ADVERTISEMENT

ಮುಜರಾಯಿಗೆ ಗಾಳಿ ಆಂಜನೇಯ ಸ್ವಾಮಿ ದೇಗುಲ ಪ್ರಕರಣ: ಭಾಷಣ ಬೇಡ–ಕಾನೂನು ತೋರಿಸಿ...

​ಪ್ರಜಾವಾಣಿ ವಾರ್ತೆ
Published 15 ಜುಲೈ 2025, 16:16 IST
Last Updated 15 ಜುಲೈ 2025, 16:16 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ನಾನು ಕಾನೂನು ತಳಹದಿಯ ಮೇಲೆ ಸರ್ಕಾರದ ಆದೇಶವನ್ನು ಆಕ್ಷೇಪಿಸಿದರೆ ನೀವು ಮುಜರಾಯಿ ವಿಚಾರಣೆಯ ಅನವಶ್ಯಕ ವಿವರಣೆಯನ್ನು ಓದುತ್ತಿದ್ದೀರಿ. ನಿಮಗೆ ಭಾಷಣ ಮಾಡಬೇಕು ಎನಿಸಿದ್ದರೆ ಕೋರ್ಟ್‌ನಿಂದ ಆಚೆ ಹೋಗಿ ಮಾಡಿ...’

ನಗರದ ಪ್ರಸಿದ್ಧ ಗಾಳಿ ಆಂಜನೇಯ ಸ್ವಾಮಿ ದೇವಾಲಯವನ್ನು ಮುಜರಾಯಿ ಇಲಾಖೆ ಸುಪರ್ದಿಗೆ ಒಪ್ಪಿಸಿರುವ ಸರ್ಕಾರದ ಕ್ರಮವನ್ನು ಪ್ರಶ್ನಿಸಲಾದ ಅರ್ಜಿ ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ಸರ್ಕಾರದ ಪರ ಹಾಜರಿದ್ದ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಅವರ ಪ್ರತಿಪಾದನೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಪರಿ ಇದು.

ಈ ಕುರಿತ ಅರ್ಜಿಯನ್ನು ನ್ಯಾಯಮೂರ್ತಿ ಎಸ್‌.ಸುನಿಲ್ ದತ್‌ ಯಾದವ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು. ವಿಚಾರಣೆ ವೇಳೆ ಸರ್ಕಾರದ ಪರ ಹಾಜರಿದ್ದ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಎನ್‌.ದೇವದಾಸ್‌, ‘ದೇಗುಲದಲ್ಲಿ ಹಣದ ಲೂಟಿಯಾಗುತ್ತಿದೆ. ಹಾಗಾಗಿಯೇ, ಸರ್ಕಾರ ವಿಚಾರಣೆ ನಡೆಸಿ ಮುಜರಾಯಿ ಸುಪರ್ದಿಗೆ ತೆಗೆದುಕೊಂಡಿದೆ’ ಎಂದು ಸುದೀರ್ಘ ವಿಚಾರಣಾ ವರದಿಯನ್ನು ಓದಿದರು.

ADVERTISEMENT

ಇದಕ್ಕೆ ಅರ್ಜಿದಾರರ ಪರ ಹೈಕೋರ್ಟ್‌ ವಕೀಲ ಪಿ.ಪ್ರಸನ್ನ ಕುಮಾರ್, ‘ಸರ್ಕಾರದ ಆದೇಶ ಕಾನೂನುಬಾಹಿರವಾಗಿದೆ ಎಂದು ನಾನು ಕಾನೂನಾತ್ಮಕ ಅಂಶಗಳನ್ನು ನ್ಯಾಯಪೀಠಕ್ಕೆ ಅರುಹಿದರೆ ಸರ್ಕಾರದ ಪರ ವಕೀಲರು, ಜಿಲ್ಲಾಧಿಕಾರಿ ಆ ರೀತಿ ಹೇಳಿದ್ದಾರೆ, ಈ ರೀತಿ ಹೇಳಿದ್ದಾರೆ ಎಂಬ ಆದೇಶದಲ್ಲಿನ ಸಾಲುಗಳನ್ನು ಓದುತ್ತಿದ್ದಾರೆ. ವಾಸ್ತವದಲ್ಲಿ ಮುಜರಾಯಿ ಇಲಾಖೆ ದೇಗುಲವನ್ನು ಸುಪರ್ದಿಗೆ ಪಡೆಯಬೇಕಾದ ಕಾನೂನು ತಳಹದಿಯನ್ನೇ ಉಲ್ಲೇಖಿಸಿಲ್ಲ’ ಎಂದರು.

‘ದೇಗುಲದಲ್ಲಿ ಈಗಾಗಲೇ ಹಣ ಕದ್ದವರ ವಿರುದ್ಧ 2024ರ ಜೂನ್‌ 15ರಂದೇ ಎಫ್‌ಐಆರ್‌ ಆಗಿದೆ. ಅವರಿಬ್ಬರನ್ನೂ ಟ್ರಸ್ಟ್‌ನಿಂದ ಹೊರಗೆ ಹಾಕಲಾಗಿದೆ. ತನಿಖೆ ಇನ್ನೂ ನಡೆಯುತ್ತಿದ್ದು ದೋಷಾರೋಪ ಪಟ್ಟಿಯನ್ನೇ ಸಲ್ಲಿಸಿಲ್ಲ. ಆದರೆ, ಸರ್ಕಾರ ಮಿಂಚಿನ ವೇಗದಲ್ಲಿ ಎರಡನೇ ಶನಿವಾರದ ದಿನ ದೇಗುಲದ ಹುಂಡಿಗೆ ಬೀಗ ಹಾಕಿದೆ. ಕಳ್ಳನನ್ನು ಓಡಾಡಲು ಬಿಟ್ಟು ಈಗ ಹಣ ಲೂಟಿಯಾಗುತ್ತಿದೆ ಎಂದು ಅಲವತ್ತುಕೊಳ್ಳುತ್ತಿದೆ’ ಎಂದರು. ಸುದೀರ್ಘ ವಾದ–ಪ್ರತಿವಾದ ಆಲಿಸಿದ ನ್ಯಾಯಪೀಠ ಮಧ್ಯಂತರ ಆದೇಶವನ್ನು ಬುಧವಾರ (ಜುಲೈ 16) ಪ್ರಕಟಿಸುವುದಾಗಿ ತಿಳಿಸಿತು.

ಪ್ರಕರಣವೇನು?:

‘ಗಾಳಿ ಆಂಜನೇಯ ಸ್ವಾಮಿ ದೇವಾಲಯದ ಆಡಳಿತ ಮಂಡಳಿಯ ಪದಾಧಿಕಾರಿಗಳಲ್ಲಿ ಹೊಂದಾಣಿಕೆ ಇಲ್ಲ. ದೇವಾಲಯಕ್ಕೆ ಲಕ್ಷಾಂತರ ರೂಪಾಯಿ ಆದಾಯ ಬರುತ್ತಿದ್ದರೂ ಪ್ರತಿ ವರ್ಷ ಉಳಿತಾಯವಿಲ್ಲದೇ ವೆಚ್ಚ ಮಾಡಲಾಗುತ್ತಿದೆ. ದೇವಸ್ಥಾನದ ಹಣ ದುರುಪಯೋಗವಾಗುತ್ತಿದೆ. ಆದಾಯ ಹಾಗೂ ವೆಚ್ಚಕ್ಕೆ ಸಂಬಂಧಿಸಿದಂತೆ ಕಳೆದ 25 ವರ್ಷಗಳಿಂದ ಯಾವುದೇ ದಾಖಲೆ ಇಡದೆ, ಸಹಾಯಕ ಆಯುಕ್ತರು ಮತ್ತು ಮುಜರಾಯಿ ಇಲಾಖೆ ನೋಟಿಸ್ ನೀಡಿದ ಬಳಿಕ ದಾಖಲೆ ಸೃಷ್ಟಿಸಿರುವುದು ಕಂಡು ಬಂದಿದೆ’ ಎಂದು ಮುಜರಾಯಿ ಇಲಾಖೆ, ದೇವಾಲಯವನ್ನು ತನ್ನ ಸುಪರ್ದಿಗೆ ಪಡೆದಿದೆ. 

ಲಂಚ ಆರೋಪ: ಪಾಲಿಕೆ ಸದಸ್ಯ ಗೋವಿಂದರಾಜ ಶಿಕ್ಷೆ ರದ್ದು:

ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಲು ₹2 ಲಕ್ಷ ಲಂಚ ಪಡೆದ ಆರೋಪದಡಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಗಣೇಶ ಮಂದಿರ ವಾರ್ಡ್‌ ಸದಸ್ಯರಾಗಿದ್ದ ಎಲ್.ಗೋವಿಂದರಾಜ ಅವರಿಗೆ ಲೋಕಾಯುಕ್ತ ವಿಶೇಷ ನ್ಯಾಯಾಲಯ ವಿಧಿಸಿದ್ದ ನಾಲ್ಕು ವರ್ಷಗಳ ಜೈಲು ಶಿಕ್ಷೆಯನ್ನು ಹೈಕೋರ್ಟ್‌ ರದ್ದುಪಡಿಸಿದೆ. ‘ಬೆಂಗಳೂರು ನಗರ ಜಿಲ್ಲಾ ಲೋಕಾಯುಕ್ತ ವಿಶೇಷ ನ್ಯಾಯಾಲಯ ನನಗೆ ವಿಧಿಸಿರುವ ಜೈಲು ಶಿಕ್ಷೆ ರದ್ದುಪಡಿಸಬೇಕು’ ಎಂದು ಕೋರಿದ್ದ ಗೋವಿಂದರಾಜ ಅವರ ಕ್ರಿಮಿನಲ್‌ ಮೇಲ್ಮನವಿ ಹಾಗೂ ‘ಅಪರಾಧಿಗೆ ವಿಧಿಸಲಾಗಿರುವ ಶಿಕ್ಷೆಯ ಪ್ರಮಾಣ ಹೆಚ್ಚಳ ಮಾಡಬೇಕು’ ಎಂದು ಕೋರಿದ್ದ ಲೋಕಾಯುಕ್ತ ಪೊಲೀಸರ ಮೇಲ್ಮನವಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಜಿ.ಉಮಾ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ. ‘ಅರ್ಜಿದಾರರ ವಿರುದ್ಧದ ಆರೋಪವನ್ನು ಸಾಬೀತುಪಡಿಸುವಲ್ಲಿ ಲೋಕಾಯುಕ್ತ ಪೊಲೀಸರು ಸೂಕ್ತ ಸಾಕ್ಷ್ಯಾಧಾರ ಒದಗಿಸಲು ವಿಫಲರಾಗಿದ್ದಾರೆ ಮತ್ತು ತನಿಖಾ ಪ್ರಕ್ರಿಯೆಯಲ್ಲಿ ದೋಷಗಳಿವೆ’ ಎಂಬ ಅಭಿಪ್ರಾಯದೊಂದಿಗೆ ನ್ಯಾಯಪೀಠ ಶಿಕ್ಷೆ ರದ್ದುಪಡಿಸಿ ಆದೇಶಿಸಿದೆ. ಗೋವಿಂದರಾಜ ಪರ ಪದಾಂಕಿತ ಹಿರಿಯ ವಕೀಲ ಸಿ.ವಿ.ನಾಗೇಶ್‌ ವಾದ ಮಂಡಿಸಿದ್ದರು. ಕೆ.ರಾಘವೇಂದ್ರ ವಕಾಲತ್ತು ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.