ADVERTISEMENT

ಮೀಸಲಾತಿ ಕುರಿತು ನಿವೃತ್ತ ನ್ಯಾಯಮೂರ್ತಿಯಿಂದ ವರದಿ: ಕೆ.ಎಸ್.ಈಶ್ವರಪ್ಪ

ಬಾಗಲಕೋಟೆಯಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2021, 5:37 IST
Last Updated 25 ಫೆಬ್ರುವರಿ 2021, 5:37 IST
ಕೆ.ಎಸ್‌ ಈಶ್ವರಪ್ಪ
ಕೆ.ಎಸ್‌ ಈಶ್ವರಪ್ಪ    

ಬಾಗಲಕೋಟೆ: ರಾಜ್ಯದಲ್ಲಿ ಪರಿಶಿಷ್ಟ ಪಂಗಡ ಹಾಗೂ 2ಎ ಮೀಸಲಾತಿಗೆ ಸಂಬಂಧಪಟ್ಟಂತೆ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಮೂಲಕ ವರದಿ ತರಿಸಿಕೊಳ್ಳಲುಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದುಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವರ ವರದಿ ಏನು ಬರುತ್ತೋ ಅದನ್ನು ನೋಡಿ ಮುಂದಿನ ತೀರ್ಮಾನ ಕೈಗೊಳ್ಳಲಿದ್ದೇವೆ ಎಂದರು.

ಸಿದ್ದರಾಮಯ್ಯ ಡಬಲ್‌ಸ್ಟ್ಯಾಂಡರ್ಡ್: ಟೀಕೆ

ADVERTISEMENT

’ಕುರುಬ ಸಮಾಜಕ್ಕೆ ಎಸ್‌ಟಿ ಮೀಸಲಾತಿ ಪರವಾಗಿ ಎಂದಿಗೂ ನಾನಾಗಿಯೇ ತೀರ್ಮಾನ ತೆಗೆದುಕೊಂಡಿಲ್ಲ. ನಿರಂಜನಾನಂದಪುರಿ, ಈಶ್ವರನಾನಂಪುರಿ ಸ್ವಾಮೀಜಿ ಹೋರಾಟ ಶುರು ಮಾಡಿದ್ದರು. ಆದರೆ ಸಿದ್ದರಾಮಯ್ಯ ಮಾತ್ರ ಹೋರಾಟಕ್ಕೆ ಆರ್‌ಎಸ್‌ಎಸ್‌ನವರು ದುಡ್ಡು ಕೊಟ್ಟಿದ್ದಾರೆ ಎಂದು ಹೇಳಿದ್ದು ನಮಗೆಲ್ಲಾ ನೋವು ತಂದಿದೆ‘ ಎಂದು ಹೇಳಿದರು.

ಮೊದಲು ಸ್ವಾಮೀಜಿಗಳು ಸಿದ್ದರಾಮಯ್ಯ ಮನೆಗೆ ಹೋಗಿದ್ರು. ಆಗ ನೀವು ಹೋರಾಟ ಮಾಡಿ ಬೆಂಬಲ ಕೊಡ್ತುವಿ ಆದರೆ ಭಾಗಿಯಾಗಲ್ಲ ಅಂದಿದ್ರು. ಮುಂದೆ ಯಾಕೆ ಸಿದ್ದರಾಮಯ್ಯ ಡಬಲ್‌ಸ್ಟ್ಯಾಂಡರ್ಡ್ ಆದ್ರೋ ಗೊತ್ತಿಲ್ಲ ಎಂದು ಟೀಕಿಸಿದರು.

ಸಮಾಜಕ್ಕೆ ಮೀಸಲಾತಿಗೆ ಆಗ್ರಹಿಸಿ ಅವರು (ಸಿದ್ದರಾಮಯ್ಯ) ಇನ್ನೊಂದು ಸಮಾವೇಶ ಮಾಡ್ತಾರೋ ಬಿಡುತ್ತಾರೋ ಅವರಿಗೆ ಬಿಟ್ಟಿದೆ. ಮಾಡಬಾರದು ಎಂದು ನಾನು ಹೇಳಲ್ಲ.70 ವರ್ಷ ಸಿಗದ ಮೀಸಲಾತಿ,ಯಾರೋಬ್ರು ಹೋರಾಟ ಮಾಡಿದ ತಕ್ಷಣ ನಾಳೆ ಬೆಳಿಗ್ಗೆಯೇ ಸಿಗುತ್ತದೆ ಎಂಬುದೇನೂ ಇಲ್ಲ ಎಂದು ಮಾರ್ಮಿಕವಾಗಿ ಹೇಳಿದರು.

ಸಿದ್ದರಾಮಯ್ಯ ಅಹಿಂದ ಸಮಾವೇಶ ಮಾಡುವ ಬಗ್ಗೆ ಪ್ರಶ್ನೆಗೆ ನಮಗೇನು ಸಂಬಂಧ ಅವ್ರಿಗೆ ಕೇಳಿ ಎಂದು ಪ್ರತಿಕ್ರಿಯಿಸಿದರು.

ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗಾಗಿ ಕೂಡಲಸಂಗಮದ ಬಸವಜಯಮೃತ್ಯುಂಜಯ ಸ್ವಾಮೀಜಿ ಮಾರ್ಚ್ 4ರ ಡೆಡ್ಲೈನ್ ನೀಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಈಶ್ವರಪ್ಪ, ಒತ್ತಡದ ಮೂಲಕ ಮೀಸಲಾತಿ ತೆಗೆದುಕೊಳ್ಳೋಕೆ ಆಗಲ್ಲ. ಹಾಗಾದರೆ ಎಲ್ಲಾ ಸಮಾಜದ ಸ್ವಾಮೀಜಿಗಳು ಧರಣಿ, ಉಪವಾಸ ಸತ್ಯಾಗ್ರಹ ಕುಳಿತುಕೊಳ್ತೀವಿ ಎಂದು ಶುರು ಮಾಡ್ತಾರೆ. ಆ ರೀತಿಮೀಸಲಾತಿ ತೆಗೆದುಕೊಳ್ಳಲು ಸಾಧ್ಯವೇ ಇಲ್ಲ ಎಂದರು.

ಈಗಾಗಲೇ ಮೀಸಲಾತಿ ತೆಗೆದುಕೊಂಡು ಸಮಾಜಗಳಲ್ಲಿನ ಶ್ರೀಮಂತ ವರ್ಗಕ್ಕೆ ಇನ್ನೂ ಮೀಸಲಾತಿ ಮುಂದುವರೆದಿದೆ. ಅದು ದುರ್ದೈವ. ಶ್ರೀಮಂತರು ಮೀಸಲಾತಿ ಲಾಭ ಪಡೆದಿದ್ದು ಹೋಗ್ಬೇಕು,ಅದು ಬಡವರಿಗೆ ಸಿಗಬೇಕು. ಕ್ರಿಮಿಲೇಯರ್ (ಕೆನೆ ಪದರು) ಪದ್ಧತಿ ಜಾರಿಗೆ ಬರಬೇಕು. ಅದೇ ಅಪೇಕ್ಷೆಅಂಬೇಡ್ಕರ್ ಅವರಿಗೂ ಇತ್ತು. ಸ್ವಾತಂತ್ರ್ಯ ಬಂದ ಬಳಿಕ ಅವರೇ ಎಂಎಲ್ಎ, ಎಂಪಿ, ಮಂತ್ರಿ.. ಕೇಂದ್ರ ಮಂತ್ರಿ, ಅವರನ್ನು ಬಿಟ್ಟರೆಅವರ ಮಕ್ಕಳು ಮಂತ್ರಿ ಆಗುತ್ತಿದ್ದಾರೆ. ಹೀಗೆಯೇ ಮುಂಚೆಯಿಂದಲೂ ಲಾಭ ಮಾಡಿಕೊಂಡು ಬಂದಿದ್ದಾರೆ. ಇದು ಆಗಬಾರದು. ಬರುವ ದಿನಗಳಲ್ಲಿ ಆ ದಿಕ್ಕಿನಲ್ಲಿ ಚಿಂತನೆ ಆಗೋದು ಒಳ್ಳೆಯದು ಎಂದರು.

ಮಾಧ್ಯಮದವರ ವಿರುದ್ಧ ಗರಂ..

’ಮೀಸಲಾತಿ ಹೋರಾಟದಲ್ಲಿ ಭಾಗಿಯಾಗದಂತೆ ನಿಮಗೆ ಬಿಜೆಪಿ ಹೈಕಮಾಂಡ್ ನೋಟಿಸ್ ಕೊಟ್ಟಿದೆಯೇ‘ ಎಂಬ ಪ್ರಶ್ನೆ ಕೇಳಿದ ಸುದ್ದಿ ವಾಹಿನಿಯೊಂದರಪ್ರತಿನಿಧಿ ಮೇಲೆ ಹರಿಹಾಯ್ದ ಸಚಿವ ಕೆ.ಎಸ್.ಈಶ್ವರಪ್ಪ, ’ನನಗೆನೋಟಿಸ್, ಬೆಳಿಗ್ಗೆನೇ ಕುಡಿದಿದ್ಯಾ ನೀನು‘ ಎಂದು ಮರುಪ್ರಶ್ನಿಸಿದರು.

ಶಾಸಕ ಬಸವನಗೌಡ ಪಾಟೀಲ ಯತ್ನಾಳ್ ರಾಜ್ಯ ಸರ್ಕಾರದ ವಿರುದ್ಧ ಹೇಳಿಕೆ ನೀಡುತ್ತಿರುವ ವಿಚಾರ ಪ್ರಸ್ತಾಪವಾಗುತ್ತಿದ್ದಂತೆಯೇ ’ನಿಮಗೆ ಉದ್ಯೋಗ ಇಲ್ಲ. ನನಗೆ ಉದ್ಯೋಗ ಇದೆ ನಡೀರಿ‘ ಎಂದು ಮಾಧ್ಯಮದವರನ್ನು ಅಪಹಾಸ್ಯ ಮಾಡಿ ತೆರಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.