಾ.ಜಿ. ಪರಮೇಶ್ವರ
ಡಾ.ಜಿ. ಪರಮೇಶ್ವರ   

ಬೆಂಗಳೂರು: ‘ಎತ್ತಿನಹೊಳೆ ಯೋಜನೆಗೆ ಕಳೆದ ನಾಲ್ಕು ವರ್ಷದ ಅವಧಿಯಲ್ಲಿ ಬಿಜೆಪಿ ಸರ್ಕಾರ ಅನುದಾನ ನೀಡಿಲ್ಲ. ಹೀಗಾಗಿ ಯೋಜನೆ ಸ್ಥಗಿತಗೊಂಡಿತ್ತು. ನಮ್ಮ ಸರ್ಕಾರ ಅನುದಾನ ನೀಡಿ ಯೋಜನೆಯನ್ನು ಮತ್ತೆ ಆರಂಭಿಸಿದೆ’ ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದರು.

ಸದಾಶಿವನಗರದಲ್ಲಿರುವ ತಮ್ಮ ನಿವಾಸದ ಬಳಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಎತ್ತಿನಹೊಳೆ ಯೋಜನೆಗೆ ಆರಂಭದಲ್ಲಿ ಅಂದಾಜು ₹ 13,500 ಸಾವಿರ ಕೋಟಿ ನಿಗದಿಪಡಿಸಲಾಗಿತ್ತು. ಈ ಹಿಂದಿನ ಅವಧಿಯಲ್ಲಿ ಬಿಜೆಪಿ ಸರ್ಕಾರವು ಅನುದಾನ ನೀಡಿಲ್ಲ. ಇದೇ ಕಾರಣದಿಂದ ಕಾಮಗಾರಿ ಸ್ಥಗಿತಗೊಂಡಿತ್ತು. ಯೋಜನೆಯ ಅಂದಾಜು ವೆಚ್ಚ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಪ್ರಸ್ತುತ ₹ 22 ಸಾವಿರ ಕೋಟಿ ಆಗಿದೆ. ಯೋಜನೆಯನ್ನು ಎರಡು ವರ್ಷದೊಳಗೆ ಪೂರ್ಣಗೊಳಿಸಿ, ತುಮಕೂರು, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸಲಾಗುವುದು’ ಎಂದರು.

‘ನೀರು ಸಂಗ್ರಹಿಸಲು ಕೊರಟಗೆರೆ ರೈತರು ನೀಡಿರುವ ಭೂಮಿಗೆ ಎಕರೆಗೆ ₹ 8 ಲಕ್ಷ ‌ಹಾಗೂ ದೊಡ್ಡಬಳ್ಳಾಪುರದಲ್ಲಿ ಎಕರೆ ಭೂಮಿಗೆ ₹ 32 ಲಕ್ಷ ಪರಿಹಾರ ನಿಗದಿಪಡಿಸಲಾಗಿದೆ. ಎಲ್ಲ ರೈತರಿಗೂ ಒಂದೇ ರೀತಿಯ ಸಮಾನ ಪರಿಹಾರ ಕಲ್ಪಿಸುವಂತೆ ಒತ್ತಾಯಿಸಲಾಗಿದೆ’ ಎಂದರು.

ADVERTISEMENT

ಎನ್‌ಐಎ ದಾಳಿ: ‘ಎನ್‌ಐಎ ಕಚೇರಿ ಬೆಂಗಳೂರಿನಲ್ಲಿ ಆಗಿದೆ. ಅಕ್ರಮ ಚಟುವಟಿಕೆ ಬಗ್ಗೆ ಮಾಹಿತಿ ಆಧರಿಸಿ ದಾಳಿ ಮಾಡುತ್ತಿರುತ್ತಾರೆ. ಈ ಬಗ್ಗೆ ಎನ್‌ಐಎ ತಂಡವು ಕೆಲವೊಮ್ಮೆ ರಾಜ್ಯ ಪೊಲೀಸರೊಂದಿಗೆ ಮಾಹಿತಿ ಹಂಚಿಕೊಳ್ಳುತ್ತಾರೆ. ಅವರ ಕರ್ತವ್ಯ ಅವರು ಮಾಡುತ್ತಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.