ADVERTISEMENT

ರಾಜ್ಯಪಾಲರ ಭಾಷಣ ವಸಾಹತುಶಾಹಿ ಪಳೆಯುಳಿಕೆ: ಸುರೇಶ್‌ಕುಮಾರ್

​ಪ್ರಜಾವಾಣಿ ವಾರ್ತೆ
Published 30 ಜನವರಿ 2026, 15:50 IST
Last Updated 30 ಜನವರಿ 2026, 15:50 IST
<div class="paragraphs"><p>ಸುರೇಶ್‌ಕುಮಾರ್</p></div>

ಸುರೇಶ್‌ಕುಮಾರ್

   

ಬೆಂಗಳೂರು: ‘ವಸಾಹತುಶಾಹಿಯ ಪಳೆಯುಳಿಕೆಯಂತಿರುವ ರಾಜ್ಯಪಾಲರ ಭಾಷಣವನ್ನು ವಾರ್ಷಿಕ ಪ್ರಕ್ರಿಯೆಯಾದ ಜಂಟಿ ಅಧಿವೇಶನದಲ್ಲಿ ಓದುವ ಕುರಿತು ಪುನರ್‌ ಪರಿಶೀಲನೆಯಾಗಬೇಕು. ಈ ಕುರಿತು ಚರ್ಚೆಯಾಗಬೇಕು’ ಎಂದು ಬಿಜೆಪಿಯ ಎಸ್. ಸುರೇಶ್‌ ಕುಮಾರ್‌ ಹೇಳಿದರು.

ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯ ಕುರಿತು ಮಾತನಾಡಿದ ಅವರು, ‘ಇದು ನನ್ನ ವೈಯಕ್ತಿಕ ಅಭಿಪ್ರಾಯ. ರಾಜ್ಯ ಸರ್ಕಾರ ಕೆಟ್ಟ ಆಡಳಿತ ನೀಡಿದ್ದರೂ ಅತ್ಯಂತ ಉತ್ತಮ ಸರ್ಕಾರ ಎಂದು ರಾಜ್ಯಪಾಲರ ಮೂಲಕ ಹೇಳಿಸುವ ಸಂಪ್ರದಾಯ ಕೊನೆಯಾಗಬೇಕು. ರಾಜ್ಯಪಾಲರಿಗೆ ಇಂತಹ ಸುಳ್ಳುಗಳನ್ನು ಹೇಳಲು ಇಷ್ಟವಿಲ್ಲದಿದ್ದರೂ ಸಿದ್ಧಪಡಿಸಿದ ಭಾಷಣ ಅವರಿಂದ ಮಾಡಿಸಬೇಕಾ ಎನ್ನುವ ಚರ್ಚೆಯ ಅಗತ್ಯವಿದೆ’ ಎಂದರು.

ADVERTISEMENT

‘ನನ್ನ ಸರ್ಕಾರ ಎಂದು ಓದುವ ರಾಜ್ಯಪಾಲರ ಭಾಷಣವನ್ನು ಖಂಡಿಸುತ್ತೇನೆ. ಈ ವಿಚಾರದಲ್ಲಿ ಸಂವಿಧಾನದ ತಿದ್ದುಪಡಿಯಾಗಬೇಕೆಂದು ನೆರೆಯ ರಾಜ್ಯದ ಮುಖ್ಯಮಂತ್ರಿ ಹೇಳಿದ್ದಾರೆ. ನ್ಯಾ.ರಾಮಾಜೋಯಿಸ್‌ ಅವರು ರಾಜ್ಯಪಾಲರ ಭಾಷಣ ನಿಲ್ಲಿಸಬೇಕು ಎಂದಿದ್ದರು. ಸಂವಿಧಾನ ರಚಿಸುವಾಗ ಮುಂದೆ ಇಂತಹ ಸಂಘರ್ಷ ಬರಲಿದೆ ಅಂತ ಯಾರೂ ಭಾವಿಸಿರಲಿಲ್ಲ. ರಾಜ್ಯಪಾಲರು ಸರ್ಕಾರ ಸಿದ್ಧಪಡಿಸಿದ ಭಾಷಣ ಓದಲಿಲ್ಲವೆಂದರೆ ಜಾಹೀರಾತು ಮೂಲಕ ಸರ್ಕಾರ ಎಲ್ಲವನ್ನೂ ಹೇಳುತ್ತದೆ. ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡು ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗಬೇಕು. ಕರ್ನಾಟಕದಿಂದಲೇ ಚರ್ಚೆ ಆರಂಭವಾಗಲಿ’ ಎಂದು ಸಲಹೆ ನೀಡಿದರು.

‘ರಾಜ್ಯಪಾಲರ ಕೈಯಲ್ಲಿ ನನ್ನ ಸರ್ಕಾರ ಅಂತ ಭಾಷಣ ಮಾಡಿಸಿದರೆ ಸಾಲದು, ಹೊರಗಿನ ಜನರೂ ನನ್ನ ಸರ್ಕಾರ ಅಂತ ಅಲೋಚಿಸುವಂತಾಗಬೇಕು. ಹಾಗಾಗಿ, ನಾವು ರಾಜ್ಯಪಾಲರಿಗೆ ವಂದನೆ ಸಲ್ಲಿಸುತ್ತೇವೆ. ಅವರ ಭಾಷಣಕ್ಕಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.