ADVERTISEMENT

ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣ: ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ ಸಿಬಿಐ

ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದ್ದ ಆತ್ಮಹತ್ಯೆ ಪ್ರಕರಣ, ಬೆಂಗಳೂರು ಕೋರ್ಟ್‌ಗೆ ಪ್ರಕರಣ ವರ್ಗ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2019, 14:48 IST
Last Updated 30 ಅಕ್ಟೋಬರ್ 2019, 14:48 IST
   

ಮಡಿಕೇರಿ: ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರವಿದ್ದ ಅವಧಿಯಲ್ಲಿ ತೀವ್ರ ಸಂಚಲನ ಸೃಷ್ಟಿಸಿದ್ದ ಡಿವೈಎಸ್‌ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣದ ತನಿಖಾ ವರದಿಯನ್ನು ಸಿ.ಬಿ.ಐ ತಂಡವು ಮಡಿಕೇರಿ ಜೆಎಂಎಫ್‌ ನ್ಯಾಯಾಲಯಕ್ಕೆ ಸಲ್ಲಿಸಿದೆ. ಮುಚ್ಚಿದ ಲಕೋಟೆಯಲ್ಲಿ 260 ಪುಟಗಳ ವರದಿಯನ್ನು ನ್ಯಾಯಾಧೀಶರಿಗೆ ಸಿ.ಬಿ.ಐ ಅಧಿಕಾರಿಗಳು ಬುಧವಾರ ಸಲ್ಲಿಸಿದ್ದಾರೆ.

ಚೆನ್ನೈನ ಸಿಬಿಐ ಕಚೇರಿಯ ಅಧಿಕಾರಿ ಸುಬೋಧ್‌ ನೇತೃತ್ವದಲ್ಲಿ ಮಡಿಕೇರಿಗೆ ರಹಸ್ಯವಾಗಿ ಬಂದಿದ್ದ ತಂಡವು ಸ್ಥಳೀಯ ಪೊಲೀಸರ ನೆರವು ಪಡೆದು ನ್ಯಾಯಾಧೀಶ ಮನು ಅವರಿಗೆ ವರದಿ ಸಲ್ಲಿಸಿ ತೆರಳಿದೆ.

ಕೆ.ಜೆ.ಜಾರ್ಜ್ ಅವರು ಹಾಲಿ ಶಾಸಕರಾಗಿದ್ದು, ಪ್ರಕರಣವನ್ನು ನ್ಯಾಯಾಧೀಶರು, ಬೆಂಗಳೂರಿನ ಜನಪ್ರನಿಧಿಗಳ ನ್ಯಾಯಾಲಯಕ್ಕೆ ವರ್ಗಾವಣೆಗೊಳಿಸಿ ಆದೇಶಿಸಿದ್ದಾರೆ.

ADVERTISEMENT

ಏನಿದು ಪ್ರಕರಣ?: ಮಂಗಳೂರಿನ ಐ.ಜಿ.ಪಿ ಕಚೇರಿಯಲ್ಲಿ ಡಿವೈಎಸ್‌ಪಿ ಆಗಿದ್ದ ಎಂ.ಕೆ.ಗಣಪತಿ ಅವರು ಮಡಿಕೇರಿಯ ವಿನಾಯಕ ಲಾಡ್ಜ್‌ನಲ್ಲಿ 2016ರ ಜುಲೈ 7ರಂದು ನೇಣುಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಅದಕ್ಕೂ ಮುನ್ನ ಸ್ಥಳೀಯ ಖಾಸಗಿ ವಾಹಿನಿಗೆ ಸಂದರ್ಶನ ನೀಡಿದ್ದ ಅವರು, ಕಾಂಗ್ರೆಸ್‌ ಶಾಸಕ ಕೆ.ಜೆ.ಜಾರ್ಜ್ (ಅಂದು ಸಚಿವರಾಗಿದ್ದರು), ಹಿರಿಯ ಐಪಿಎಸ್‌ ಅಧಿಕಾರಿಗಳಾದ ಎ.ಎಂ.ಪ್ರಸಾದ್‌, ಪ್ರಣವ್‌ ಮೊಹಂತಿ ಅವರ ವಿರುದ್ಧ ಕಿರುಕುಳದ ಆರೋಪ ಮಾಡಿದ್ದರು.

ಆದರೆ, ಸ್ಥಳೀಯ ಪೊಲೀಸರು ‘ಅಸಹಜ ಸಾವು’ ಎಂದಷ್ಟೇ ಪ್ರಕರಣ ದಾಖಲಿಸಿಕೊಂಡಿದ್ದರು. ಕಿರುಕುಳದಿಂದ ತಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಗಣಪತಿ ಪುತ್ರ ನೇಹಾಲ್‌ ಆರೋಪಿಸಿ, ಮಡಿಕೇರಿ ಕೋರ್ಟ್‌ನಲ್ಲಿ ಖಾಸಗಿ ದೂರು ಸಲ್ಲಿಸಿದ್ದರು. ನ್ಯಾಯಾಲಯದ ಸೂಚನೆಯಂತೆ ನಗರ ಪೊಲೀಸ್‌ ಠಾಣೆಯಲ್ಲಿ ಜಾರ್ಜ್‌ ವಿರುದ್ಧ ಪ್ರಕರಣವೂ ದಾಖಲಾಗಿತ್ತು.

ಅದಾದ ನಂತರ ಜಾರ್ಜ್‌ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಪ್ರಕರಣವನ್ನು ರಾಜ್ಯ ಸರ್ಕಾರ ಸಿಐಡಿಗೆ ವಹಿಸಿತ್ತು. ಸಿಐಡಿ ತಂಡವು ಜಾರ್ಜ್‌ ವಿರುದ್ಧದ ಆರೋಪಕ್ಕೆ ‘ಕ್ಲೀನ್‌ ಚಿಟ್‌’ ನೀಡಿ ನ್ಯಾಯಾಲಯಕ್ಕೆ 800 ಪುಟಗಳ ವರದಿ ಸಲ್ಲಿಸಿತ್ತು. ಗಣಪತಿ ಪತ್ನಿ ಪಾವನಾ ಹಾಗೂ ಪುತ್ರ ನೇಹಾಲ್‌ ಪ್ರಕರಣದಿಂದ ಹಿಂದೆ ಸರಿದಿದ್ದರು.

ಆದರೆ, ಗಣಪತಿ ಅವರ ತಂದೆ ಕುಶಾಲಪ್ಪ, ಸಹೋದರ ಮಾಚಯ್ಯ ಅವರು ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಕೋರಿ ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ್ದರು.

ಸುದೀರ್ಘ ವಿಚಾರಣೆ:

2017ರ ಅಕ್ಟೋಬರ್‌ನಲ್ಲಿ ಸುಪ್ರೀಂಕೋರ್ಟ್‌ ಈ ಪ್ರಕರಣವನ್ನು ಸಿಬಿಐಗೆ ವಹಿಸಿತ್ತು. ಕೋರ್ಟ್‌ ಆದೇಶದ ಬಳಿಕ ಚೆನ್ನೈ ಸಿಬಿಐ ಕಚೇರಿಯ ಎಸ್‌ಪಿಯಾಗಿದ್ದ ಶರವಣನ್‌, ಜಾರ್ಜ್‌ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದರು. ಮೊದಲ ಆರೋಪಿ ಜಾರ್ಜ್‌ ಆಗಿದ್ದರೆ, ಪ್ರಣವ್‌ ಮೊಹಂತಿ ಹಾಗೂ ಎ.ಎಂ.ಪ್ರಸಾದ್‌ ಅವರು ಕ್ರಮವಾಗಿ ಎರಡು, ಮೂರನೇ ಆರೋಪಿಯಾಗಿ ಹೆಸರಿಸಲಾಗಿತ್ತು. ಅಂದಿನಿಂದ ಸಿಬಿಐ ತಂಡವು ಸುದೀರ್ಘ ವಿಚಾರಣೆ ನಡೆಸಿತ್ತು. ಈಗ ಸಲ್ಲಿಕೆಯಾಗಿರುವುದು ತನಿಖೆ ಪ್ರಗತಿ ವರದಿಯೇ ಅಥವಾ ಅಂತಿಮ ವರದಿ ಎಂಬುದು ಖಚಿತಗೊಳ್ಳಬೇಕಿದೆ.

ಗಣಪತಿ ಆತ್ಮಹತ್ಯೆ ಮಾಡಿಕೊಂಡಾಗ ವಿಧಾನಮಂಡಲದ ಅಧಿವೇಶನ ನಡೆಯುತ್ತಿದ್ದರಿಂದ ರಾಜಕೀಯ ವಲಯದಲ್ಲಿ ಕೋಲಾಹಲ ಸೃಷ್ಟಿಸಿತ್ತು. ಅಂದು ವಿರೋಧ ಪಕ್ಷದಲ್ಲಿದ್ದ ಬಿಜೆಪಿ, ಜೆಡಿಎಸ್‌ನ ಸದಸ್ಯರು ಉಭಯ ಸದನದಲ್ಲೂ ಅಹೋರಾತ್ರಿ ನಡೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.