ADVERTISEMENT

‘ಗಾಂಧಿ ಗ್ರಾಮ ಪುರಸ್ಕಾರ’: ಅಧ್ಯಕ್ಷ, ಸದಸ್ಯರ ಕಡೆಗಣನೆ

₹20.45 ಕೋಟಿ ಬಿಡುಗಡೆ; ಪ್ರಶಸ್ತಿ ಪಡೆಯಲು ಗ್ರಾ.ಪಂ ಸಿಬ್ಬಂದಿ ನಿಯೋಜನೆ

ಚಂದ್ರಹಾಸ ಹಿರೇಮಳಲಿ
Published 8 ಮಾರ್ಚ್ 2023, 19:31 IST
Last Updated 8 ಮಾರ್ಚ್ 2023, 19:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಎರಡು ಅವಧಿಯ ‘ಗಾಂಧಿ ಗ್ರಾಮ ಪುರಸ್ಕಾರ’ ಪ್ರಶಸ್ತಿಯನ್ನು ಇದೇ ತಿಂಗಳ 9 ಮತ್ತು 10ರಂದು ವಿತರಿಸಲು ಗ್ರಾಮೀಣಾಭಿವೃದ್ಧಿ ಇಲಾಖೆ ನಿರ್ಧರಿಸಿದ್ದು, ಪುರಸ್ಕಾರಕ್ಕೆ ಆಯ್ಕೆಯಾದ ಪಂಚಾಯಿತಿಗಳ ಅಧ್ಯಕ್ಷರು, ಸದಸ್ಯರನ್ನು ಆಹ್ವಾನಿಸದೇ, ಸಿಬ್ಬಂದಿ ಕಳುಹಿಸಲು ಆದೇಶ ಹೊರಡಿಸಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ.

ರಾಜ್ಯದಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುವ ಗ್ರಾಮ ಪಂಚಾಯಿತಿಗಳನ್ನು ಪ್ರೋತ್ಸಾಹಿಸಲು 2013–14ನೇ ಸಾಲಿನಿಂದ ಗಾಂಧಿ ಗ್ರಾಮ ಪುರಸ್ಕಾರ ಪ್ರಶಸ್ತಿ ಆರಂಭಿಸಲಾಗಿತ್ತು. ಪ್ರತಿ ವರ್ಷ ತಾಲ್ಲೂಕಿಗೆ ಒಂದರಂತೆ ಅತ್ಯುತ್ತಮ ಪಂಚಾಯಿತಿಗಳನ್ನು ಆಯ್ಕೆ ಮಾಡಿ, ಗಾಂಧಿ ಜಯಂತಿಯಂದು ನಡೆಯುವ ಸಮಾರಂಭದಲ್ಲಿ ಪ್ರತಿ ಪಂಚಾಯಿತಿಗೆ ₹ 5 ಲಕ್ಷ ನಗದು, ಪ್ರಶಸ್ತಿ ಫಲಕ ನೀಡಿ ಗೌರವಿಸಲಾಗುತ್ತಿತ್ತು.

2020–21ನೇ ಸಾಲಿನಲ್ಲಿ 176 ಪಂಚಾಯಿತಿಗಳನ್ನು, 2021–22ನೇ ಸಾಲಿಗೆ 233 ಪಂಚಾಯಿತಿಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. 2020–21ನೇ ಸಾಲಿನ ಪ್ರಶಸ್ತಿಗಳನ್ನು ಕೋವಿಡ್‌ ಕಾರಣ ನೀಡಿ ಪ್ರದಾನ ಮಾಡಿರಲಿಲ್ಲ. ಕಳೆದ ಗಾಂಧಿ ಜಯಂತಿ ದಿನ ಪ್ರದಾನ ಮಾಡಲು ಅವಕಾಶವಿದ್ದರೂ, ಸರ್ಕಾರ ನಿರಾಸಕ್ತಿ ತೋರಿತ್ತು. ಈಗ ಹಿಂದಿನ ಪ್ರಶಸ್ತಿಗಳನ್ನೂ ಸೇರಿಸಿ 2021–22ನೇ ಸಾಲಿನ ಪ್ರಶಸ್ತಿಗಳ ಜತೆ ವಿತರಿಸಲು ₹ 20.45 ಕೋಟಿ ಬಿಡುಗಡೆ ಮಾಡಿದೆ.

ADVERTISEMENT

ಸಮಾರಂಭವಿಲ್ಲದೇ ಪ್ರಶಸ್ತಿ ಹಸ್ತಾಂತರ!: ಗಾಂಧಿ ಜಯಂತಿಗೂ ಮೊದಲು ಚುನಾವಣೆ ನಡೆಯುವ ಕಾರಣ ಪ್ರಶಸ್ತಿ ಹಾಗೂ ಪ್ರಶಸ್ತಿ ಮೊತ್ತವನ್ನು ಆಯ್ಕೆಯಾದ ಪಂಚಾಯಿತಿಗಳಿಗೆ ತರಾತುರಿಯಲ್ಲಿ ತಲುಪಿಸಲು ಮಾರ್ಚ್‌ 9 ಮತ್ತು 10ರಂದು ಗಡುವು ನೀಡಲಾಗಿದೆ. ಸಮಾರಂಭವನ್ನೂ ಆಯೋಜಿಸದೆ, ಆಯಾ ಪಂಚಾಯಿತಿಗಳ ಜನಪ್ರತಿನಿಧಿಗಳಿಗೂ ಆಹ್ವಾನ ನೀಡದೆ, ಪ್ರತಿ ಗ್ರಾಮ ಪಂಚಾಯಿತಿಗಳಿಂದ ಕೇವಲ ಒಬ್ಬ ಸಿಬ್ಬಂದಿಯನ್ನು ಪ್ರಶಸ್ತಿ ಪಡೆದುಕೊಳ್ಳಲು ನಿಯೋಜಿಸುವಂತೆ ಸೂಚಿಸಲಾಗಿದೆ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಕಾರ್ಯದರ್ಶಿ, ದ್ವಿತೀಯ ದರ್ಜೆ ಲೆಕ್ಕ ಸಹಾಯಕರಲ್ಲಿ ಒಬ್ಬರನ್ನು ಆಯಾ ವಿಭಾಗಗಳಿಗೆ ಕಳುಹಿಸಿಕೊಡಲು ಆದೇಶಿಸಲಾಗಿದೆ.

ಆಯ್ಕೆಯಲ್ಲೂ ರಾಜಕೀಯ: ಆಯಾ ಜಿಲ್ಲೆಯ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೇತೃತ್ವದ ಆಯ್ಕೆ ಸಮಿತಿಗಳು ಗಾಂಧಿ ಗ್ರಾಮ ಪುರಸ್ಕಾರಕ್ಕೆ ಗ್ರಾಮ ಪಂಚಾಯಿತಿಗಳನ್ನು ಆಯ್ಕೆ ಮಾಡಿ ಸರ್ಕಾರಕ್ಕೆ ಶಿಫಾರಸು ಮಾಡುತ್ತವೆ. ಆಯ್ಕೆ ಮಾಡುವಾಗ ಆಯಾ ಕ್ಷೇತ್ರದ ಶಾಸಕರು, ಪ್ರಭಾವಿಗಳು ಸೂಚಿಸಿದ, ಆಡಳಿತ ಪಕ್ಷದ ಬೆಂಬಲಿಗರು ಅಧಿಕಾರದಲ್ಲಿರುವ ಪಂಚಾಯಿತಿಗಳನ್ನೇ ಆಯ್ಕೆ ಮಾಡಲಾಗುತ್ತದೆ.

ಅತ್ಯುತ್ತಮವಾಗಿ ಕಾರ್ಯನಿರ್ವಹಿಸುವ ಪಂಚಾಯಿತಿಗಳನ್ನು ಆಯ್ಕೆ ಮಾಡುತ್ತಿಲ್ಲ ಎನ್ನುವ ಆರೋಪವೂ ಇದೆ. 2020–21ನೇ ಸಾಲಿನ ಆಯ್ಕೆಯಲ್ಲಿ ರಾಜಕೀಯ ನಡೆದಿದೆ ಎಂದು ಆರೋಪಿಸಿ ದಕ್ಷಿಣ ಕನ್ನಡ ಜಿಲ್ಲೆಯ ಕಿಲ್ಪಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ವಿಚಾರಣೆ ನಡೆಯುತ್ತಿದೆ.

ವಿದ್ಯಾರ್ಥಿವೇತನ, ಪ್ರೋತ್ಸಾಹದ ಹಣ ಬಳಕೆ
ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾದ ಪಂಚಾಯಿತಿಗಳಿಗೆ ತಲಾ ₹ 5 ಲಕ್ಷ ನೀಡಲು 2022–23ನೇ ಸಾಲಿನ ‘ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಕಾರ್ಯಕ್ರಮ, ವಿದ್ಯಾರ್ಥಿ ವೇತನ ಮತ್ತು ಪ್ರೋತ್ಸಾಹ’ದ ಲೆಕ್ಕ ಶೀರ್ಷಿಕೆಯಲ್ಲಿ ಬಳಸಿಕೊಳ್ಳಲಾಗಿದೆ.

*
ಪಂಚಾಯಿತಿಗಳನ್ನು ಪ್ರೋತ್ಸಾಹಿಸುವ ಪುರಸ್ಕಾರವನ್ನು 3 ವರ್ಷಗಳಿಂದ ಕಡೆಗಣಿಸಲಾಗಿದೆ. ಈಗ 2 ವರ್ಷಗಳ ಪ್ರಶಸ್ತಿ ಕಳುಹಿಸಿಕೊಡುತ್ತಿದ್ದಾರೆ.
-ಕಾಡಶೆಟ್ಟಿಹಳ್ಳಿ ಸತೀಶ್‌, ಅಧ್ಯಕ್ಷರು, ಗ್ರಾಮ ಪಂಚಾಯಿತಿ ಸದಸ್ಯರ ಒಕ್ಕೂಟ.

*
ಪುರಸ್ಕಾರಕ್ಕೆ ಬಿಡುಗಡೆಯಾದ ಹಣವನ್ನು ಮಾರ್ಚ್‌ ಒಳಗೆ ನೀಡಬೇಕಿದೆ. ಹಾಗಾಗಿ, ವಿತರಣೆ ಮಾಡಲಾಗುತ್ತಿದೆ. ಸದ್ಯದಲ್ಲೇ ಸಮಾರಂಭ ಆಯೋಜಿಸಲಾಗುವುದು.
-ಎಲ್‌.ಕೆ.ಅತೀಕ್‌, ಹೆಚ್ಚುವರಿ ಮುಖ್ಯಕಾರ್ಯದರ್ಶಿ, ಗ್ರಾಮೀಣಾಭಿವೃದ್ಧಿ ಇಲಾಖೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.