ADVERTISEMENT

ಜಾತಿ ಗಣತಿ: ಸರ್ಕಾರದ್ದು ತೆರೆದ ಮನಸ್ಸು: ಕೋಟ ಶ್ರೀನಿವಾಸ ಪೂಜಾರಿ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2021, 22:15 IST
Last Updated 19 ಆಗಸ್ಟ್ 2021, 22:15 IST
ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ವತಿಯಿಂದ ಮುಖ್ಯಮಂತ್ರಿಗೆ ಗುರುವಾರ ಮನವಿ ಸಲ್ಲಿಸಲಾಯಿತು. ನೆ.ಲ. ನರೇಂದ್ರಬಾಬು, ಪಿ.ಆರ್‌ ರಮೇಶ್, ಕೋಟ ಶ್ರೀನಿವಾಸ ಪೂಜಾರಿ,ಎಂ.ಸಿ. ವೇಣುಗೋಪಾಲ್, ಸಿ.ಎಸ್. ದ್ವಾರಕಾನಾಥ್‌, ‘ಮುಖ್ಯಮಂತ್ರಿ’ ಚಂದ್ರು ಇದ್ದರು
ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ವತಿಯಿಂದ ಮುಖ್ಯಮಂತ್ರಿಗೆ ಗುರುವಾರ ಮನವಿ ಸಲ್ಲಿಸಲಾಯಿತು. ನೆ.ಲ. ನರೇಂದ್ರಬಾಬು, ಪಿ.ಆರ್‌ ರಮೇಶ್, ಕೋಟ ಶ್ರೀನಿವಾಸ ಪೂಜಾರಿ,ಎಂ.ಸಿ. ವೇಣುಗೋಪಾಲ್, ಸಿ.ಎಸ್. ದ್ವಾರಕಾನಾಥ್‌, ‘ಮುಖ್ಯಮಂತ್ರಿ’ ಚಂದ್ರು ಇದ್ದರು   

ಬೆಂಗಳೂರು: ‘ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ (ಜಾತಿ ಗಣತಿ) ವರದಿ ಸ್ವೀಕರಿಸುವ ವಿಚಾರದಲ್ಲಿ ರಾಜ್ಯ ಸರ್ಕಾರ ತೆರೆದ ಮನಸ್ಸು ಹೊಂದಿದೆ’ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ಶಾಸಕರ ಭವನದಲ್ಲಿ ಗುರುವಾರ ನಡೆದ ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ಸಭೆಯಲ್ಲಿ, ಸಮೀಕ್ಷೆಯ ವರದಿಯನ್ನು ಸರ್ಕಾರ ಸ್ವೀಕರಿಸಬೇಕೆಂಬ ಬೇಡಿಕೆ ಮುಂದಿಟ್ಟ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಈ ಸಮೀಕ್ಷೆಗೆ ಸಂಬಂಧಿಸಿದ ಕಡತಗಳು ಸದ್ಯ ಹಿಂದುಳಿದ ವರ್ಗಗಳ ಆಯೋಗದ ಹಾಲಿ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆಅವರ ಸುಪರ್ದಿಯಲ್ಲಿದೆ. ವರದಿಯನ್ನು ಆಯೋಗ ಸರ್ಕಾರಕ್ಕೆ ಹಸ್ತಾಂತರಿಸಿದರೆ, ಅದು ಬಿಡುಗಡೆ ಆದಂತೆಯೇ. ಆದರೆ, ಸರ್ಕಾರಕ್ಕೆ ಸಲ್ಲಿಸಲು ಕೆಲವು ಸಮಸ್ಯೆಗಳಿವೆ ಎಂದು ಅವರು ಹೇಳಿದ್ದಾರೆ’ ಎಂದರು.

‘ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ರಾಜ್ಯ ಸರ್ಕಾರ ಸುಮಾರು ₹ 170 ಕೋಟಿ ವೆಚ್ಚದಲ್ಲಿ ಈ ಸಮೀಕ್ಷೆ (ಜಾತಿ ಗಣತಿ) ನಡೆಸಿದೆ.ಅವರೇ ವರದಿಯನ್ನು ಬಿಡುಗಡೆ ಮಾಡುತ್ತಾರೆ ಅಂದುಕೊಂಡಿದ್ದೆವು. ಆದರೆ, ಅವರು ಆ ಕೆಲಸವನ್ನು ಮಾಡಲಿಲ್ಲ’ಎಂದರು.

ADVERTISEMENT

ಸಭೆಯ ಬಳಿಕ ವೇದಿಕೆಯ ಪ್ರಮುಖರು ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.

ಪ್ರಬಲ ಜಾತಿಗಳನ್ನು 2ಎ ಜಾತಿ ಪಟ್ಟಿಗೆ ಸೇರಿಸಬಾರದು ಎಂದು ಮುಖ್ಯಮಂತ್ರಿ ಬಳಿ ಬೇಡಿಕೆ ಮುಂದಿಟ್ಟ ಪ್ರಮುಖರು, ಕೇಂದ್ರ ಸರ್ಕಾರ ಇತ್ತೀಚೆಗೆ ಲೋಕಸಭೆಯಲ್ಲಿ ಮಂಡಿಸಿದ ಹಿಂದುಳಿದ ವರ್ಗಗಳ ಮಸೂದೆ ಮತ್ತು ರಾಜ್ಯದಲ್ಲಿರುವ ಅತಿ ಹಿಂದುಳಿದ ಸಮುದಾಯಗಳ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಮನವಿ ಪತ್ರ ಸಲ್ಲಿಸಿದರು.

ಕೋಟ ಶ್ರೀನಿವಾಸ ಪೂಜಾರಿ, ಜಾಗೃತ ವೇದಿಕೆಯ ಗೌರವ ಸಲಹೆಗಾರರಾದ ಸಿ.ಎಸ್‌. ದ್ವಾರಕಾನಾಥ್, ಗೌರವ ಅಧ್ಯಕ್ಷ ‘ಮುಖ್ಯಮಂತ್ರಿ’ ಚಂದ್ರು, ಅಧ್ಯಕ್ಷ ಎಂ.ಸಿ. ವೇಣುಗೋಪಾಲ್, ವಿಧಾನ ಪರಿಷತ್ ಕಾಂಗ್ರೆಸ್‌ ಸದಸ್ಯ ಪಿ.ಆರ್. ರಮೇಶ್, ಮಾಜಿ ಶಾಸಕ ನೆ.ಲ. ನರೇಂದ್ರ ಬಾಬು ಇದ್ದರು.

ಅದಕ್ಕೂ ಮೊದಲು ಶಾಸಕರ ಭವನದಲ್ಲಿ ವೇದಿಕೆಯ ಸಭೆ ನಡೆಯಿತು. ಹಿಂದುಳಿದವರಿಗೆ ಶೇ 32 ಮೀಸಲಾತಿ‌ ಪ್ರಮಾಣ ನಿಗದಿಪಡಿಸಲಾಗಿದೆ. ಆದರೆ, ಬಲಿಷ್ಠ ಸಮುದಾಯಗಳು ಮೀಸಲಾತಿಯ ಲಾಭ ಪಡೆಯುತ್ತಿರುವುದರಿಂದ, ಜಾತಿ ಪಟ್ಟಿಯನ್ನು ಪುನರ್ ವಿಂಗಡಣೆ
ಮಾಡಬೇಕಿದೆ.

ಈ ಕಾರಣಕ್ಕೆ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ (ಜಾತಿ ಗಣತಿ) ವರದಿಯನ್ನು ಬಿಡುಗಡೆ ಮಾಡುವಂತೆ ಸರ್ಕಾರದ ಮೇಲೆ ಒತ್ತಡ ಹೇರುವ ನಿರ್ಣಯವನ್ನು ಸಭೆ ಒಕ್ಕೊರಲಿನಿಂದ ಕೈಗೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.