ADVERTISEMENT

ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ: ವಿರೋಧ

​ಪ್ರಜಾವಾಣಿ ವಾರ್ತೆ
Published 30 ಮೇ 2019, 20:17 IST
Last Updated 30 ಮೇ 2019, 20:17 IST
ಅಂಗನವಾಡಿಗಳಲ್ಲೇ ಎಲ್‌ಕೆಜಿ ಮತ್ತು ಯುಕೆಜಿಯನ್ನು ಪ್ರಾರಂಭಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಯುಕ್ತ ಸಂಘರ್ಷ ಸಮಿತಿಯಿಂದ ಸಂಗೊಳ್ಳಿರಾಯಣ್ಣ ರೈಲ್ವೆ ನಿಲ್ದಾಣದಿಂದ ರ‍್ಯಾಲಿ ನಡೆಸಿ ಸ್ವಾತಂತ್ರ್ಯ ಉದ್ಯಾನದ ಮುಂಭಾಗದ ರಸ್ತೆಯಲ್ಲಿ ಪ್ರತಿಭಟನೆ ನಡೆಸಿದರು           ಪ್ರಜಾವಾಣಿ ಚಿತ್ರ/ ಸತೀಶ್ ಬಡಿಗೇರ
ಅಂಗನವಾಡಿಗಳಲ್ಲೇ ಎಲ್‌ಕೆಜಿ ಮತ್ತು ಯುಕೆಜಿಯನ್ನು ಪ್ರಾರಂಭಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಯುಕ್ತ ಸಂಘರ್ಷ ಸಮಿತಿಯಿಂದ ಸಂಗೊಳ್ಳಿರಾಯಣ್ಣ ರೈಲ್ವೆ ನಿಲ್ದಾಣದಿಂದ ರ‍್ಯಾಲಿ ನಡೆಸಿ ಸ್ವಾತಂತ್ರ್ಯ ಉದ್ಯಾನದ ಮುಂಭಾಗದ ರಸ್ತೆಯಲ್ಲಿ ಪ್ರತಿಭಟನೆ ನಡೆಸಿದರು           ಪ್ರಜಾವಾಣಿ ಚಿತ್ರ/ ಸತೀಶ್ ಬಡಿಗೇರ   

ಬೆಂಗಳೂರು: ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ ಮತ್ತು ಯುಕೆಜಿ ತೆರೆಯುವ ರಾಜ್ಯ ಸರ್ಕಾರದ ನಿರ್ಧಾರ ವಿರೋಧಿಸಿ ಅಂಗನವಾಡಿ ಕಾರ್ಯಕರ್ತೆಯರು ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ಕೆಎಸ್‌ಆರ್‌ ರೈಲು ನಿಲ್ದಾಣದ ಬಳಿಯಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ಮೆರವಣಿಗೆಯಲ್ಲಿ ಬಂದಸಾವಿರಾರು ಕಾರ್ಯಕರ್ತೆಯರು, ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘದ ಅಧ್ಯಕ್ಷೆ ಎಸ್. ವರಲಕ್ಷ್ಮಿ, ‘ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ ಮತ್ತು ಯುಕೆಜಿ ತೆರೆಯುವ ರಾಜ್ಯ ಸರ್ಕಾರದ ನಿರ್ಧಾರ ಅವೈಜ್ಞಾನಿಕ. ಒಂದು ಸಂಸ್ಥೆಯನ್ನು ಬಲಗೊಳಿಸಲು, ಇನ್ನೊಂದು ಸಂಸ್ಥೆಯನ್ನು ಬಲಹೀನಗೊಳಿಸುವುದು ನ್ಯಾಯವೇ’ ಎಂದು ಪ್ರಶ್ನಿಸಿದರು.

ADVERTISEMENT

‘ಕೂಡಲೇ ಸರ್ಕಾರ ಈ ನಿರ್ಧಾರವನ್ನು ವಾಪಸ್ ಪಡೆಯಬೇಕು. ಅಂಗನವಾಡಿಗಳನ್ನೇಮೇಲ್ದರ್ಜೆಗೆ ಏರಿಸಬೇಕು. ಇಲ್ಲವಾದರೆ ಹೋರಾಟ ತೀವ್ರಗೊಳಿಸುತ್ತೇವೆ’ ಎಂದು ಎಚ್ಚರಿಸಿದರು.

‘ಅಂಗನವಾಡಿಗಳಲ್ಲಿ ಕೆಲಸ ಮಾಡುತ್ತಿರುವ ಬಹುತೇಕರು ಪೂರ್ವ ಪ್ರಾಥಮಿಕ ತರಗತಿಗಳನ್ನು ನಡೆಸಲು ಅರ್ಹರಿದ್ದಾರೆ. ಉಳಿದ ಕಡೆಗೆ ಬೇಕಾದರೆ ಅತಿಥಿ ಶಿಕ್ಷಕರನ್ನು ಸರ್ಕಾರ ನೇಮಿಸಿಕೊಳ್ಳಲಿ’ ಎಂದು ವರಲಕ್ಷ್ಮಿ ಹೇಳಿದರು.

ಮನವಿ ಸ್ವೀಕರಿಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಜಯಮಾಲಾ, ‘ರಾಜ್ಯದ ಅಂಗನವಾಡಿ ಕಾರ್ಯಕರ್ತೆಯರ ಸೇವೆ ಪ್ರಶಂಸನೀಯ. ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ ಮತ್ತು ಯುಕೆಜಿ ತೆರೆಯುತ್ತಿರುವುದರ ನಡುವೆಯೂ 66,000 ಅಂಗನವಾಡಿಗಳನ್ನು ಮೇಲ್ದರ್ಜೆಗೆ ಏರಿಸಲಾಗುತ್ತಿದೆ. ಕಾರ್ಯಕರ್ತೆಯರ ಬೇಡಿಕೆಗಳನ್ನು ಸಹಾನುಭೂತಿಯಿಂದ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು’ ಎಂದರು.

‘ಅಂಗನವಾಡಿ ಕಾರ್ಯಕರ್ತೆಯರಿಗೆ ಆಗಲಿರುವ ತೊಂದರೆ ಬಗ್ಗೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರೊಂದಿಗೆ ಚರ್ಚೆ ನಡೆಸುತ್ತೇನೆ’ ಎಂದೂ ಅವರು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.