ADVERTISEMENT

₹400 ಕೋಟಿ ಪಾವತಿಸಿ ಗೂಗಲ್‌ ಕಂಪನಿಗೆ ಆದೇಶ

ಬಿ.ಎಸ್.ಷಣ್ಮುಖಪ್ಪ
Published 30 ಮಾರ್ಚ್ 2019, 19:28 IST
Last Updated 30 ಮಾರ್ಚ್ 2019, 19:28 IST
   

ಬೆಂಗಳೂರು: ‘₹400 ಕೋಟಿ ಮೊತ್ತದ ಬಾಕಿ ತೆರಿಗೆಯನ್ನು ಭಾನುವಾರದಂದೇ (ಮಾರ್ಚ್‌ 31) ಪಾವತಿಸಬೇಕು’ ಎಂದು ಗೂಗಲ್‌ ಇಂಡಿಯಾ ಕಂಪನಿಗೆ ಹೈಕೋರ್ಟ್‌ ಆದೇಶಿಸಿದೆ.

ಈ ಕುರಿತಂತೆ ಆದಾಯ ತೆರಿಗೆ ಇಲಾಖೆಯ ಜಂಟಿ ಆಯುಕ್ತರು (ವಲಯ– 3) ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಎಸ್‌.ಸುಜಾತ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಲೇವಾರಿ ಮಾಡಿದೆ.

ಕಂಪನಿಯು 2013–14ರಲ್ಲಿ ₹ 490 ಕೋಟಿ ತೆರಿಗೆ ಮತ್ತು ₹ 274 ಕೋಟಿ ಬಡ್ಡಿ ಪಾವತಿಸಬೇಕಿತ್ತು. ಅಂತೆಯೇ 2014–15ರಲ್ಲಿ ₹ 779 ಕೋಟಿ ತೆರಿಗೆ ಹಾಗೂ ₹ 371 ಕೋಟಿ ಬಡ್ಡಿ ಪಾವತಿಸುವಂತೆ ಆದಾಯ ತೆರಿಗೆ ಇಲಾಖೆಯು ಆದೇಶಿಸಿತ್ತು.

ADVERTISEMENT

ಈ ಆದೇಶದಲ್ಲಿನ ಹೆಚ್ಚುವರಿ ತೆರಿಗೆ ಬಗ್ಗೆ ತಕರಾರು ತೆಗೆದಿದ್ದ ಕಂಪನಿಯು, ‘ಆದಾಯ ತೆರಿಗೆ ಇಲಾಖೆಯ ಆದೇಶಕ್ಕೆ ತಡೆ ನೀಡಬೇಕು’ ಎಂದು ಕೋರಿ ‘ತೆರಿಗೆ ಮೇಲ್ಮನವಿ ನ್ಯಾಯಮಂಡಳಿ’ಯ ಮೊರೆ ಹೋಗಿತ್ತು.

ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಮಂಡಳಿಯು, ಆದಾಯ ತೆರಿಗೆ ಇಲಾಖೆಯ ಆದೇಶಕ್ಕೆ ತಡೆ ನೀಡಿತ್ತು. ಅಂತೆಯೇ, ‘ಮಾರ್ಚ್‌ 31ರೊಳಗೆ ₹ 350 ಕೋಟಿ ಮತ್ತು ಮೂರು ಕಂತಿನಲ್ಲಿ ₹ 125 ಕೋಟಿಯನ್ನು 2019ರ ಜೂನ್‌ 30ರೊಳಗೆ ಪಾವತಿ ಮಾಡಬೇಕು’ ಎಂದು ಆದೇಶಿಸಿತ್ತು.

ನ್ಯಾಯಮಂಡಳಿಯ ಈ ಆದೇಶ ಪ್ರಶ್ನಿಸಿ ಆದಾಯ ತೆರಿಗೆ ಇಲಾಖೆ ಹೈಕೋರ್ಟ್‌ ಮೆಟ್ಟಿಲೇರಿತ್ತು. ಆದಾಯ ತೆರಿಗೆ ಇಲಾಖೆ ಪರ ಹೆಚ್ಚುವರಿ ಸಾಲಿಸಿಟರ್ ಜನರಲ್ ಪ್ರಭುಲಿಂಗ ಕೆ.ನಾವದಗಿ ವಾದ ಮಂಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.