ADVERTISEMENT

ಕ್ಷತ್ರಿಯ ಸಮಾಜದ ಬೇಡಿಕೆ ಈಡೇರಿಸಲು ಬದ್ಧ: ಸಿಎಂ ಬೊಮ್ಮಾಯಿ

ಕರ್ನಾಟಕ ಕ್ಷತ್ರಿಯ ಸಮಾಜದ ಸಮಾವೇಶದಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಭರವಸೆ

​ಪ್ರಜಾವಾಣಿ ವಾರ್ತೆ
Published 29 ಜನವರಿ 2023, 15:44 IST
Last Updated 29 ಜನವರಿ 2023, 15:44 IST
ಬೆಂಗಳೂರಿನ ಅರಮನೆ ಮೈದಾನದಲ್ಲಿ ಭಾನುವಾರ ನಡೆದ ಕ್ಷತ್ರಿಯ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಜನಸ್ತೋಮ– ಪ್ರಜಾವಾಣಿ ಚಿತ್ರ
ಬೆಂಗಳೂರಿನ ಅರಮನೆ ಮೈದಾನದಲ್ಲಿ ಭಾನುವಾರ ನಡೆದ ಕ್ಷತ್ರಿಯ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಜನಸ್ತೋಮ– ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಪ್ರತ್ಯೇಕ ಅಭಿವೃದ್ಧಿ ನಿಗಮ, ಸಮುದಾಯ ಭವನಗಳ ನಿರ್ಮಾಣಕ್ಕೆ ಜಮೀನು ಮತ್ತು ಅನುದಾನ ಮಂಜೂರಾತಿ ಸೇರಿದಂತೆ ರಾಜ್ಯದಲ್ಲಿನ ಕ್ಷತ್ರಿಯ ಸಮಾಜದ ಎಲ್ಲ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಬದ್ಧವಾಗಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.

ನಗರದ ಅರಮನೆ ಮೈದಾನದಲ್ಲಿ ಕರ್ನಾಟಕ ಕ್ಷತ್ರಿಯ ಒಕ್ಕೂಟದ ನೇತೃತ್ವದಲ್ಲಿ ಭಾನುವಾರ ನಡೆದ ಕ್ಷತ್ರಿಯ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ‘ಕ್ಷತ್ರಿಯ ಅಭಿವೃದ್ಧಿ ನಿಗಮ ಸ್ಥಾಪನೆ ಕುರಿತು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ಸಮುದಾಯ ಭವನಗಳ ನಿರ್ಮಾಣಕ್ಕೆ ನೆರವು ನೀಡಲಾಗುವುದು. ಕ್ಷತ್ರಿಯ ಒಕ್ಕೂಟದ ಭಾಗವಾಗಿರುವ 38 ಸಮುದಾಯಗಳ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡುವ ಪ್ರಯತ್ನವನ್ನು ಮುಂಬರುವ ಬಜೆಟ್‌ನಲ್ಲಿ ಮಾಡಲಾಗುವುದು’ ಎಂದರು.

‘ಸಮುದಾಯ ಭವನ ನಿರ್ಮಾಣಕ್ಕೆ ಜಮೀನು ಮಂಜೂರಾತಿ ಮಾಡುವಂತೆ ಹಲವು ಸಮುದಾಯಗಳು ಬೇಡಿಕೆ ಇರಿಸಿವೆ. 30ಕ್ಕೂ ಹೆಚ್ಚು ಸಮುದಾಯಗಳ ಸಂಘ, ಸಂಸ್ಥೆಗಳಿಗೆ ಬೆಂಗಳೂರಿನಲ್ಲಿ 65 ಎಕರೆ ಜಮೀನು ಹಂಚಿಕೆ ಮಾಡಲಾಗಿತ್ತು. ಆದರೆ, ಆ ವಿಚಾರದಲ್ಲಿ ಸಣ್ಣ ಕಾನೂನು ತೊಡಕು ಉಂಟಾಗಿದೆ. ಶೀಘ್ರದಲ್ಲಿ ಅದನ್ನು ಪರಿಹರಿಸಿ ವಿವಿಧ ಸಮುದಾಯಗಳಿಗೆ ಜಮೀನು ಹಸ್ತಾಂತರಿಸಲಾಗುವುದು’ ಎಂದು ತಿಳಿಸಿದರು.

ADVERTISEMENT

‘ದೇಶ ‌ಒಗ್ಗಟ್ಟಿನಿಂದ ಇರಲು ಮತ್ತು ಹಿಂದೂ ಸಮಾಜ ಸುರಕ್ಷಿತವಾಗಿ ಉಳಿದಿರುವುದಕ್ಕೆ ಕ್ಷತ್ರಿಯರ ಕೊಡುಗೆ ಕಾರಣ. ಶ್ರೀರಾಮ, ಶ್ರೀಕೃಷ್ಣ ಕ್ಷತ್ರಿಯ ವಂಶದವರು. ಸಾಮ್ರಾಟ್‌ ಅಶೋಕ, ರಾಣಾ ಪ್ರತಾಪ್‌ ಸಿಂಗ್‌, ಶಿವಾಜಿ ಮಹಾರಾಜ ಕೂಡ ಕ್ಷತ್ರಿಯರು. ಸ್ವಾಮಿ ವಿವೇಕಾನಂದ ಕೂಡ ಕ್ಷತ್ರಿಯರು. ಕ್ಷತ್ರಿಯರಿಗೆ ಯುದ್ಧಕ್ಕಾಗಿ ಕತ್ತಿ ಹಿಡಿಯುವುದು ಹಾಗೂ ಜ್ಞಾನದ ಕತ್ತಿ ಹಿಡಿಯುವುದು ಎರಡೂ ಗೊತ್ತಿದೆ’ ಎಂದರು.

ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ಮಾತನಾಡಿ, ‘ರಾಣಾ ಪ್ರತಾಪ್‌ ಸಿಂಗ್‌, ಶಿವಾಜಿ ಸೇರಿದಂತೆ ಕ್ಷತ್ರಿಯ ಸಮಾಜದ ಹಲವರು ದೇಶದ ಏಕತೆಗಾಗಿ ತ್ಯಾಗ, ಬಲಿದಾನ ಮಾಡಿದ್ದಾರೆ. 2014ರ ನಂತರ ಕೇಂದ್ರ ಸರ್ಕಾರವು ಕ್ಷತ್ರಿಯರ ಆಶಯಗಳಿಗೆ ಸ್ಪಂದಿಸಿ ಅಧಿಕಾರ ನಡೆಸುತ್ತಿದೆ. ಅಯೋಧ್ಯೆ ರಾಮ ಜನ್ಮಭೂಮಿ ವಿವಾದಕ್ಕೆ ಸಂಬಂಧಿಸಿದ ಪ್ರಕರಣದ ತ್ವರಿತ ವಿಚಾರಣೆ ನಡೆದು, ತೀರ್ಪು ಹೊರಬಿದ್ದಿದೆ. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ರಾಮಮಂದಿರ ನಿರ್ಮಾಣವೂ ಚುರುಕಾಗಿ ನಡೆಯುತ್ತಿದೆ’ ಎಂದರು.

ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌. ಅಶ್ವತ್ಥ ನಾರಾಯಣ, ಶಾಸಕರಾದ ಬಂಡೆಪ್ಪ ಕಾಶೆಂಪೂರ, ಅರವಿಂದ ಲಿಂಬಾವಳಿ, ಸಂಸದ ಪಿ.ಸಿ. ಮೋಹನ್‌, ಮರಾಠಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಮಾರುತಿ ರಾವ್‌ ಮುಳೆ, ಬಿಜೆಪಿ ಮುಖಂಡ ಕೃಷ್ಣ ಜೆ. ಪಾಲೇಮಾರ್‌ ಮಾತನಾಡಿದರು. ಕರ್ನಾಟಕ ಕ್ಷತ್ರಿಯ ಒಕ್ಕೂಟದ ಅಧ್ಯಕ್ಷ ಉದಯ್‌ ಸಿಂಗ್‌ ಪ್ರಾಸ್ತಾವಿಕವಾಗಿ ಮಾತನಾಡಿದರು.

ಗವಿಪುರ ಗೋಸಾಯಿ ಮಠದ ಮಂಜುನಾಥ ಭಾರತಿ ಸ್ವಾಮೀಜಿ, ದೊಡ್ಡಬಳ್ಳಾಪುರ ತಾಲ್ಲೂಕಿನ ತಪಸೀಹಳ್ಳಿಯ ಪುಷ್ಪಾಂಡಜ ಮುನಿ ಆಶ್ರಮದ ಜ್ಞಾನಾನಂದಗಿರಿ ಸ್ವಾಮೀಜಿ, ಪಂಡರಾಪುರದ ಏಕನಾಥ ತುಳಸಿದಾಸ ಮಹಾರಾಜ ನಾಮದಾಸ್‌, ಮಂಟೇಸ್ವಾಮಿ ಮಠದ ಪೀಠಾಧಿಪತಿ ವರ್ಚಸ್ವಿ ಶ್ರೀಕಂಠ ಸಿದ್ದಲಿಂಗ ರಾಜೇ ಅರಸ್‌, ಮೈಲಾರಲಿಂಗ ಕ್ಷೇತ್ರದ ಧರ್ಮಾಧಿಕಾರಿ ವೆಂಕಟಪ್ಪ, ಮಾಜಿ ಶಾಸಕ ಲಕ್ಷ್ಮೀನಾರಾಯಣ, ತಿಗಳ ಮಹಾಸಭಾ ಅಧ್ಯಕ್ಷ ಸುಬ್ಬಣ್ಣ, ಭಾವಸಾರ ಮಹಾಸಭಾ ಅಧ್ಯಕ್ಷ ನಾರಾಯಣ ತಾತುಸ್ಕರ್‌, ರಾಜ್ಯ ಮರಾಠಾ ಪರಿಷತ್‌ ಅಧ್ಯಕ್ಷ ಸುರೇಶ್‌ ರಾವ್‌ ಸಾಠೆ, ನೇಕಾರರ ಸಂಘದ ಅಧ್ಯಕ್ಷ ಸೋಮಶೇಖರ್‌, ತೊಗಟವೀರ ಕ್ಷತ್ರಿಯ ಸಂಘದ ಅಧ್ಯಕ್ಷ ಅಶ್ವತ್ಥನಾರಾಯಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.