ಬೆಂಗಳೂರು: ‘ನರೇಂದ್ರ ಮೋದಿ ಅವರು 2014ರಲ್ಲಿ ದೇಶದ ಪ್ರಧಾನ ಮಂತ್ರಿಯಾದಾಗ ₹2,800 ಇದ್ದ ಒಂದು ಗ್ರಾಂ ಚಿನ್ನದ ಬೆಲೆ ಈಗ ₹7,500 ಆಗಿದೆ. ಮಹಿಳೆಯರು ಮಂಗಳಸೂತ್ರ ಮಾಡಿಸಲೂ ಆಗದಷ್ಟು ಚಿನ್ನದ ಬೆಲೆ ಏರಿಕೆಗೆ ಯಾರು ಕಾರಣ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದರು.
ಸುದ್ದಿಗಾರರ ಜತೆ ಗುರುವಾರ ಮಾತನಾಡಿದ ಅವರು, ‘ದಕ್ಷಿಣ ಭಾರತದಲ್ಲಿ ಬಿಜೆಪಿಗೆ ನೆಲೆ ಇಲ್ಲ. ಕರ್ನಾಟಕದಲ್ಲೂ ಈ ಬಾರಿ 10 ಸ್ಥಾನ ಪಡೆಯಲ್ಲ. ಹಾಗಾಗಿ, ಹತಾಶೆಯಿಂದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ತಮ್ಮ ತಾಯಿ ದೇಶಕ್ಕಾಗಿ ತನ್ನ ಮಾಂಗಲ್ಯಸೂತ್ರ ತ್ಯಾಗ ಮಾಡಿದ್ದಾರೆ ಎಂಬ ಪ್ರಿಯಾಂಕಾ ಗಾಂಧಿ ಅವರ ನೋವಿನ ಹೇಳಿಕೆಯನ್ನು ಮೋದಿ ಅರಿತುಕೊಳ್ಳಬೇಕು’ ಎಂದರು.
‘ನಮ್ಮ ದೇಶ, ಧರ್ಮ ಕಾಪಾಡಿಕೊಳ್ಳಲು ನಾನು ನಮ್ಮ ಪಕ್ಷಕ್ಕೂ ಸಲಹೆ ನೀಡುವೆ. ದೇಶದ ಪರಂಪರೆ, ಪದ್ಧತಿ ಮುಂದುವರಿಯಬೇಕು. ಆಸ್ತಿ ವರ್ಗಾವಣೆಗೆ ಕಾಂಗ್ರೆಸ್ ಅವಕಾಶ ನೀಡುವುದಿಲ್ಲ. ಕಾಂಗ್ರೆಸ್ ಪ್ರಣಾಳಿಕೆಯ ಅಂಶಗಳೇ ಅಂತಿಮ. ಅದರಿಂದಾಚೆಗಿನ ವಿಷಯಗಳಿಗೂ, ಪಕ್ಷಕ್ಕೂ ಸಂಬಂಧವಿಲ್ಲ. ದೇಶದ ಸಂಪತ್ತನ್ನು ನಗದೀಕರಣ ಮಾಡಲು ಬಿಜೆಪಿಯೇ ಮುಂದಾಗಿತ್ತು ಎಂದು ಸುದ್ದಿ ಹರಿದಾಡಿತ್ತು’ ಎಂದು ಹೇಳಿದರು.
ಆದಾಯ ತೆರಿಗೆ ಅಧಿಕಾರಿಗಳು ಕಾಂಗ್ರೆಸ್ ನಾಯಕರನ್ನು ಗುರಿಯಾಗಿಸಿ ದಾಳಿ ಮಾಡುತ್ತಿದ್ದಾರೆ. ಹೆದರಿಸುತ್ತಿದ್ದಾರೆ. ಅವರ ಬಳಿ ಸಿಕ್ಕ ಹಣ ಕಾಂಗ್ರೆಸ್ ಹಾಗೂ ಡಿ.ಕೆ. ಶಿವಕುಮಾರ್ ಅವರ ಹಣ ಎಂದು ಹೇಳಲು ಒತ್ತಾಯ ಮಾಡುತ್ತಿದ್ದಾರೆ. ಇಡೀ ದಿನ ಕೂರಿಸಿಕೊಂಡು ಚುನಾವಣಾ ಪ್ರಚಾರಕ್ಕೆ ಹೋಗುವುದನ್ನು ತಡೆಯುತ್ತಿದ್ದಾರೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರವನ್ನು ಗುರಿಯಾಗಿಸಿಕೊಂಡಿದ್ದಾರೆ. ಅತ್ತ ಬಿಜೆಪಿ ಹಣ ಹಂಚುತ್ತಿದ್ದರೂ, ಆ ಪಕ್ಷದ ಯಾವ ನಾಯಕರ ಮನೆಯ ಮೇಲೂ ದಾಳಿ ನಡೆಸುತ್ತಿಲ್ಲ ಎಂದು ದೂರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.