ಜಿ. ಪರಮೇಶ್ವರ
ಬೆಂಗಳೂರು: ‘ಹೈಕಮಾಂಡ್ ತೀರ್ಮಾನಿಸಿದರೆ ರಾಜಕೀಯ ಪದೋನ್ನತಿ ಆಗುತ್ತದೆ. ಎಲ್ಲರಂತೆ ನನಗೂ ಆಕಾಂಕ್ಷೆಯಿದೆ’ ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದರು.
‘ನಿಮಗೆ ರಾಜಕೀಯ ಪದೋನ್ನತಿ ಸಿಗಲಿದೆಯೇ’ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಅದು ನಮ್ಮ ಹೈಕಮಾಂಡ್ಗೆ ಬಿಟ್ಟಿದ್ದಾಗಿದೆ. ನಾನು ಈವರೆಗೂ ಆಶಾವಾದಿಯಾಗಿಯೇ ಬದುಕಿದ್ದೇನೆ. ಅದೇನು ಹೊಸದಾಗಿ ಆಗಬೇಕು ಎಂದೇನೂ ಇಲ್ಲ’ ಎಂದರು.
‘ಎಲ್ಲರಿಗೂ ಜೀವನದಲ್ಲಿ ಏನೇನೊ ಆಗಬೇಕು ಎಂದಿರುತ್ತದೆ. ಮನುಷ್ಯನಿಗೆ ಆಕಾಂಕ್ಷೆ ಎನ್ನುವುದು ಇರಲೇಬೇಕು. ಅದಿಲ್ಲದಿದ್ದರೆ ಮನುಷ್ಯ ಎನಿಸಿಕೊಳ್ಳುವುದಿಲ್ಲ’ ಎಂದರು.
‘ಅದಕ್ಕೆ ವಾತಾವರಣ ಪೂರಕ ಆಗಿದೆಯೇ ಇಲ್ಲವೇ ಎಂದು ನೀವೇ (ಮಾಧ್ಯಮ) ಗಮನಿಸುತ್ತಿದ್ದೀರಲ್ಲ. ಯಾರಿಗೆ ವಾತಾವರಣ ಪೂರಕವಾಗಿದೆ, ಯಾರಿಗೆ ಇಲ್ಲ ಎಂದು ನೀವು ಸೂಕ್ಷ್ಮವಾಗಿ ಗಮನಿಸುತ್ತಿದ್ದೀರಲ್ಲ’ ಎಂದೂ ಹೇಳಿದರು.
ಅಹಿತಕರ ಘಟನೆ ನಡೆದಿಲ್ಲ: ‘ಹೊಸ ವರ್ಷಾಚರಣೆಯನ್ನು ಜನ ಈ ಬಾರಿ ಜವಾಬ್ದಾರಿಯಿಂದ ಆಚರಿಸಿದ್ದಾರೆ. ಭದ್ರತೆಗೆ 20 ಸಾವಿರ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಎಲ್ಲೂ ಅಹಿತಕರ ಘಟನೆ ಆಗಿಲ್ಲ. ಸಂಚಾರ ದಟ್ಟಣೆಯೂ ಆಗಿಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.