ADVERTISEMENT

ಚುನಾವಣಾ ಆಯೋಗಕ್ಕೆ ಸುಳ್ಳು ಮಾಹಿತಿ: ಜನಾರ್ದನ ರೆಡ್ಡಿಗೆ ಹೈಕೋರ್ಟ್‌ ನೋಟಿಸ್‌

​ಪ್ರಜಾವಾಣಿ ವಾರ್ತೆ
Published 14 ಜುಲೈ 2025, 16:09 IST
Last Updated 14 ಜುಲೈ 2025, 16:09 IST
ಜನಾರ್ದನ ರೆಡ್ಡಿ
ಜನಾರ್ದನ ರೆಡ್ಡಿ   

ಬೆಂಗಳೂರು: ‘ಕಲ್ಯಾಣ ರಾಜ್ಯ ಪ್ರಗತಿ ಪಕ್ಷ’ದಿಂದ (ಕೆಆರ್‌ಪಿಪಿ) ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಗೆದ್ದು ಶಾಸಕರಾಗಿರುವ ಗಾಲಿ ಜನಾರ್ದನ ರೆಡ್ಡಿ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ‌ ಸುಳ್ಳು ಮಾಹಿತಿ ನೀಡಿದ್ದು, ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕು’ ಎಂದು ಕೋರಲಾಗಿರುವ ಅರ್ಜಿಗೆ ಸಂಬಂಧಿಸಿದಂತೆ ಕೇಂದ್ರ ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿಗೊಳಿಸಲು ಹೈಕೋರ್ಟ್‌ ಆದೇಶಿಸಿದೆ.

ಈ ಸಂಬಂಧ ಆಂಧ್ರಪ್ರದೇಶದ ಅನಂತಪುರಂ ನಿವಾಸಿ ಟಪಾಲ್‌ ಶ್ಯಾಮ್‌ಪ್ರಸಾದ್‌ ಸಲ್ಲಿಸಿರುವ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಎಸ್‌.ಸುನೀಲ್‌ ದತ್‌ ಯಾದವ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ಪ್ರತಿವಾದಿಗಳಾದ ಕೇಂದ್ರ ಚುನಾವಣಾ ಆಯೋಗ, ರಾಜ್ಯದ ಮುಖ್ಯ ಚುನಾವಣಾಧಿಕಾರಿ, ಗಂಗಾವತಿ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಹಾಗೂ ಜನಾರ್ದನ ರೆಡ್ಡಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿದ ನ್ಯಾಯಪೀಠ ವಿಚಾರಣೆ ಮುಂದೂಡಿದೆ.

ADVERTISEMENT

ಮನವಿ ಏನು?: ‘ಗಂಗಾವತಿ ಕ್ಷೇತ್ರದಿಂದ ಆಯ್ಕೆಯಾಗಿರುವ ಜನಾರ್ದನ ರೆಡ್ಡಿ ನಮೂನೆ 25 ಮತ್ತು 26ರಲ್ಲಿ ತಮ್ಮ ಆಸ್ತಿಯ ನೈಜ ವಿವರ, ಕಾರುಗಳ ಮಾಹಿತಿ, ಕರ್ನಾಟಕ, ಆಂಧ್ರಪ್ರದೇಶದಲ್ಲಿ ಕೋರ್ಟ್‌ನಲ್ಲಿ ಬಾಕಿ ಇರುವ ಪ್ರಕರಣಗಳ ವಿವರ, ಇತ್ಯರ್ಥವಾಗಿರುವ ಮತ್ತು ಶಿಕ್ಷೆಯಾಗಿರುವ ಪ್ರಕರಣಗಳ ಮಾಹಿತಿಯನ್ನು ಒದಗಿಸಿಲ್ಲ. ಹೀಗಾಗಿ ಈ ಸಂಬಂಧ ನಾನು 2023ರ ಜೂನ್‌ 14ರಂದು ಆಯೋಗಕ್ಕೆ ನೀಡಿರುವ ಮನವಿಯನ್ನು ಪರಿಗಣಿಸುವಂತೆ ನಿರ್ದೇಶಿಸಬೇಕು ಮತ್ತು ಜನಾರ್ದನ ರೆಡ್ಡಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಆದೇಶಿಸಬೇಕು’ ಎಂಬುದು ಅರ್ಜಿದಾರರ ಮನವಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.