
ಹುಬ್ಬಳ್ಳಿ: 'ರಾಜ್ಯದಲ್ಲಿ ದಲಿತ ಸಮುದಾಯದವರು ಮುಖ್ಯಮಂತ್ರಿ ಆಗಬೇಕೆನ್ನುವ ಕೂಗು ಮೊದಲಿನಿಂದಲೂ ಇದೆ. ಹೀಗಾಗಿ, ಸಿಎಂ ಬದಲಾವಣೆ ಎಂದಾದರೆ ಜಿ. ಪರಮೇಶ್ವರ ಅವರು ಮುಂದಿನ ಸಿಎಂ ಆಗಬೇಕು' ಎಂದು ಶಾಸಕ ಪ್ರಸಾದ ಅಬ್ಬಯ್ಯ ಅಭಿಪ್ರಾಯಪಟ್ಟರು.
ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 'ಮುಂದಿನ ಸಿಎಂ ದಲಿತ ಸಮುದಾಯದವರೇ ಆಗಬೇಕು ಎಂದು ಸಮುದಾಯದವರು ಒತ್ತಾಯ ಮಾಡುತ್ತಿದ್ದಾರೆ. ಜಿ. ಪರಮೇಶ್ವರ ಅವರು ಸಮುದಾಯದ ಪ್ರಭಾವಿ ಹಾಗೂ ಹಿರಿಯ ನಾಯಕರಾಗಿದ್ದಾರೆ. ಹೀಗಾಗಿ ಅವರು ಸಿಎಂ ಆಗಬೇಕು ಎನ್ನುವುದರಲ್ಲಿ ಯಾವ ತಪ್ಪಿಲ್ಲ. ಅಲ್ಲದೆ, ನಾನು ಸಹ ಸಚಿವ ಸ್ಥಾನದ ಆಕಾಂಕ್ಷಿ ಇದ್ದೇನೆ' ಎಂದರು.
'ಕಾಂಗ್ರೆಸ್‌ನಲ್ಲಿ ಯಾವುದೇ ಗೊಂದಲವಿಲ್ಲ, ನಾವೆಲ್ಲ ಒಂದೇ ಕುಟುಂಬದ ಸದಸ್ಯರ ಹಾಗೆ ಇದ್ದೇವೆ. ಬಿಜೆಪಿ ಅನಗತ್ಯವಾಗಿ ನಮ್ಮ ಆಂತರಿಕ ವಿಷಯದಲ್ಲಿ ತಲೆ ಹಾಕಿ, ಇಲ್ಲ ಸಲ್ಲದ ಮಾತನಾಡುವ ಮೂಲಕ ಬೇಜವ್ದಾರಿತನ ಪ್ರದರ್ಶಿಸುತ್ತಿದೆ' ಎಂದು ಕಿಡಿಕಾರಿದರು.
ರಹಸ್ಯ ಮಾತುಕತೆ: ಖಾಸಗಿ ಕಾರ್ಯಕ್ರಮದ ಪ್ರಯುಕ್ತ ಶನಿವಾರ ಹುಬ್ಬಳ್ಳಿಗೆ ಬಂದಿದ್ದ ಡಾ. ಯತೀಂದ್ರ ಸಿದ್ದರಾಮಯ್ಯ ಅವರು, ಸಂತೋಷನಗರದಲ್ಲಿರುವ ಶಾಸಕ ಪ್ರಸಾದ ಅಬ್ಬಯ್ಯ ಅವರ ಮನೆಗೆ ಭೇಟಿ ನೀಡಿ ರಹಸ್ಯ ಮಾತುಕತೆ ನಡೆಸಿದ್ದರು. ಅದರ ಬೆನ್ನಲ್ಲೇ ಶಾಸಕ ಅಬ್ಬಯ್ಯ ಅವರು, ದಲಿತ ಸಮುದಾಯದವರು ಮುಖ್ಯಮಂತ್ರಿ ಆಗಬೇನ್ನುವ ಹೇಳಿಕೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.