ADVERTISEMENT

ಮುತ್ತೂಟ್‌ ಫೈನಾನ್ಸ್‌ನಲ್ಲಿ ₹ 16 ಕೋಟಿ ಮೌಲ್ಯದ ಚಿನ್ನ ಕಳವು 

ಗೋಡೆ ಕೊರೆದು ಒಳನುಗ್ಗಿದ ಕಳ್ಳರು * ಕೆಲಸಕ್ಕಿದ್ದ ಸಿಬ್ಬಂದಿಯಿಂದ ಕೃತ್ಯ ಶಂಕೆ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2019, 20:30 IST
Last Updated 24 ಡಿಸೆಂಬರ್ 2019, 20:30 IST
ಪುಲಿಕೇಶಿನಗರದಲ್ಲಿರುವ ಮುತ್ತೂಟ್ ಫೈನಾನ್ಸ್ ಕಚೇರಿ
ಪುಲಿಕೇಶಿನಗರದಲ್ಲಿರುವ ಮುತ್ತೂಟ್ ಫೈನಾನ್ಸ್ ಕಚೇರಿ   

ಬೆಂಗಳೂರು: ಪುಲಿಕೇಶಿನಗರ ಠಾಣೆ ವ್ಯಾಪ್ತಿಯಲ್ಲಿರುವ ಮುತ್ತೂಟ್ ಫೈನಾನ್ಸ್‌ ಕಚೇರಿಯಲ್ಲಿ ಸಿನಿಮೀಯ ರೀತಿಯಲ್ಲಿ ಕಳ್ಳತನ ನಡೆಸಿರುವ ದುಷ್ಕರ್ಮಿಗಳು, ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕದ್ದೊಯ್ದಿದ್ದಾರೆ.

ಲಿಂಗರಾಜಪುರ ಮೇಲ್ಸೇತುವೆಗೆ ಹೊಂದಿಕೊಂಡಿರುವಎಸ್ಸಾರ್ ಕಾಂಪ್ಲೆಕ್ಸ್‌ನ ಮೊದಲ ಮಹಡಿಯಲ್ಲಿ ಕಚೇರಿ ಇದೆ. ಕಚೇರಿಯ ಶೌಚಾಲಯದ ಗೋಡೆ ಕೊರೆದು ಕೃತ್ಯ ಎಸಗಿ ಕಳ್ಳರು ಪರಾರಿಯಾಗಿದ್ದಾರೆ.

ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ನಗರ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್, ‘ಅಂದಾಜು ₹ 16 ಕೋಟಿ ಮೌಲ್ಯದ ಚಿನ್ನದ ಆಭರಣ ಕಳುವಾಗಿರುವ ಮಾಹಿತಿ ಇದೆ. ಅದರ ಪ್ರಮಾಣ ಇನ್ನು ಹೆಚ್ಚಿರುವುದಾಗಿ ಮುತ್ತೂಟ್ ಫೈನಾನ್ಸ್‌ನವರು ಹೇಳುತ್ತಿದ್ದು, ಅವರೇ ಲೆಕ್ಕ ಮಾಡುತ್ತಿದ್ದಾರೆ’ ಎಂದು ಹೇಳಿದರು.

ADVERTISEMENT

‘ಕಚೇರಿಯಲ್ಲಿ ಕೆಲಸಕ್ಕಿದ್ದ ಸಿಬ್ಬಂದಿಯೇ ಕೃತ್ಯದಲ್ಲಿ ಶಾಮೀಲಾಗಿರುವ ಶಂಕೆ ಇದೆ. ಕೆಲವರು ನಾಪತ್ತೆಯಾಗಿದ್ದು, ಅವರ ಪತ್ತೆಗೆ ಮೂರು ವಿಶೇಷ ತಂಡಗಳನ್ನು ರಚಿಸಲಾಗಿದೆ. ಮುತ್ತೂಟ್ ಫೈನಾನ್ಸ್‌ನವರ ನಿರ್ಲಕ್ಷ್ಯವೂ ಕಳ್ಳರಿಗೆ ಅನುಕೂಲ ಮಾಡಿಕೊಟ್ಟಿರುವುದು ತನಿಖೆಯಿಂದ ಗೊತ್ತಾಗಿದೆ’ ಎಂದು ತಿಳಿಸಿದರು.

ಗ್ಯಾಸ್‌ ಕಟರ್‌ನಿಂದ ಲಾಕರ್‌ ಕತ್ತರಿಸಿದರು: ‘ಸಾರ್ವಜನಿಕರು ಅಡವಿಟ್ಟಿದ್ದ ಆಭರಣಗಳನ್ನು ಲಾಕರ್‌ನಲ್ಲಿ ಇರಿಸಲಾಗಿತ್ತು. ಅದನ್ನು ತಿಳಿದುಕೊಂಡೇ ಆರೋಪಿಗಳು ಹಲವು ದಿನಗಳಿಂದ ತಯಾರಿ ನಡೆಸಿ ವ್ಯವಸ್ಥಿತವಾಗಿ ಕೃತ್ಯ ಎಸಗಿರುವುದು ಮೇಲ್ನೋಟಕ್ಕೆ ಕಾಣುತ್ತಿದೆ’ ಎಂದು ಪೊಲೀಸರು ಹೇಳಿದರು.

‘ಶನಿವಾರ ಸಂಜೆ ಎಂದಿನಂತೆ ಕಚೇರಿಗೆ ಬೀಗ ಹಾಕಿ ವ್ಯವಸ್ಥಾಪಕರು ಮನೆಗೆ ಹೋಗಿದ್ದರು. ಭಾನುವಾರ ರಜೆ ಇದ್ದಿದ್ದರಿಂದ ಯಾರೂ ಬಂದಿರಲಿಲ್ಲ. ಸೋಮವಾರ ಬೆಳಿಗ್ಗೆ ಸಿಬ್ಬಂದಿ ಕಚೇರಿಗೆ ಬಂದಾಗ ಲಾಕರ್‌ ಕತ್ತರಿಸಿದ್ದು ಗೊತ್ತಾಗಿತ್ತು. ಆಭರಣ ಪ‍ರಿಶೀಲನೆ ನಡೆಸುವುದರಲ್ಲಿ ದಿನ ಕಳೆದಿದ್ದರು. ತಡವಾಗಿ ಠಾಣೆಗೆ ಮಾಹಿತಿ ನೀಡಿದ್ದರು. ಮಂಗಳವಾರ ಕಚೇರಿಗೆ ಹೋಗಿ ಪರಿಶೀಲನೆ ನಡೆಸಲಾಯಿತು’ ಎಂದು ತಿಳಿಸಿದರು.

‘ಶೌಚಾಲಯದ ಗೋಡೆ ಕೊರೆದು ಒಳನುಗ್ಗಿದ್ದ ಕಳ್ಳರು, ಕೊಠಡಿಯಲ್ಲಿದ್ದ ಲಾಕರ್‌ನ್ನು ಗ್ಯಾಸ್‌ ಕಟರ್‌ನಿಂದ ಕತ್ತರಿಸಿ ಆಭರಣ ಕದ್ದುಕೊಂಡು ಹೋಗಿದ್ದಾರೆ. ಕಚೇರಿಯ ಭದ್ರತಾ ಸಿಬ್ಬಂದಿಯೊಬ್ಬನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.