ADVERTISEMENT

ಪ್ರಜಾವಾಣಿ ಫೋನ್‌-ಇನ್‌ | ಟ್ರೈನಿ ಎಂಜಿನಿಯರ್‌ಗಳ ನೇಮಕ ಶೀಘ್ರ: ಗೋವಿಂದ ಕಾರಜೋಳ

​ಪ್ರಜಾವಾಣಿ ವಾರ್ತೆ
Published 24 ಜೂನ್ 2020, 8:45 IST
Last Updated 24 ಜೂನ್ 2020, 8:45 IST
ಗೋವಿಂದ ಕಾರಜೋಳ
ಗೋವಿಂದ ಕಾರಜೋಳ   

ಬೆಂಗಳೂರು: ‘ಒಂದು ವರ್ಷದ ಅವಧಿಗೆ ಸುಮಾರು ಒಂದು ಸಾವಿರ ಟ್ರೈನಿ ಎಂಜಿನಿಯರ್‌ಗಳನ್ನು ನೇಮಕ ಮಾಡಿಕೊಳ್ಳುವ ಉದ್ದೇಶವಿದೆ. ಶೀಘ್ರದಲ್ಲಿಯೇ ಅರ್ಜಿ ಆಹ್ವಾನಿಸಲಾಗುವುದು’ ಎಂದು ಉಪಮುಖ್ಯಮಂತ್ರಿ ಹಾಗೂ ಲೋಕೋಪಯೋಗಿ ಸಚಿವ ಗೋವಿಂದ ಕಾರಜೋಳ ಹೇಳಿದರು.

‘ಪ್ರಜಾವಾಣಿ’ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಬುಧವಾರ ಓದುಗರ ಪ್ರಶ್ನೆಗಳಿಗೆ ಉತ್ತರ ನೀಡಿದ ಅವರು, ‘ಪಿಡಬ್ಲ್ಯುಡಿ ಎಂಜಿನಿಯರ್‌ಗಳ (ಎಇ/ಜೆಇ) ನೇಮಕಾತಿ ಪ್ರಕ್ರಿಯೆ ಸಂಬಂಧಿಸಿದ ಪ್ರಕರಣ ಹೈಕೋರ್ಟ್‌ನಲ್ಲಿದೆ. ಈ ಪ್ರಕರಣ ಇತ್ಯರ್ಥವಾಗುವವರೆಗೆ ಇಲಾಖೆಯ ಕೆಲಸಗಳು ಸುಗಮವಾಗಿ ಸಾಗಲು ಟ್ರೈನಿ ಎಂಜಿನಿಯರ್‌ಗಳನ್ನು ನೇಮಕ ಮಾಡಿಕೊಳ್ಳಲಾಗುವುದು’ ಎಂದು ಅವರು ತಿಳಿಸಿದರು.

2,500 ಬ್ಯಾಕ್‌ಲಾಗ್‌ ಹುದ್ದೆ ಖಾಲಿ:‘ವಿವಿಧ ಹುದ್ದೆಗಳಲ್ಲಿ ಒಟ್ಟು 2500 ಬ್ಯಾಕ್‌ಲಾಗ್‌ ಹುದ್ದೆಗಳು ಖಾಲಿ ಇವೆ. ಇವುಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಲು ಉದ್ದೇಶಿಸಲಾಗಿತ್ತು. ಆದರೆ, ಕೊರೊನಾ ಬಿಕ್ಕಟ್ಟಿನ ಕಾರಣ ಎಲ್ಲ ಕಾರ್ಯಗಳು ಸ್ಥಗಿತಗೊಂಡಿವೆ. ಪರಿಸ್ಥಿತಿ ಸುಧಾರಿಸಿದ ನಂತರ ಈ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗುವುದು’ ಎಂದು ಅವರು ತಿಳಿಸಿದರು.

ADVERTISEMENT

990 ಅಭ್ಯರ್ಥಿಗಳಿಗೆ ಆದೇಶ ಶೀಘ್ರ:ಕರ್ನಾಟಕ ವಸತಿ ಶಿಕ್ಷಣ ಶಾಲೆಗಳ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಸಂಪೂರ್ಣಗೊಂಡಿದ್ದು, ಈಗಾಗಲೇ 660 ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡಲಾಗಿದೆ. ಉಳಿದವರ ಜಾತಿ ಪ್ರಮಾಣಪತ್ರ, ದಾಖಲೆಗಳ ಪರಿಶೀಲನೆ ನಡೆಯುವ ಹಂತದಲ್ಲಿ ಲಾಕ್‌ಡೌನ್‌ ಘೋಷಿಸಿದ್ದರಿಂದ ಪ್ರಕ್ರಿಯೆ ವಿಳಂಬವಾಯಿತು. ಉಳಿದ 990 ಅಭ್ಯರ್ಥಿಗಳಿಗೆ ಶೀಘ್ರದಲ್ಲಿಯೇ ನೇಮಕಾತಿ ಆದೇಶ ನೀಡಲಾಗುವುದು ಎಂದು ಕಾರಜೋಳ ತಿಳಿಸಿದರು.

ನೇಮಕಾತಿಗೆ ಸೂಚನೆ:‘ಅನುದಾನಿತ ಶಾಲಾ–ಕಾಲೇಜುಗಳಲ್ಲಿನ ಖಾಲಿ ಹುದ್ದೆ ಭರ್ತಿ ಮಾಡಿಕೊಳ್ಳುವುದಕ್ಕೆ ಸರ್ಕಾರ ಸೂಚನೆ ನೀಡಿದೆ. ಆಡಳಿತ ಮಂಡಳಿಗಳು ಯಾವುದೇ ನೆಪ ಹೇಳದೇ ಖಾಲಿ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಬೇಕು. ನೇಮಕ ಮಾಡಿಕೊಳ್ಳದಿದ್ದರೆ ಸಂಬಂಧಪಟ್ಟ ಶಾಲೆ ಅಥವಾ ಕಾಲೇಜಿಗೆ ಸರ್ಕಾರದಿಂದ ಅನುದಾನ ನೀಡುವುದನ್ನು ಸ್ಥಗಿತಗೊಳಿಸಬೇಕಾಗುತ್ತದೆ’ ಎಂದೂ ಅವರು ಎಚ್ಚರಿಸಿದರು.

ಸಂಶೋಧನಾ ವಿದ್ಯಾರ್ಥಿಗಳಿಗೆ ಫೆಲೋಷಿಪ್‌ ಪಾವತಿ ಆಗುತ್ತಿಲ್ಲ ಎಂದು ಬಳ್ಳಾರಿಯ ರಮೇಶ್‌ ಎಂಬುವರು ಸಚಿವರ ಗಮನಕ್ಕೆ ತಂದರು. ‘ಪಿಎಚ್‌ಡಿ ಮಾಡುತ್ತಿರುವವರಿಗೆ ಫೆಲೋಷಿಪ್‌ ಅಥವಾ ಸ್ಕಾಲರ್‌ಶಿಪ್‌ ನೀಡಲು ಸೂಚನೆ ನೀಡಿದ್ದೇನೆ. 19 ಲಕ್ಷ ವಿದ್ಯಾರ್ಥಿಗಳ ಬ್ಯಾಂಕ್‌ ಖಾತೆಗಳಿಗೆ ಆರ್‌ಟಿಜಿಎಸ್‌ ಮೂಲಕ ಹಣ ಸಂದಾಯ ಮಾಡಲಾಗುವುದು’ ಎಂದು ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.