ADVERTISEMENT

ಕೋವಿಶೀಲ್ಡ್: 12 ವಾರದ ಬಳಿಕ ಎರಡನೇ ಡೋಸ್

​ಪ್ರಜಾವಾಣಿ ವಾರ್ತೆ
Published 14 ಮೇ 2021, 20:42 IST
Last Updated 14 ಮೇ 2021, 20:42 IST
ಕೋವಿಶೀಲ್ಡ್ ಮತ್ತು ಕೊವ್ಯಾಕ್ಸಿನ್‌ ಲಸಿಕೆ–ಸಾಂದರ್ಭಿಕ ಚಿತ್ರ
ಕೋವಿಶೀಲ್ಡ್ ಮತ್ತು ಕೊವ್ಯಾಕ್ಸಿನ್‌ ಲಸಿಕೆ–ಸಾಂದರ್ಭಿಕ ಚಿತ್ರ   

ಬೆಂಗಳೂರು:ರಾಜ್ಯದಲ್ಲಿ ‘ಕೋವಿಶೀಲ್ಡ್’ ಲಸಿಕೆಯ ಮೊದಲ ಮತ್ತು ಎರಡನೇ ಡೋಸ್ ನಡುವಿನ ಅಂತರವನ್ನು 12ರಿಂದ 16 ವಾರಗಳಿಗೆ ವಿಸ್ತರಿಸಲಾಗಿದೆ.

ಮೊದಲ ಡೋಸ್ ಪಡೆದವರಿಗೆ 45 ದಿನದ ಬಳಿಕಎರಡನೇ ಡೋಸ್‌ ಪಡೆಯಲು ಬನ್ನಿ ಎಂದು ತಿಳಿಸಲಾಗಿತ್ತು. ಈಗ ಈ ಅವಧಿಯಲ್ಲಿ ಬರುವುದು ಬೇಡ, 12 ವಾರಗಳ ಬಳಿಕವಷ್ಟೇ ಲಸಿಕಾ ಕೇಂದ್ರಗಳಿಗೆ ಬನ್ನಿ ಎಂದು ಆರೋಗ್ಯ ಇಲಾಖೆ ಸೂಚಿಸಿದೆ.

ಸದ್ಯ 6 ರಿಂದ 8 ವಾರಗಳ ಅಂತರದಲ್ಲಿ ಎರಡನೇ ಡೋಸ್ ನೀಡಲಾಗುತ್ತಿತ್ತು.‘ಕೋವ್ಯಾಕ್ಸಿನ್’ ಲಸಿಕೆಯನ್ನು 4ರಿಂದ 6 ವಾರಗಳ ಅಂತರದಲ್ಲಿ ಒದಗಿಸಲಾಗುತ್ತಿದೆ.

ADVERTISEMENT

ರಾಷ್ಟ್ರೀಯ ತಾಂತ್ರಿಕ ಸಲಹಾ ಸಮಿತಿ (ಎನ್‌ಟಿಎಜಿಐ) ಮತ್ತು ರಾಷ್ಟ್ರೀಯ ತಜ್ಞರ ಸಮಿತಿ (ಎನ್‌ಇಜಿವಿಎಸಿ) ಶಿಫಾರಸಿನ ಅನುಸಾರ ಕೇಂದ್ರ ಸರ್ಕಾರವು ‘ಕೋವಿಶೀಲ್ಡ್’ ಲಸಿಕೆಯ ಎರಡನೇ ಡೋಸ್ ಅನ್ನು 12ರಿಂದ 16 ವಾರಗಳ ಅವಧಿಯಲ್ಲಿ ನೀಡಬೇಕು ಎಂದು ಸೂಚಿಸಿದೆ.

ಮೊದಲ ಡೋಸ್ ಪಡೆದ ನಂತರ 12 ವಾರ ಪೂರ್ಣಗೊಳಿಸದವರು ಎರಡನೇ ಡೋಸ್‌ ಪಡೆಯಲು ಲಸಿಕೆ ಕೇಂದ್ರಗಳಿಗೆ ಬರಬಾರದು ಎಂದು ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕರು ತಿಳಿಸಿದ್ದಾರೆ.

ಎರಡು ಡೋಸ್‌ಗಳ ನಡುವಿನ ಪರಿಷ್ಕೃತ ಸಮಯದ ಅಂತರವು ‘ಕೋವಿಶೀಲ್ಡ್’ ಲಸಿಕೆಗೆ ಮಾತ್ರ ಅನ್ವಯ. ‘ಕೋವ್ಯಾಕ್ಸಿನ್’ ಲಸಿಕೆಯನ್ನು ಈ ಮೊದಲಿನಂತೆ ನೀಡಲಾಗುತ್ತದೆ ಎಂದು ನಿರ್ದೇಶಕರು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.