ADVERTISEMENT

ಹೆಚ್ಚುತ್ತಿದೆ ‘ಜೆನೆಟಿಕ್‌ ಕುಂಡಲಿ’ ಪರೀಕ್ಷೆ!

ವಂಶದಲ್ಲಿ ಬರುವ ಕಾಯಿಲೆಗಳ ಬಗ್ಗೆ ‘ಭವಿಷ್ಯ’ ಹೇಳುವ ವಿಜ್ಞಾನ

ಎಸ್.ರವಿಪ್ರಕಾಶ್
Published 30 ಜನವರಿ 2019, 20:18 IST
Last Updated 30 ಜನವರಿ 2019, 20:18 IST
ಡಿಎನ್‌ಎ ಸರಪಳಿ
ಡಿಎನ್‌ಎ ಸರಪಳಿ   

ಬೆಂಗಳೂರು: ಮದುವೆಗೆ ಮುನ್ನ ವಧು– ವರರ ಜನ್ಮಕುಂಡಲಿ ನೋಡುವುದು ಭಾರತದಲ್ಲಿ ಸಂಪ್ರದಾಯ. ಆದರೆ, ಇತ್ತೀಚಿನ ದಿನಗಳಲ್ಲಿ ಮದುವೆಗೆ ಮುನ್ನ ಗಂಡು– ಹೆಣ್ಣು ಸ್ವಯಂ ಇಚ್ಛೆಯಿಂದ ‘ಜೆನೆಟಿಕ್‌ ಕುಂಡಲಿ’ ಅಂದರೆ, ಆನುವಂಶಿಕ ಕುಂಡಲಿ ನೋಡುವ ಪರಂಪರೆ ಆರಂಭವಾಗಿದೆ.

ಮದುವೆಯಾದರೆ ಮುಂದೆ ಹುಟ್ಟುವ ಮಕ್ಕಳು ಮತ್ತು ಆ ಬಳಿಕದ ಪೀಳಿಗೆ ಆರೋಗ್ಯವಂತವಾಗಿರುತ್ತವೆಯೇ, ಆನುವಂಶಿಕವಾಗಿ ಕಾಯಿಲೆಗಳು ಬರುತ್ತವೆಯೇ ಎಂಬುದನ್ನು ಗಂಡು–ಹೆಣ್ಣು ಮೊದಲೇ ತಿಳಿದುಕೊಳ್ಳುವುದಕ್ಕೇ ‘ಜೆನೆಟಿಕ್‌ ಕುಂಡಲಿ’ ಎನ್ನಲಾಗುತ್ತದೆ.

‘ವಿದೇಶಗಳಲ್ಲಿ ಮಕ್ಕಳನ್ನು ಪಡೆಯುವುದಕ್ಕೆ ಮುನ್ನ ಗಂಡು ಮತ್ತು ಹೆಣ್ಣು ಜೀನ್‌ಗಳ ಪರೀಕ್ಷೆ ಮಾಡಿಸಿಕೊಳ್ಳುತ್ತಾರೆ. ನಮ್ಮಲ್ಲೂ ಈ ಪ್ರವೃತ್ತಿ ಆರಂಭವಾಗಿದೆ. ಸ್ವಲ್ಪ ವ್ಯತ್ಯಾಸವೆಂದರೆ, ಮದುವೆಗೆ ಮುನ್ನ ಈ ಪರೀಕ್ಷೆ ಮಾಡಿಸಿಕೊಳ್ಳುತ್ತಿದ್ದಾರೆ. ಭಾರತೀಯರಲ್ಲಿ ವಂಶವಾಹಿಗೆ ಸಂಬಂಧಿಸಿದ ಕಾಯಿಲೆ ಪ್ರಮಾಣ ಹೆಚ್ಚಾಗಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ತಳಿ ಪರೀಕ್ಷೆ ಮಾಡಿಸಿಕೊಳ್ಳುವವರ ಸಂಖ್ಯೆ ಹೆಚ್ಚುತ್ತಿದೆ’ ಎಂದು ಮೆಡ್‌ಜಿನೋಮ್‌ ಲ್ಯಾಬ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ವಿ.ಎಲ್‌.ರಾಮ್‌ ಪ್ರಸಾದ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಭಾರತದಲ್ಲಿ ಪ್ರತಿ ವರ್ಷ 10 ಲಕ್ಷ ಮಕ್ಕಳು ಜನಿಸಿದರೆ, ಶೇ 20ರಿಂದ 30ರಷ್ಟು ಶಿಶುಗಳು ವಂಶವಾಹಿ ಕಾಯಿಲೆಗಳಿಂದ ಸಾವನ್ನಪ್ಪುತ್ತಿವೆ.ಮುಖ್ಯವಾಗಿ ಹಿಮೊಫೀಲಿಯಾ, ತಲಸೇಮಿಯಾ, ಸಿಕಲ್‌ಸೆಲ್‌ ಅನಿಮೀಯಾ, ಮಸ್ಕ್ಯೂಲರ್‌ ಡಿಸ್ಟ್ರೋಫಿ, ಟೈಪ್‌ 2 ಡಯಾಬಿಟಿಸ್‌, ಕ್ಯಾನ್ಸರ್‌, ಹೃದ್ರೋಗ ಈ ರೀತಿಯ ಹಲವು ಕಾಯಿಲೆಗಳು ಬರುವುದನ್ನು ಮೊದಲೇ ತಿಳಿದುಕೊಳ್ಳಲು ಸಾಧ್ಯ. ದೇಶದಲ್ಲಿ 7 ಕೋಟಿಗೂ ಹೆಚ್ಚು ಜನಹಿಮೊಫೀಲಿಯಾ, ತಲಸೇಮಿಯಾ, ಸಿಕಲ್‌ಸೆಲ್‌ ಅನಿಮೀಯಾ, ಮಸ್ಕ್ಯೂಲರ್‌ ಡಿಸ್ಟ್ರೋಫಿಗಳಂತ ವಿರಳ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದರು.

ಒಬ್ಬ ವ್ಯಕ್ತಿಯ ಜೀನ್‌ ಅಥವಾ ಆನುವಂಶಿಕ ಧಾತುವಿನಲ್ಲಿ ದೋಷ ಅಥವಾ ಅಪಸಾಮಾನ್ಯತೆ ಇದ್ದರೆ ಅದು ಆತನ ಸಂತಾನಕ್ಕೆ ವರ್ಗಾವಣೆ ಆಗುತ್ತದೆ. ಕೆಲವೊಮ್ಮೆ ನೇರವಾಗಿ ಮಕ್ಕಳಿಗೆ ವರ್ಗಾವಣೆ ಆಗದೇ ಆ ವ್ಯಕ್ತಿಯ ಮೊಮ್ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತದೆ ಎಂದು ರಾಮ್‌ ಪ್ರಸಾದ್‌ ಹೇಳಿದರು.

ಸಗೋತ್ರ ಮತ್ತು ಹತ್ತಿರದ ಸಂಬಂಧಿಗಳಲ್ಲಿ ವಿವಾಹ ಮಾಡಿಕೊಳ್ಳುವ ಸಮುದಾಯಗಳಲ್ಲಿ ಆನುವಂಶಿಕ ಕಾಯಿಲೆಗಳ ಪ್ರಮಾಣ ಅಧಿಕ ಎಂಬುದು ಸಾಕಷ್ಟು ಅಧ್ಯಯನಗಳಲ್ಲಿ ದೃಢಪಟ್ಟಿದೆ. ನಮ್ಮ ಪ್ರಯೋಗಾಲಯಕ್ಕೆ ಬರುತ್ತಿರುವ ಸ್ಯಾಂಪಲ್‌ಗಳಲ್ಲೂ ಇದು ಕಂಡುಬಂದಿದೆ. ವಂಶವಾಹಿ ಮೂಲಕ ಬರುವ ಕಾಯಿಲೆಗಳನ್ನು ಕ್ರಿಸ್ಪಾರ್‌ ಮೂಲಕ ವಂಶವಾಹಿ ತಿದ್ದುಪಡಿ(ಜೀನ್‌ ಎಡಿಟಿಂಗ್‌) ಮಾಡಿ ಗುಣಪಡಿಸುವ ವಿಧಾನ ಬಂದಿದೆ. ಆದರೆ, ಅದು ಎಷ್ಟು ಸುರಕ್ಷಿತ ಎಂಬುದು ಇನ್ನಷ್ಟೇ ಖಾತರಿ ಆಗಬೇಕು ಎಂದು ಹೇಳಿದರು.

ದಂಪತಿ ಮಗು ಪಡೆಯುವುದಕ್ಕೆ ಮೊದಲು ಪರೀಕ್ಷೆ ಮಾಡಿಸಿಕೊಂಡಾಗ, ಗಂಡು ಅಥವಾ ಹೆಣ್ಣು ಯಾರು ಕಾಯಿಲೆ ದಾಟಿಸುವ ವಂಶವಾಹಿನಿ ಹೊಂದಿದ್ದಾರೆ ಎಂಬುದನ್ನು ಪತ್ತೆ ಮಾಡಬಹುದು. ಅವು ಹುಟ್ಟುವ ಮಕ್ಕಳಿಗೆ ವರ್ಗಾವಣೆ ಆಗುತ್ತದೆಯೇ ಎಂಬುದನ್ನೂ ತಿಳಿದುಕೊಳ್ಳಬಹುದು. ಇದಕ್ಕೆ ದಂಪತಿಯ ಕೌಟುಂಬಿಕ ವಂಶವಾಹಿ ಇತಿಹಾಸವನ್ನೂ ಕೆದಕಿ ತೆಗೆಯಲಾಗುತ್ತದೆ ಎಂದು ವಿವರಿಸಿದರು.

500 ಮಂದಿ ವಂಶ ತಳಿ ಪರೀಕ್ಷೆ
ಆನುವಂಶಿಕವಾಗಿ ಮೇಳಾ– ಮೇಳಿ ಆಗುತ್ತದೆಯೇ ಇಲ್ಲವೆ ಎಂಬುದನ್ನು ಪರೀಕ್ಷೆ ಮಾಡಿಸಿಕೊಳ್ಳುವವರ ಸಂಖ್ಯೆ ತಿಂಗಳಿಗೆ 500 ದಾಟಿದೆ. ಈ ಕುರಿತು ಸಾರ್ವಜನಿಕರಲ್ಲಿ ಅರಿವು ತೀರಾ ಕಡಿಮೆ ಇದೆ. ಇಂತಹ ಪರೀಕ್ಷೆಗಳನ್ನು ವೈದ್ಯರ ಸಲಹೆ ಮೇರೆಗೆ ಮಾತ್ರ ನಡೆಸಲಾಗುತ್ತದೆ. ಗಂಡು–ಹೆಣ್ಣಿನ ರಕ್ತ ಪಡೆದು ಪ್ರಯೋಗಾಲಯದಲ್ಲಿ ಡಿಎನ್‌ಎ ಪ್ರತ್ಯೇಕಿಸಿ, ಅದು ತನ್ನಲ್ಲಿ ಅಡಗಿಸಿಕೊಂಡಿರುವ ಗೋಪ್ಯತೆಯನ್ನು ಅನಾವರಣಗೊಳಿಸಲಾಗುತ್ತದೆ. ಮೂರು ರೀತಿಯ ಪರೀಕ್ಷೆ ನಡೆಸಲಾಗುತ್ತದೆ. ಮೊದಲನೆಯದು 100 ಜೀನ್‌ಗಳು, ಎರಡನೆಯದು 500 ಮತ್ತು ಮೂರನೆಯದು 2000 ಜೀನ್‌ಗಳ ಪರೀಕ್ಷೆ ನಡೆಸಲಾಗುತ್ತದೆ ಎಂದು ವೈದ್ಯಕೀಯ ತಳಿ ವಿಜ್ಞಾನ ಸಲಹಾ ತಜ್ಞೆ ಡಾ.ಶೀತಲ್‌ ಶಾರದಾ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.