ADVERTISEMENT

ಬೆಂಗಳೂರು | ಗಣೇಶ ವಿಸರ್ಜನೆ ಮಾರ್ಗಕ್ಕೆ ಮನವಿ: ಅನುಮತಿ ನಿರಾಕರಿಸಿದ ಹೈಕೋರ್ಟ್

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2025, 16:09 IST
Last Updated 3 ಸೆಪ್ಟೆಂಬರ್ 2025, 16:09 IST
   

ಬೆಂಗಳೂರು: ‘ಇದೇ 4ರಂದು ನಡೆಯಲಿರುವ ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ನಾವು ಗುರುತಿಸಿದ ನಿರ್ದಿಷ್ಟ ಮಾರ್ಗದ ಮೂಲಕವೇ ಮೆರವಣಿಗೆ ನಡೆಸಲು ಅನುಮತಿ ನೀಡುವಂತೆ ಸ್ಥಳೀಯ ಆಡಳಿತ ಮತ್ತು ಪೊಲೀಸರಿಗೆ ನಿರ್ದೇಶಿಸಬೇಕು’ ಎಂದು ಕೋರಿ ನಾಗಮಂಗಲದ ಸಾಮೂಹಿಕ ಗಣಪತಿ ವಿಸರ್ಜನಾ ಸಮಿತಿಯ ಮನವಿಯನ್ನು ಪರಿಗಣಿಸಲು ಹೈಕೋರ್ಟ್ ನಿರಾಕರಿಸಿದೆ.

ಈ ಸಂಬಂಧ ‘ನಾಗಮಂಗಲ ಸಾಮೂಹಿಕ ಗಣಪತಿ ವಿಸರ್ಜನಾ ಸಮಿತಿ’ ಅಧ್ಯಕ್ಷ ಕೆ.ರಾಘವೇಂದ್ರ ಹಾಗೂ ಪದಾಧಿಕಾರಿಗಳಾದ ಕೆ.ಎನ್.ಅಶೋಕ್ ಮತ್ತು ಟಿ.ಎಸ್.ಸಂಜಯ್ ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಬಿ.ಎಂ.ಶ್ಯಾಮ್‌ಪ್ರಸಾದ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ಅರ್ಜಿದಾರರ ಪರ ಪದಾಂಕಿತ ಹಿರಿಯ ವಕೀಲ ಎಂ.ಅರುಣ್ ಶ್ಯಾಮ್, ‘ಅರ್ಜಿದಾರರು ತಮಗೆ ಅನುಕೂಲಕರವಾದ ಮಾರ್ಗದ ಮೂಲಕ ಮೆರವಣಿಗೆ ನಡೆಸುವ ಹಕ್ಕು ಹೊಂದಿದ್ದಾರೆ’ ಎಂದು ಸುಪ್ರೀಂ ಕೋರ್ಟ್‌ನ ಕೆಲವು ತೀರ್ಪುಗಳನ್ನು ಉಲ್ಲೇಖಿಸಿದರು.

ADVERTISEMENT

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸರ್ಕಾರದ ಪರ ವಕೀಲ ಶಮಂತ್‌ ನಾಯಕ್, ‘ಇದೊಂದು ಸೂಕ್ಷ್ಮ ವಿಚಾರ. ಗಣಪತಿ ವಿಸರ್ಜನೆಗೆ ಅರ್ಜಿದಾರರು ಗುರುತಿಸಿರುವ ಮಾರ್ಗ ಮಧ್ಯೆ ಮಸೀದಿ ಇದೆ. ಕಳೆದ ವರ್ಷ ಮೆರವಣಿಗೆ ವೇಳೆ ಅಹಿತಕರ ಘಟನೆ ನಡೆದಿವೆ. ಈ ಸಂಬಂಧ 20ಕ್ಕೂ ಹೆಚ್ಚು ಎಫ್‌ಐಆರ್‌ ದಾಖಲಾಗಿದ್ದು, 100 ಮಂದಿಯನ್ನು ಆರೋಪಿಗಳನ್ನಾಗಿ ಹೆಸರಿಸಲಾಗಿದೆ’ ಎಂಬ ಅಂಶವನ್ನು ನ್ಯಾಯಪೀಠದ ಗಮನಕ್ಕೆ ತಂದರು.

ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ‘ಕೊನೆಯ ಹಂತದಲ್ಲಿ ಸಲ್ಲಿಸಿರುವ ಅರ್ಜಿದಾರರ ಮನವಿಯನ್ನು ತಕ್ಷಣಕ್ಕೇ ಪರಿಗಣಿಸಲು ಸಾಧ್ಯವಿಲ್ಲ’ ಎಂದು ಪ್ರತಿಕ್ರಿಯಿಸಿ ವಿಚಾರಣೆಯನ್ನು ನವೆಂಬರ್ 3ಕ್ಕೆ ಮುಂದೂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.