ADVERTISEMENT

ಗೌರಿ ಹತ್ಯೆ ಪ್ರಕರಣ; ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್‌ ಬದಲು

ಹಿರಿಯ ವಕೀಲ ಬಾಲನ್‌ ನೇಮಕ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2018, 20:32 IST
Last Updated 17 ಸೆಪ್ಟೆಂಬರ್ 2018, 20:32 IST
ಎಸ್‌. ಬಾಲನ್
ಎಸ್‌. ಬಾಲನ್   

ಬೆಂಗಳೂರು: ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಸರ್ಕಾರದ ಪರ ವಾದ ಮಂಡಿಸುತ್ತಿದ್ದ ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌(ಎಸ್‌ಪಿಪಿ) ಅವರನ್ನು ದಿಢೀರ್ ಬದಲಾವಣೆ ಮಾಡಲಾಗಿದೆ.

ಈ ಹಿಂದೆ ಎಸ್‌ಪಿಪಿಯಾಗಿದ್ದ ಹಿರಿಯ ವಕೀಲ ಶ್ರೀಶೈಲ ವಡವಡಗಿ ಅವರ ನೇಮಕವನ್ನು ರದ್ದುಪಡಿಸಿರುವ ಗೃಹ ಇಲಾಖೆ, ಅವರ ಸ್ಥಾನಕ್ಕೆ ಹಿರಿಯ ವಕೀಲ ಬಾಲನ್ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ.

ಕೋಲಾರದಲ್ಲಿ ಪತಿಯೊಬ್ಬ ತನ್ನ ಪತ್ನಿ ಹಾಗೂ ಮಗುವನ್ನು ಕೊಂದಿದ್ದ ಪ್ರಕರಣ ಹಾಗೂ ಶಾಸಕ ಹರತಾಳ ಹಾಲಪ್ಪ ವಿರುದ್ಧದ ಪ್ರಕರಣದಲ್ಲಿ ಬಾಲನ್ ಅವರು ಎಸ್‌ಪಿಪಿಯಾಗಿ ಕೆಲಸ ಮಾಡಿದ್ದರು.

ADVERTISEMENT

ಗೌರಿ ಹತ್ಯೆ ಸಂಬಂಧ ಮೊದಲ ಆರೋಪಿಯನ್ನು ಎಸ್‌ಐಟಿ ಪೊಲೀಸರು ಬಂಧಿಸುತ್ತಿದ್ದಂತೆ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಅದೇ ವೇಳೆ ವಾದ ಮಂಡಿಸಲೆಂದು ವಡವಡಗಿ ಅವರನ್ನು ಎಸ್‌ಪಿಪಿಯಾಗಿ ನೇಮಕ ಮಾಡಲಾಗಿತ್ತು. ಆದರೆ, ಅವರು ನ್ಯಾಯಾಲಯದ ಕಾರ್ಯಕಲಾಪಕ್ಕೆ ಪದೇ ಪದೇ ಗೈರಾಗುತ್ತಿದ್ದರು. ಅದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದ ಗೌರಿ ಲಂಕೇಶ್‌ ಅವರ ಆಪ್ತರು, ಎಸ್‌ಪಿಪಿ ಬದಲಾವಣೆ ಮಾಡುವಂತೆ ಗೃಹ ಇಲಾಖೆಗೆ ಮನವಿ ಸಲ್ಲಿಸಿದ್ದರು.

‘ಎಸ್‌ಐಟಿ ಅಧಿಕಾರಿಗಳು, ಉತ್ತಮ ರೀತಿಯಲ್ಲಿ ತನಿಖೆ ಮಾಡುತ್ತಿದ್ದಾರೆ. ಅವರ ಕೆಲಸವನ್ನು ಎಸ್‌ಪಿಪಿ ಅವರು ನ್ಯಾಯಾಲಯದ ಗಮನಕ್ಕೆ ತರುವಲ್ಲಿ ಹಿಂದೆ ಬಿದ್ದಿದ್ದರು. ಅವರ ವರ್ತನೆಯು ಆರೋಪಿಗಳ ಪರ ವಕೀಲರಿಗೆ ಅನುಕೂಲ ಮಾಡಿಕೊಡುವ ಸಾಧ್ಯತೆ ಹೆಚ್ಚಿದೆ’ ಎಂದು ಗೌರಿ ಲಂಕೇಶ್ ಆಪ್ತರು ಮನವಿಯಲ್ಲಿ ಉಲ್ಲೇಖಿಸಿದ್ದರು. ಆ ಸಂಬಂಧ ಉನ್ನತ ಅಧಿಕಾರಿಗಳ ಜೊತೆ ಚರ್ಚಿಸಿ ಎಸ್‌ಪಿಪಿಯನ್ನು ಬದಲಾವಣೆ ಮಾಡಲಾಗಿದೆ’ ಎಂದು ಗೃಹ ಇಲಾಖೆ ಮೂಲಗಳು ತಿಳಿಸಿವೆ.

ಪುರಾವೆಗಳು ಹೆಚ್ಚಿರುವ ಸೂಕ್ಷ್ಮ ಪ್ರಕರಣ: ನೇಮಕದ ಬಗ್ಗೆ ‘ಪ್ರಜಾವಾಣಿ‘ ಜೊತೆ ಮಾತನಾಡಿದ ಎಸ್‌.ಬಾಲನ್, ‘ಇದೊಂದು ಪುರಾವೆಗಳು ಹೆಚ್ಚಿರುವ ಸೂಕ್ಷ್ಮ ಪ್ರಕರಣ. ಎಸ್‌ಐಟಿ ಪೊಲೀಸರು ತನಿಖೆ ಪೂರ್ಣಗೊಳಿಸಿದ ಬಳಿಕವೇ ಆರೋಪಿಗಳಿಗೆ ಶಿಕ್ಷೆ ಕೊಡಿಸುವ ಕೆಲಸ ನಮ್ಮದು. ನಂತರವೇ ಎಲ್ಲವನ್ನೂ ಹೇಳುತ್ತೇನೆ’ ಎಂದರು.

‘ನೇಮಕದ ಆದೇಶ ಪ್ರತಿ ಕೈ ಸೇರುತ್ತಿದ್ದಂತೆ, ನ್ಯಾಯಾಲಯಕ್ಕೆ ಹೋಗಿ ವಕಾಲತ್ತು ಹಾಕಿದ್ದೇನೆ. ಪ್ರತಿಯೊಂದು ಕಲಾಪಕ್ಕೂ ಹಾಜರಾಗಲಿದ್ದೇನೆ. ಈ ಹಿಂದಿನ ಎಸ್‌ಪಿಪಿಯನ್ನು ಏಕೆ ಬದಲಾವಣೆ ಮಾಡಲಾಯಿತು ಎಂಬುದರ ಬಗ್ಗೆ ಪ್ರತಿಕ್ರಿಯಿಸಲಾರೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.