
ಔಷಧ
ಹುಬ್ಬಳ್ಳಿ/ಬಾಗಲಕೋಟೆ: ರಾಜ್ಯ ಔಷಧ ಉಗ್ರಾಣದಲ್ಲಿ(ವೇರ್‌ಹೌಸ್) ಜೀವರಕ್ಷಕ ಔಷಧಗಳ ಕೊರತೆಯು ತೀವ್ರವಾಗಿದೆ. ಸರ್ಕಾರಿ ಆರೋಗ್ಯ ಸಂಸ್ಥೆಗಳಿಗೆ ಬೇಡಿಕೆಗೆ ತಕ್ಕಷ್ಟು ಔಷಧಗಳು ಪೂರೈಕೆ ಆಗುತ್ತಿಲ್ಲ. ಔಷಧಗಳು ಸಿಗದೇ, ರೋಗಿಗಳು ತೊಂದರೆ ಅನುಭವಿಸುತ್ತಿದ್ದಾರೆ.
ಕಲ್ಯಾಣ ಕರ್ನಾಟಕ, ಮಧ್ಯ ಕರ್ನಾಟಕ, ಉತ್ತರ ಕರ್ನಾಟಕ, ಹಳೇ ಮೈಸೂರು ಭಾಗ ಸೇರಿದಂತೆ ಎಲ್ಲ ಜಿಲ್ಲೆಗಳಲ್ಲಿ ಔಷಧಗಳ ಕೊರತೆ ಇದೆ. ಕೆಲ ಜಿಲ್ಲೆಗಳಲ್ಲಿ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ (ಎಬಿಆರ್‌ಕೆ) ಯೋಜನೆಯಡಿ ಸ್ಥಳೀಯವಾಗಿ ಔಷಧ ಖರೀದಿಸಿ ತೊಂದರೆ ನೀಗಿಸುವ ಪ್ರಯತ್ನ ನಡೆದಿದೆ.
800ಕ್ಕೂ ಹೆಚ್ಚು ಮಾದರಿಯ ಔಷಧಗಳ ಸಂಗ್ರಹ ಜಿಲ್ಲಾ ಔಷಧ ಉಗ್ರಾಣಗಳಲ್ಲಿ ಇರಬೇಕು. ಆದರೆ, ಕೆಲ ಜಿಲ್ಲೆಗಳಲ್ಲಿ ಕೇವಲ 120 ರಿಂದ 180 ಮಾದರಿಯ ಔಷಧಗಳ ದಾಸ್ತಾನು ಮಾತ್ರ ಇದೆ. ಹೆಚ್ಚಿನ ಜಿಲ್ಲಾ ಮತ್ತು ತಾಲ್ಲೂಕು ಆಸ್ಪತ್ರೆಗಳಲ್ಲಿ ಅಗತ್ಯ ಪ್ರಮಾಣದಲ್ಲಿ ಔಷಧಗಳ ದಾಸ್ತಾನು ಇಲ್ಲವಾಗಿದೆ.
ಬಾಗಲಕೋಟೆ, ಹುಬ್ಬಳ್ಳಿ ಭಾಗದ ಕೆಲ ಆಸ್ಪತ್ರೆಗಳಲ್ಲಿ ಸಾಮಾನ್ಯ ಜ್ವರಕ್ಕೆ ನೀಡಲಾಗುವ ಪ್ಯಾರಾಸೆಟಮಲ್ ಮಾತ್ರೆಗಳೂ ಸಿಗುತ್ತಿಲ್ಲ. ಐವಿ ದ್ರಾವಣವಂತೂ ಜಿಲ್ಲಾ ಕೇಂದ್ರದ ಔಷಧ ಉಗ್ರಾಣಗಳಲ್ಲೂ ಖಾಲಿ ಆಗಿದೆ. ಕೆಲ ಆಸ್ಪತ್ರೆಗಳಲ್ಲಿ ತುರ್ತಾಗಿ ನಡೆಸಬೇಕಾದ ಶಸ್ತ್ರಚಿಕಿತ್ಸೆಗಳನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ.
ಐ.ವಿ ದ್ರಾವಣ (ಗ್ಲುಕೋಸ್), ಆ್ಯಂಟಿ ಬಯಾಟಿಕ್ ಇಂಜೆಕ್ಷನ್‌ಗಳು ಅಗತ್ಯಕ್ಕೆ ತಕ್ಕಂತೆ ಪೂರೈಕೆ ಆಗುತ್ತಿಲ್ಲ. ಆಸ್ಪತ್ರೆಗಳಲ್ಲಿ ಲಭ್ಯವಾಗದ ಔಷಧಗಳನ್ನು ತುರ್ತು ಅಗತ್ಯ ಆಧರಿಸಿ ರೋಗಿಗಳ ಸಂಬಂಧಿಕರೇ ಹಣ ತೆತ್ತು ಖರೀದಿಸುವ ಸ್ಥಿತಿ ಉದ್ಭವಿಸಿದೆ.
‘ಬಾಗಲಕೋಟೆ ಜಿಲ್ಲಾ ಆಸ್ಪತ್ರೆ 400 ಹಾಸಿಗೆ ಸಾಮರ್ಥ್ಯದ್ದಾಗಿದೆ. ತಿಂಗಳಿಗೆ 350 ಹೆರಿಗೆ, 400 ರಿಂದ 500 ಶಸ್ತ್ರಚಿಕಿತ್ಸೆಗಳು ಆಗುತ್ತವೆ. ಹೊಲಿಗೆ, ಬ್ಯಾಂಡೇಜ್‌ಗೂ ಔಷಧಗಳ ಕೊರತೆ ಇದೆ’ ಎಂದು ವೈದ್ಯರು ತಿಳಿಸಿದರು.
‘ಆಸ್ಪತ್ರೆಯಿಂದ ಶೇ 20ರಷ್ಟು ಔಷಧ ಖರೀದಿಗೆ ಅವಕಾಶವಿದೆ. ಆದರೆ, ಈ ವ್ಯವಸ್ಥೆಯಿಂದ ಕೊರತೆಯನ್ನು ನೀಗಿಸಲು ಸಾಧ್ಯವಾಗುತ್ತಿಲ್ಲ. ಹೆಚ್ಚಿನ ಔಷಧಗಳಿಗೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ಬಾಗಲಕೋಟೆ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಮಹೇಶ ಕೋಣಿ ಹೇಳಿದರು.
‘496 ಮಾದರಿ ಔಷಧ ಖರೀದಿ ಪ್ರಕ್ರಿಯೆ ಶುರು’
ಬೆಂಗಳೂರು:‘ಔಷಧಗಳ ಕೊರತೆ ನಿವಾರಣೆಗೆ ಸಂಬಂಧಿಸಿದಂತೆ 496 ಔಷಧಗಳ ಖರೀದಿ ಪ್ರಕ್ರಿಯೆ ನಡೆದಿದೆ’ ಎಂದು ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ (ಕೆಎಸ್‌ಎಂಎಸ್‌ಸಿಎಲ್) ತಿಳಿಸಿದೆ.
‘ಈಗಾಗಲೇ 99 ಔಷಧಗಳಿಗೆ ಸಂಬಂಧಿಸಿದಂತೆ ಅರ್ಹ ಬಿಡ್‌ದಾರರಿಗೆ ದೃಢೀಕರಣ ಪತ್ರ ನೀಡಲಾಗಿದೆ. ಉಳಿದ 327 ಔಷಧಗಳ ಖರೀದಿಗೆ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ. ಈ ಟೆಂಡರ್ ಪ್ರಕ್ರಿಯೆಯನ್ನು ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳಿಸ ಲಾಗುವುದು. ಮಾರ್ಚ್ ತಿಂಗಳಲ್ಲಿ ಪೂರೈಸುವ ಔಷಧಗಳಲ್ಲಿ ಚಿಕಿತ್ಸೆಗೆ ಅಗತ್ಯವಾಗಿರುವ, 25 ಪ್ರಮುಖ ‘ಆ್ಯಂಟಿಬಯೋಟಿಕ್’ಗಳು, ಐವಿ ದ್ರಾವಣಗಳು ಸೇರಿವೆ’ ಎಂದು ಹೇಳಿದೆ.
‘ಖರೀದಿ ಪ್ರಕ್ರಿಯೆ ಪ್ರಗತಿಯಲ್ಲಿ ರುವ ಅವಧಿಯಲ್ಲಿ, ತುರ್ತು ಅಥವಾ ಅಗತ್ಯ ಔಷಧಗಳು ಕೊರತೆಯಾದಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿನ ರೋಗಿಗಳಿಗೆ ತೊಂದರೆಯಾಗಬಾರದು. ಈ ಉದ್ದೇಶದಿಂದಲೇ ‘ಪ್ರಧಾನಮಂತ್ರಿ ಭಾರತೀಯ ಜನೌಷಧಿ ಯೋಜನೆ’ಯಡಿ ಅಧಿಕೃತ ವಿತರಕರ ಮೂಲಕ ಜೆನೆರಿಕ್ ಔಷಧಗಳನ್ನು ಆರೋಗ್ಯ ಸಂಸ್ಥೆಗಳು ತಾತ್ಕಾಲಿಕವಾಗಿ ಖರೀದಿಸುವ ವ್ಯವಸ್ಥೆ ಕಲ್ಪಿಸಲು, ‘ಫಾರ್ಮಾ ಆ್ಯಂಡ್ ಮೆಡಿಕಲ್ ಬ್ಯೂರೊ ಆಫ್ ಇಂಡಿಯಾ’ಗೆ ಪ್ರಸ್ತಾವ ಸಲ್ಲಿಸಲಾಗಿದೆ. ಈ ಸಂಬಂಧ ₹ 50 ಕೋಟಿ ನಿಧಿ ಮೀಸಲಿಡಲು ತೀರ್ಮಾನಿಸ ಲಾಗಿದೆ. ಆರೋಗ್ಯ ಸಂಸ್ಥೆಗಳು ಅಗತ್ಯವಿದ್ದಲ್ಲಿ ‘ಗವರ್ನಮೆಂಟ್ ಇ ಮಾರ್ಕೇಟ್‌ಪ್ಲೇಸ್’ ಪೋರ್ಟಲ್ ಮೂಲಕ ನೇರವಾಗಿ ಔಷಧಗಳನ್ನು ಖರೀದಿಸಲು ಅವಕಾಶ ಕಲ್ಪಿಸಲಾಗಿದೆ’ ಎಂದು ಸ್ಪಷ್ಟಪಡಿಸಿದೆ.
‘ಅಗತ್ಯ ಔಷಧಗಳ ಕೊರತೆ ನೀಗಿಸಲು 4ಜಿ ವಿನಾಯಿತಿಯಡಿ ಈಗಾಗಲೇ 49 ಪ್ರಮುಖ ಔಷಧಗಳನ್ನು ಖರೀದಿ ಮಾಡಿ, ಸರ್ಕಾರಿ ಆರೋಗ್ಯ ಸಂಸ್ಥೆಗಳಿಗೆ ಸರಬರಾಜು ಮಾಡಲಾಗಿದೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಆದ್ಯತೆ ಮೇರೆಗೆ ಜಿಲ್ಲೆಯ ಆರೋಗ್ಯ ಸಂಸ್ಥೆಗಳಿಗೆ ಔಷಧಗಳನ್ನು ಪೂರೈಸಲಾಗುತ್ತಿದೆ. ಸ್ಥಳೀಯವಾಗಿ ಆರೋಗ್ಯ ನಿಧಿಯಿಂದ ಔಷಧಿ ಖರೀದಿಸಲು ಸೂಚಿಸಲಾಗಿದೆಡಾ. ಎಂ.ಎಸ್. ಹೊನಕೇರಿ, ಜಿಲ್ಲಾ ಆರೋಗ್ಯ ಅಧಿಕಾರಿ, ಧಾರವಾಡ
ಔಷಧಗಳ ಪೂರೈಕೆ ಆಗುತ್ತಿಲ್ಲ. ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆ ಅನುದಾನದಡಿ ಕೆಲ ಔಷಧ ಖರೀದಿಸುತ್ತಿದ್ದೇವೆಡಾ. ಮಂಜುನಾಥ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ, ಬಾಗಲಕೋಟೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.