ADVERTISEMENT

ಐಶ್ವರ್ಯಾ ವಿರುದ್ಧದ ಚಿನ್ನಾಭರಣ ವಂಚನೆ ಆರೋಪ:ವಿನಯ ಕುಲಕರ್ಣಿ ಅರ್ಜಿಗೆ ED ಆಕ್ಷೇಪ

ಐಶ್ವರ್ಯಾ ಗೌಡ ವಿರುದ್ಧದ ಚಿನ್ನಾಭರಣ ವಂಚನೆ ಆರೋಪ

​ಪ್ರಜಾವಾಣಿ ವಾರ್ತೆ
Published 15 ಮೇ 2025, 0:30 IST
Last Updated 15 ಮೇ 2025, 0:30 IST
ಐಶ್ವರ್ಯಾ ಗೌಡ
ಐಶ್ವರ್ಯಾ ಗೌಡ   

ಬೆಂಗಳೂರು: ‘ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನಾಭರಣ ವಂಚಿಸಿದ ಆರೋಪದಡಿ ಐಶ್ವರ್ಯಾ ಗೌಡ ಅಲಿಯಾಸ್‌ ನವ್ಯಶ್ರೀ ವಿರುದ್ಧ ದಾಖಲಾಗಿರುವ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ನನಗೂ ಜಾರಿಗೊಳಿಸಿರುವ ಸಮನ್ಸ್‌ ರದ್ದುಪಡಿಸಬೇಕು’ ಎಂದು ಕೋರಿ ಶಾಸಕ ವಿನಯ್‌ ಕುಲಕರ್ಣಿ ಸಲ್ಲಿಸಿರುವ ಅರ್ಜಿಗೆ ಇ.ಡಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ಈ ಕುರಿತಂತೆ ಸಮನ್ಸ್‌ ರದ್ದು ಕೋರಿ ವಿನಯ ಕುಲಕರ್ಣಿ ಸಲ್ಲಿಸಿರುವ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಶಿವಶಂಕರ ಅಮರಣ್ಣವರ ಅವರಿದ್ದ ರಜಾಕಾಲದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ವಿನಯ ಕುಲಕರ್ಣಿ ಪರ ಪದಾಂಕಿತ ಹಿರಿಯ ವಕೀಲ ಸಂದೇಶ್‌ ಜೆ. ಚೌಟ, ‘ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ–2002ರ (ಪಿಎಂಎಲ್‌ಎ) ಅಡಿಯಲ್ಲಿ  ಅಧಿಕಾರ ಹೊಂದಿರುವ ಸಕ್ಷಮ ಪ್ರಾಧಿಕಾರದ ಅಧಿಕಾರಿಯು ವಿನಯ್‌ ಕುಲಕರ್ಣಿ ಅವರಿಗೆ ಸಮನ್ಸ್‌ ಜಾರಿ ಮಾಡಿಲ್ಲ. ಸಮನ್ಸ್‌ನಲ್ಲಿ ಮೂಲ ಅಪರಾಧ ಯಾವುದು ಎಂಬುದನ್ನೂ ಹೇಳಲಾಗಿಲ್ಲ. ಐಶ್ವರ್ಯಾ ಗೌಡ ರಿಮ್ಯಾಂಡ್‌ ಅರ್ಜಿಯಲ್ಲಿಯೂ ವಿನಯ್‌ ಕುಲಕರ್ಣಿ ಬಗ್ಗೆ ಯಾವುದೇ ಉಲ್ಲೇಖವಿಲ್ಲ’ ಎಂದು ನ್ಯಾಯಪೀಠಕ್ಕೆ ವಿವರಿಸಿದರು.

ADVERTISEMENT

ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಇ.ಡಿ ಪರ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಕೆ.ಅರವಿಂದ ಕಾಮತ್‌, ‘ಇ.ಡಿ ಸಮನ್ಸ್‌ ಅನ್ನು ಪ್ರಶ್ನಿಸುವಂತಿಲ್ಲ ಎಂದು ಹೈಕೋರ್ಟ್‌ನ ವಿಭಾಗೀಯ ನ್ಯಾಯಪೀಠ ಈಗಾಗಲೇ ನೀಡಿರುವ ಆದೇಶದ ಪೂರ್ವನಿದರ್ಶನವಿದೆ. ಹೀಗಾಗಿ, ಮಧ್ಯಂತರ ಪರಿಹಾರ ನೀಡುವುದನ್ನು ಪರಿಗಣಿಸುವುದಾದರೆ ನಮ್ಮ ವಾದವನ್ನೂ ಆಲಿಸಬೇಕು’ ಎಂದು ಮನವಿ ಮಾಡಿದರು.

‘ಅರ್ಜಿದಾರರು, ರಜಾಕಾಲದ ಈ ನ್ಯಾಯಪೀಠದ ಮುಂದೆ ಏಕೆ ಬಂದಿದ್ದಾರೆ? ಅಂತಹ ತುರ್ತು ಏನಿದೆ? ತುರ್ತಿನ ಕುರಿತು ಪೀಠಕ್ಕೆ ಮನವರಿಕೆ ಮಾಡಿಕೊಡುವ ಬದಲಾಗಿ, ವಿನಯ್‌ ಪರ ವಕೀಲರು ಮೆರಿಟ್‌ ಮೇಲೆ ವಾದ ಮಂಡಿಸಿದ್ದಾರೆ. ಹಾಗಾಗಿ, ಈ ಅರ್ಜಿಯನ್ನು ರಜಾಕಾಲದ ಬಳಿಕ ಪರಿಗಣಿಸಬಹುದು. ಒಂದು ವೇಳೆ ನ್ಯಾಯಪೀಠವು ಮಧ್ಯಂತರ ಪರಿಹಾರ ನೀಡಲು ವಾದಾಂಶವನ್ನು ಪರಿಗಣಿಸುವುದಾದರೆ, ನಮ್ಮ ವಾದವನ್ನೂ ಆಲಿಸಬೇಕು’ ಎಂದರು.

ಇದೇ ಪ್ರಕರಣದ ಮತ್ತೊಬ್ಬ ಅರ್ಜಿದಾರರಾದ, ಮೆಸರ್ಸ್‌ ಎಂ.ಎನ್‌.ರಮೇಶ್‌ ಎಂಜಿನಿಯರ್ಸ್‌ ಅಂಡ್‌ ಕಂಟ್ರ್ಯಾಕ್ಟರ್ಸ್‌ನ ಎಂ.ಎನ್‌.ರಮೇಶ್‌ ಪರ ಪದಾಂಕಿತ ಹಿರಿಯ ವಕೀಲ ಅಶೋಕ ಹಾರನಹಳ್ಳಿ ಅವರು, ‘ಅಪರಾಧ ಪ್ರಕ್ರಿಯೆ ಇಲ್ಲದೇ ಇದ್ದರೂ ಅರ್ಜಿದಾರರ ಪರ, ಪಿಎಂಎಲ್‌ಎ ಕಲಂ 17ರ ಅಡಿ ಸಮನ್ಸ್‌ ಜಾರಿಗೊಳಿಸಿರುವುದು ಕಾನೂನು ಬಾಹಿರ ಕ್ರಮ’ ಎಂದು ಪ್ರತಿಪಾದಿಸಿದರು. ವಾದ–ಪ್ರತಿವಾದ ಆಲಿಸಿದ ನ್ಯಾಯಪೀಠ ವಿಚಾರಣೆಯನ್ನು ಇದೇ 15ಕ್ಕೆ ಮುಂದೂಡಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.