
ಬೆಂಗಳೂರು: ‘ಮಹಾತ್ಮ ಗಾಂಧೀಜಿಯವರು ಭೇಟಿ ನೀಡಿದ್ದ ಮೈಸೂರು ಜಿಲ್ಲೆಯ ಬದನವಾಳು ಗ್ರಾಮವನ್ನು ಆಕರ್ಷಕ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲು ತೀರ್ಮಾನಿಸಲಾಗಿದೆ’ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಪ್ರವಾಸೋದ್ಯಮ ಇಲಾಖೆ, ಖಾದಿ ಮಂಡಳಿ ಅಧಿಕಾರಿಗಳು ಹಾಗೂ ನಂಜನಗೂಡು ಶಾಸಕ ದರ್ಶನ್ ಧ್ರುವ ನಾರಾಯಣ ಜತೆಗೆ ಸಭೆ ನಡೆಸಿದ ಬಳಿಕ ಅವರು ಸುದ್ದಿಗಾರರ ಜತೆ ಮಾತನಾಡಿದರು.
‘ಗಾಂಧೀಜಿ ಅವರು 1927 ಹಾಗೂ 1932ರಲ್ಲಿ ಬದನವಾಳು ಗ್ರಾಮಕ್ಕೆ ಭೇಟಿ ನೀಡಿ, ಖಾದಿ ಕ್ರಾಂತಿಗೆ ಉತ್ತೇಜನ ನೀಡಿದ್ದರು. ‘ಗ್ರಾಮ ಸ್ವರಾಜ್ಯ’ ಪರಿಕಲ್ಪನೆಗೆ ಕಾರಣವಾದ ಬದನವಾಳು ಗ್ರಾಮದ ಎಲ್ಲಾ ಐತಿಹಾಸಿಕ ಹೆಜ್ಜೆ ಗುರುತುಗಳನ್ನು ಪುನರುಜ್ಜೀವನಗೊಳಿಸಲು ಮತ್ತು ಖಾದಿ ಮಹತ್ವವನ್ನು ಸಾರಲು ರೂಪುರೇಷೆ ಸಿದ್ದಪಡಿಸಲಾಗುವುದು’ ಎಂದರು.
‘ಏಳು ಎಕರೆಯಲ್ಲಿ ಖಾದಿ ನೇಯ್ದೆಯ ಇತಿಹಾಸ, ಖಾದಿ ಉತ್ಪಾದನಾ ಘಟಕ, ತರಬೇತಿ ಕೇಂದ್ರ, ವಿನ್ಯಾಸಕೇಂದ್ರ, ಖಾದಿ ಪರೀಕ್ಷೆ, ದಾಸ್ತಾನು ಕೇಂದ್ರ, ಖಾದಿ ಸಂಶೋಧನ ಕೇಂದ್ರಗಳನ್ನು ಅಭಿವೃದ್ಧಿಪಡಿಸಲಾಗುವುದು. ಮೈಸೂರು ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರ ವಿವರ, ವಸ್ತು ಸಂಗ್ರಹಾಲಯಗಳಿಗೆ ಆದ್ಯತೆ ನೀಡಲಾಗುವುದು’ ಎಂದು ಮಾಹಿತಿ ನೀಡಿದರು. ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಕೆ.ವಿ.ತ್ರಿಲೋಕಚಂದ್ರ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.