ADVERTISEMENT

ಬಿಪಿಎಲ್‌ ಕಾರ್ಡ್ ಇರುವ ಸರ್ಕಾರಿ ನೌಕರರ ಮೇಲೆ ಕ್ರಿಮಿನಲ್ ಕೇಸ್

​ಪ್ರಜಾವಾಣಿ ವಾರ್ತೆ
Published 12 ಜೂನ್ 2020, 20:25 IST
Last Updated 12 ಜೂನ್ 2020, 20:25 IST
   

ಬೆಂಗಳೂರು: ಸರ್ಕಾರಿ ನೌಕರರು ಹೊಂದಿರುವ ಬಿಪಿಎಲ್ ಕಾರ್ಡ್ ವಾಪಸ್ ಕೊಡದೇ ಇದ್ದರೆ ಕ್ರಿಮಿನಲ್‌ ಮೊಕದ್ದಮೆ ಹೂಡುವುದಾಗಿ ಸರ್ಕಾರ ಎಚ್ಚರಿಸಿದೆ.

‘‌ಬಿಪಿಎಲ್‌ ಕಾರ್ಡ್‌ ಇರುವುದು ಬಡತನ ರೇಖೆಗಿಂತ ಕೆಳಗಿರುವವರಿಗೆ ಮಾತ್ರ. ಆದರೆ ಕೆಲವು ಸರ್ಕಾರಿ ಅಧಿಕಾರಿಗಳು, ಸಿಬ್ಬಂದಿಯ ಬಳಿಯೂ ಈ ಕಾರ್ಡ್ ಇರುವುದು ಸರ್ಕಾರದ ಗಮನಕ್ಕೆ ಬಂದಿದೆ. ಇಂತಹವರು ಒಂದು ತಿಂಗಳೊಳಗೆ ಆಹಾರ ಇಲಾಖೆಗೆ ತಂದೊಪ್ಪಿಸಿ ರದ್ದುಪಡಿಸಿಕೊಳ್ಳಬೇಕು. ತಪ್ಪಿದಲ್ಲಿ ಅಂತಹವರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗುವುದು ಮತ್ತು ಅವರಿಂದ ಸರ್ಕಾರಕ್ಕೆ ಉಂಟಾದ ನಷ್ಟವನ್ನು ವಸೂಲು ಮಾಡಲಾಗುವುದು’ ಎಂದು ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್‌ ಅವರು ಸುತ್ತೋಲೆಯಲ್ಲಿ ಎಚ್ಚರಿಸಿದ್ದಾರೆ.

‘ಸರ್ಕಾರಿ ವೇತನ, ಭತ್ಯೆ ಪಡೆಯುತ್ತಿರುವ ಯಾರೂ ಬಡವರಲ್ಲ. ತೀರಾ ಬಡವರಿಗಾಗಿ ಇರುವ ಕಾರ್ಡ್‌ ಅನ್ನು ಇಟ್ಟುಕೊಳ್ಳುವುದು ಹಾಗೂ ಸರ್ಕಾರದಿಂದ ವಿತರಿಸುವ ಪಡಿತರ ಮತ್ತು ಇತರ ಸೌಲಭ್ಯಗಳನ್ನು ಪಡೆಯುವುದು ಅಕ್ಷಮ್ಯ ಅಪರಾಧ. ಆ ಬಗ್ಗೆ ಇನ್ನು ಮುಂದೆ ದೂರು ಬಂದರೆ ಕ್ರಮ ನಿಶ್ಚಿತ’ ಎಂದು ಎಚ್ಚರಿಕೆ ನೀಡಿದ್ದಾರೆ.

ADVERTISEMENT

ಹೊರಗುತ್ತಿಗೆಯವರಿಗೆ ವೇತನ: ರಾಜ್ಯದ ಎಲ್ಲ ಸರ್ಕಾರಿ, ಅರೆಸರ್ಕಾರಿ, ಸ್ವಾಯತ್ತ ಸಂಸ್ಥೆ, ನಿಗಮ–ಮಂಡಳಿ ಕಚೇರಿಗಳಲ್ಲಿ ಕೆಲಸ ಮಾಡುತ್ತಿರುವ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರಿಗೆ ಕೊರೊನಾ ಲಾಕ್‌ಡೌನ್‌ ಅವಧಿಯ ಸಂಬಳ ನೀಡುವುದು ಕಡ್ಡಾಯ ಎಂದು ಹಣಕಾಸು ಇಲಾಖೆ ತಾಕೀತು ಮಾಡಿದೆ.

ಲಾಕ್‌ಡೌನ್‌ ಅವಧಿಯಲ್ಲಿ ಕೆಲವು ಇಲಾಖೆಗಳಲ್ಲಿ ಗುತ್ತಿಗೆ, ಹೊರಗುತ್ತಿಗೆ ನೌಕರರಿಗೆ ಕೆಲಸಕ್ಕೆ ಬರಲು ಸಾಧ್ಯವಾಗಿರಲಿಲ್ಲ. ಅಂತಹವರ ಗೈರು ಹಾಜರಿ ಅವಧಿಯ ವೇತನ ಪಾವತಿಸಲು ನಿರಾಕರಿಸುತ್ತಿರುವ ವಿಷಯ ಸರ್ಕಾರದ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಈ ಸುತ್ತೋಲೆ ಹೊರಡಿಸಲಾಗಿದೆ.

ಲಾಕ್‌ಡೌನ್ ಅವಧಿ ಎಂದರೆ ಏಪ್ರಿಲ್‌ 24ರಿಂದ ಮೇ 18ರವರೆಗೆ ರಜೆ ತೆಗೆದುಕೊಂಡಿರುವ ಅವಧಿಯನ್ನು ಹೊರತುಪಡಿಸಿ ಉಳಿದ ಅವಧಿಗೆ ವೇತನ/ ದಿನಗೂಲಿಯನ್ನು ಪಾವತಿಸಲೇಬೇಕು. ಕೇಂದ್ರ ಸರ್ಕಾರ ಮೇ 17ರಂದು ಹೊರಡಿಸಿದ ಜ್ಞಾಪನಾ ಪತ್ರದಂತೆ ಗೈರುಹಾಜರಾದ ಅವಧಿಯಲ್ಲಿ ಯಾವುದೇ ನೌಕರರ ವೇತನ ತಡೆಹಿಡಿಯದೆ ಪಾವತಿಸುವಂತೆ ಸೂಚಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.