ADVERTISEMENT

2 ಕೋಟಿ ಡೋಸ್‌ ಕೋವಿಡ್ ಲಸಿಕೆ ಖರೀದಿಗೆ ಜಾಗತಿಕ ಟೆಂಡರ್‌: ಎರಡೂ ಬಿಡ್‌ ತಿರಸ್ಕೃತ

​ಪ್ರಜಾವಾಣಿ ವಾರ್ತೆ
Published 29 ಮೇ 2021, 20:43 IST
Last Updated 29 ಮೇ 2021, 20:43 IST
   

ಬೆಂಗಳೂರು: ‘ಎರಡು ಕೋಟಿ ಡೋಸ್‌ ಕೋವಿಡ್‌ ಲಸಿಕೆ ಖರೀದಿಗೆ ರಾಜ್ಯ ಸರ್ಕಾರ ಆಹ್ವಾನಿಸಿದ್ದ ಮುಕ್ತ ಅಂತರರಾಷ್ಟ್ರೀಯ ಟೆಂಡರ್‌ನಲ್ಲಿ ಭಾಗವಹಿಸಿದ್ದ ಎರಡೂ ಕಂಪನಿಗಳ ಪ್ರಸ್ತಾವವನ್ನು ತಿರಸ್ಕರಿಸಲಾಗಿದೆ’ ಎಂದು ರಾಜ್ಯ ಕೋವಿಡ್‌ ಪಡೆಯ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್‌. ಅಶ್ವತ್ಥನಾರಾಯಣ ತಿಳಿಸಿದರು.

ಸುದ್ದಿಗಾರರ ಜೊತೆ ಶನಿವಾರ ಮಾತನಾಡಿದ ಅವರು, ‘ಸ್ಫುಟ್ನಿಕ್ ಲಸಿಕೆ ಪೂರೈಸಲು ಮುಂಬೈ ಮತ್ತು ದೆಹಲಿಯ ಕಂಪನಿಗಳು ಬಿಡ್‌ ಸಲ್ಲಿಸಿದ್ದವು. ಆದರೆ, ಈ ಕಂಪನಿಗಳು ನಮೂದಿಸಿದ್ದ ದರ ಸೇರಿದಂತೆ ಇತರ ಅಂಶಗಳು ಕಾರ್ಯಸಾಧು ಅಲ್ಲ. ಹೀಗಾಗಿ, ಟೆಂಡರ್ ಅವಧಿಯನ್ನು ಮತ್ತೆ ವಿಸ್ತರಿಸಲು ನಿರ್ಧರಿಸಲಾಗಿದೆ’ ಎಂದರು.

‘ಟೆಂಡರ್‌ನಲ್ಲಿ ಕೇವಲ ಎರಡು ಕಂಪನಿಗಳು ಭಾಗವಹಿಸಿವೆ. ಆದರೆ, ಈ ಕಂಪನಿಗಳು ಲಸಿಕೆ ತಯಾರಕರಲ್ಲ. ಲಸಿಕೆ ಸರಬರಾಜು ಮಾಡುವ ವಿತರಕರು’ ಎಂದು ಸ್ಪಷ್ಟಪಡಿಸಿದರು.

ADVERTISEMENT

ಸೋಂಕು ಇಳಿಮುಖ: ‘ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಇಳಿಮುಖ ಆಗುತ್ತಿದೆ. ಸೋಂಕು ದೃಢಪಡುವ ಪ್ರಮಾಣವೂ ಕಡಿಮೆಯಾಗುತ್ತಿದೆ.ಆರ್‌ಟಿಪಿಸಿಆರ್‌ ಪರೀಕ್ಷೆ ಮತ್ತು ಆರ್‌ಎಟಿ ಹೆಚ್ಚಿಸಲು ಸೂಚಿಸಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.