ADVERTISEMENT

‘ಟಿಪ್ಪು ಸುಲ್ತಾನ್‌’ ಅಧ್ಯಾಯ ಕೈಬಿಡಲು ರಾಜ್ಯಸರ್ಕಾರ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 27 ಜುಲೈ 2020, 19:30 IST
Last Updated 27 ಜುಲೈ 2020, 19:30 IST
ಟಿಪ್ಪು ಸುಲ್ತಾನ್
ಟಿಪ್ಪು ಸುಲ್ತಾನ್   

ಬೆಂಗಳೂರು: ಏಳನೆಯ ತರಗತಿಯಲ್ಲಿ ‘ಮೈಸೂರು ಹುಲಿ ಟಿಪ್ಪುಸುಲ್ತಾನ್‌’ ಅಧ್ಯಾಯವನ್ನು ಪಠ್ಯಕ್ರಮದಿಂದ ಕೈ ಬಿಡಲು ರಾಜ್ಯಸರ್ಕಾರ ನಿರ್ಧರಿಸಿದೆ.ಕೋವಿಡ್‌–19 ಹಿನ್ನೆಲೆಯಲ್ಲಿ ಶೈಕ್ಷಣಿಕ ವರ್ಷ ತಡವಾಗಿ ಆರಂಭವಾಗುತ್ತಿರುವುದರಿಂದ ಪಠ್ಯಕ್ರಮವನ್ನು ಕಡಿತಗೊಳಿಸುವುದಾಗಿ ಸರ್ಕಾರ ಈ ಹಿಂದೆಯೇ ಘೋಷಿಸಿತ್ತು. ಇದರನ್ವಯ ಕಡಿತಗೊಳಿಸುತ್ತಿರುವ ಅಧ್ಯಾಯಗಳ ಪೈಕಿ ಟಿಪ್ಪು ಸುಲ್ತಾನ್‌ಗೆ ಸಂಬಂಧಪಟ್ಟ ಅಧ್ಯಾಯವೂ ಸೇರಿಕೊಂಡಿದೆ.

ಪರಿಷ್ಕೃತ ಪಠ್ಯಕ್ರಮದ ಅಧ್ಯಾಯಗಳನ್ನು ಡಿಎಸ್ಇಆರ್‌ಟಿ ತನ್ನ ವೆಬ್‌ಸೈಟ್‌ಗೆ ಅಪ್‌ಲೋಡ್‌ ಮಾಡಿದ್ದು,6 ಮತ್ತು 10ನೇ ತರಗತಿಯಲ್ಲಿ ಟಿಪ್ಪುವಿಗೆ ಸಂಬಂಧಿಸಿದ ಅಧ್ಯಾಯಗಳನ್ನು ಪಠ್ಯಕ್ರಮದಲ್ಲಿ ಉಳಿಸಿಕೊಳ್ಳಲಾಗಿದೆ.

‘6 ಮತ್ತು 10ನೇ ತರಗತಿಯಲ್ಲಿ ಟಿಪ್ಪು ಸುಲ್ತಾನ್‌ಗೆ ಸಂಬಂಧಿಸಿದ ಅಧ್ಯಾಯಗಳನ್ನು ವಿದ್ಯಾರ್ಥಿಗಳು ಓದುತ್ತಾರೆ. ಈ ನಿಟ್ಟಿನಲ್ಲಿ, ಪುನರಾವರ್ತನೆ ಬೇಡ ಎಂಬ ಉದ್ದೇಶದಿಂದ ಏಳನೇ ತರಗತಿಯಲ್ಲಿನ ಅಧ್ಯಾಯವನ್ನು ತೆಗೆಯಲಾಗಿದೆ’ ಎಂದು ಅಧಿಕಾರಿಗಳು ಹೇಳುತ್ತಾರೆ.

ADVERTISEMENT

‘ಪಠ್ಯಕ್ರಮವನ್ನು ಕಡಿತಗೊಳಿಸುವುದು ಎಂದರೆ ಸರಿಯಾಗಿ ಅರ್ಧದಷ್ಟು ಅಧ್ಯಾಯಗಳನ್ನು ತೆಗೆದುಹಾಕುವುದು ಎಂದರ್ಥವಲ್ಲ. ಪುನರಾರ್ತನೆಯನ್ನೂ ನಾವು ತಪ್ಪಿಸಬೇಕಾಗುತ್ತದೆ. ಮುಂದಿನ ತರಗತಿಗಳಲ್ಲಿ ಹೇಗಿದ್ದರೂ ಟಿಪ್ಪು ಕುರಿತು ವಿದ್ಯಾರ್ಥಿಗಳು ವ್ಯಾಸಂಗ ಮಾಡಲೇಬೇಕಾಗುತ್ತದೆ’ ಎಂದು ಮತ್ತೊಬ್ಬ ಅಧಿಕಾರಿ ಹೇಳಿದರು.

ಕೆಲವು ತಿಂಗಳ ಹಿಂದೆ, ಆಡಳಿತಾರೂಢ ಬಿಜೆಪಿ ಶಾಸಕರು, ಪಠ್ಯಕ್ರಮದಿಂದ ಟಿಪ್ಪು ಸುಲ್ತಾನ್‌ ಅಧ್ಯಾಯವನ್ನು ಕೈ ಬಿಡುವಂತೆ ಒತ್ತಾಯಿಸಿದ್ದಲ್ಲದೆ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿಯನ್ನೂ ಸಲ್ಲಿಸಿದರು. ಇದು ಪರ–ವಿರೋಧ ಚರ್ಚೆಗೆ ಕಾರಣವಾಗಿತ್ತು. ಈ ಸಂಬಂಧ ಪ್ರೊ. ಬರಗೂರು ರಾಮಚಂದ್ರಪ್ಪ ನೇತೃತ್ವದ ತಜ್ಞರ ಸಮಿತಿಯು, ಪಠ್ಯಕ್ರಮದಿಂದ ಟಿಪ್ಪು ಸುಲ್ತಾನ್‌ಗೆ ಸಂಬಂಧಿಸಿದ ಯಾವುದೇ ಅಧ್ಯಾಯವನ್ನು ಕೈ ಬಿಡದಂತೆ ಸಲಹೆ ನೀಡಿದ್ದನ್ನು ಸ್ಮರಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.