ADVERTISEMENT

ಮಾಲೀಕರ ಮನೆಯಲ್ಲೇ ಚಿನ್ನಾಭರಣ ಕಳವು: ಅಟ್ಟಿಕಾ ಗೋಲ್ಡ್‌ ಕಂಪನಿ ವ್ಯವಸ್ಥಾಪಕ ಬಂಧನ

ಬಸವನಗುಡಿ ಪೊಲೀಸ್‌ ಠಾಣಾ ವ್ಯಾಪ್ತಿ: ಮನೆಯ ಕೆಲಸಕ್ಕಿದ್ದ ಮಾಲೀಕರ ಮನೆಯಲ್ಲೇ ಚಿನ್ನಾಭರಣ ಕಳವು

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2022, 6:37 IST
Last Updated 29 ಡಿಸೆಂಬರ್ 2022, 6:37 IST
ಬಂಧಿತ ಆರೋಪಿಗಳ ಜತೆಗೆ ಕಾರ್ಯಾಚರಣೆ ನಡೆಸಿದ ಪೊಲೀಸ್‌ ತಂಡ
ಬಂಧಿತ ಆರೋಪಿಗಳ ಜತೆಗೆ ಕಾರ್ಯಾಚರಣೆ ನಡೆಸಿದ ಪೊಲೀಸ್‌ ತಂಡ   

ಬೆಂಗಳೂರು: ನಗರದ ಬಸವನಗುಡಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಕೆಲಸಕ್ಕಿದ್ದ ಮನೆಯಿಂದಲೇ ಚಿನ್ನಾಭರಣ ಕಳವು ಮಾಡಿ ತಲೆಮರೆಸಿಕೊಂಡಿದ್ದ ಆರೋಪಿ ಹಾಗೂ ಆರೋಪಿಯಿಂದ ಚಿನ್ನಾಭರಣ ಖರೀದಿಸಿದ್ದ ಅಟ್ಟಿಕಾ ಗೋಲ್ಡ್‌ ಕಂಪನಿಯ ವ್ಯವಸ್ಥಾಪಕ ಸೇರಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನ ಬೆಳ್ಳೂರು ಗ್ರಾಮದ ನಿವಾಸಿ ಜೆ.ಮನೋಜ್‌ (26) ಹಾಗೂ ಆರೋಪಿಯಿಂದ ಚಿನ್ನಾಭರಣ ಖರೀದಿಸಿದ್ದ ತಿಲಕ್‌ನಗರ ಬಿಬಿಟಿ ಪ್ರದೇಶದ ನಿವಾಸಿ ಶಿವು (39) ಬಂಧಿತರು.

‘ಬಂಧಿತರಿಂದ ₹ 25 ಲಕ್ಷ ಮೌಲ್ಯದ 503 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ADVERTISEMENT

‘ಆರೋಪಿಯು ಒಂದು ವರ್ಷದಿಂದ ಮನೆಗೆಲಸ ಮಾಡಿಕೊಂಡಿದ್ದ. ಆ ಸಂದರ್ಭದಲ್ಲಿ ಮಾಲೀಕರ ವಿಶ್ವಾಸ ಸಹ ಗಳಿಸಿದ್ದ. ಮಾಲೀಕರು ಕುಟುಂಬಸ್ಥರ ಜೊತೆಗೆ ಕೆಲಸದ ನಿಮಿತ್ತ ಹೊರಗಡೆ ತೆರಳಿದಾಗ ಆರೋಪಿಗೆ ಮನೆಯ ಜವಾಬ್ದಾರಿ ವಹಿಸಿದ್ದರು. ಆಗ ಮನೆಯಲ್ಲಿದ್ದ ಚಿನ್ನಾಭರಣ ಕಳವು ಮಾಡಿ ಆಟ್ಟಿಕಾ ಗೋಲ್ಡ್‌ ಕಂಪನಿಯ ಶಿವು ಅವರ ನೆರವಿನಿಂದ ಮಾರಾಟ ಮಾಡಿದ್ದ. ಅದರಿಂದ ಬಂದ ಹಣದಲ್ಲಿ ವಿಲಾಸಿ ಜೀವನ ನಡೆಸುತ್ತಿದ್ದ. ಮನೆಯವರಿಗೆ ಅನುಮಾನ ಬಂದು ವಿಚಾರಣೆ ನಡೆಸುತ್ತಿದ್ದಂತೆಯೇ ಆರೋಪಿ ತಲೆಮರೆಸಿಕೊಂಡಿದ್ದ. ದೂರು ದಾಖಲಾದ ಮೇಲೆ ಆರೋಪಿಯ ಪತ್ತೆಗೆ ವಿಶೇಷ ತಂಡ ರಚಿಸಲಾಗಿತ್ತು’ ಎಂದು ದಕ್ಷಿಣ ವಿಭಾಗದ ಡಿಸಿಪಿ ಪಿ.ಕೃಷ್ಣಕಾಂತ್‌ ತಿಳಿಸಿದ್ದಾರೆ.

₹ 8 ಲಕ್ಷ ನಗದು ಜಪ್ತಿ: ಜೆ.ಜೆ. ನಗರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಕಳ್ಳತನ ಪ್ರಕರಣದ ಆರೋಪಿಯನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ.

ನಯೀಂ ಷರೀಫ್‌ (26) ಬಂಧಿತ ವ್ಯಕ್ತಿ.ಬಂಧಿತನಿಂದ ಒಂದು ಜೊತೆ ಓಲೆ, ನಾಲ್ಕು ಚಿನ್ನದ ಉಂಗುರ, ಮೂರು ಬೆಳ್ಳಿಯ ಉಂಗುರ ಸೇರಿದಂತೆ ಒಟ್ಟು 80 ಗ್ರಾಂ ಚಿನ್ನಾಭರಣ ಹಾಗೂ ₹ 8 ಲಕ್ಷ ನಗದು ಜಪ್ತಿ ಮಾಡಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.