ಸರ್ಕಾರಿ ಶಾಲೆ
ಬೆಂಗಳೂರು: ಸರ್ಕಾರಿ ಶಾಲೆಗಳಲ್ಲಿನ ಮಕ್ಕಳ ದಾಖಲಾತಿ ಪ್ರಮಾಣ ಮೂರು ವರ್ಷಗಳಲ್ಲಿ 4.76 ಲಕ್ಷ ಕುಸಿತ ಕಂಡಿದೆ. ಮತ್ತೊಂದು ಕಡೆ ಖಾಸಗಿ ಶಾಲೆಗಳ ದಾಖಲಾತಿ ಪ್ರಮಾಣ ಗಣನೀಯವಾಗಿ ಏರಿಕೆಯಾಗಿದೆ.
ವಿಧಾನಪರಿಷತ್‌ನಲ್ಲಿ ಕಾಂಗ್ರೆಸ್‌ನ ಎಂ.ಎಲ್. ಅನಿಲ್‌ಕುಮಾರ್ ಅವರ ಪ್ರಶ್ನೆಗೆ ಉತ್ತರ ನೀಡಿದ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಖಾಸಗಿ ಶಾಲೆಗಳಿಗೆ ಹೋಲಿಸಿದರೆ 2024–25ನೇ ಸಾಲಿನಲ್ಲಿ ಸರ್ಕಾರಿ ಶಾಲೆಗಳ ದಾಖಲಾತಿ 7.62 ಲಕ್ಷ ಕಡಿಮೆ ಇದೆ. ಕರ್ನಾಟಕ ಪಬ್ಲಿಕ್ ಶಾಲೆ, ಆದರ್ಶ ಶಾಲೆಗಳ ಸ್ಥಾಪನೆ, ಮೂಲಸೌಕರ್ಯಗಳ ಅಭಿವೃದ್ಧಿ, ನಿರಂತರ ಶೈಕ್ಷಣಿಕ ಸುಧಾರಣೆ ಮೂಲಕ ಸರ್ಕಾರಿ ಶಾಲೆಗಳ ಬಲವರ್ಧನೆ ಮಾಡಲಾಗುತ್ತಿದೆ. 8,538 ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ತರಗತಿ ಆರಂಭಿಸಲು ಅನುಮತಿ ನೀಡಲಾಗಿದೆ. ಹಲವು ಶಾಲೆಗಳನ್ನು ಉನ್ನತೀಕರಿಸಲಾಗಿದೆ. ದಾಖಲಾತಿ ಆಂದೋಲನ ಸೇರಿ ಹತ್ತು ಹಲವು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗಿದೆ ಎಂದರು.
21,841 ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳನ್ನು ದತ್ತು ನೀಡಲಾಗಿದೆ. ಮಕ್ಕಳ ಸಂಖ್ಯೆ ಕಡಿಮೆಯಾದ, ಶೂನ್ಯಕ್ಕೆ ತಲುಪಿದ ಯಾವುದೇ ಶಾಲೆಯನ್ನು ಮುಚ್ಚಿಲ್ಲ. ಮಕ್ಕಳ ಸಂಖ್ಯೆ ಹೆಚ್ಚಳವಾದ ಶಾಲೆಗಳನ್ನು ಪುನರಾರಂಭಿಸಲಾಗುತ್ತಿದೆ. 1ರಿಂದ 8ನೇ ತರಗತಿಯವರೆಗೆ ಉಚಿತ ಶಿಕ್ಷಣ ನೀಡಲಾಗುತ್ತಿದೆ. ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಅಭಿವೃದ್ಧಿ ಶುಲ್ಕ ಸೇರಿ ₹220 ಪಡೆಯಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.