ADVERTISEMENT

ಸ್ವಯಂ ಉದ್ಯೋಗಕ್ಕಾಗಿ ₹50 ಸಾವಿರ ನೇರ ಸಾಲ

ಎಸ್ಸಿ, ಎಸ್ಟಿ ಸಮುದಾಯದವರಿಗೆ ನೆರವು: ಕಾರಜೋಳ

​ಪ್ರಜಾವಾಣಿ ವಾರ್ತೆ
Published 25 ಜೂನ್ 2020, 1:07 IST
Last Updated 25 ಜೂನ್ 2020, 1:07 IST
ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ
ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ   

ಬೆಂಗಳೂರು:‘ಲಾಕ್‌ಡೌನ್‌ ಕಾರಣದಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಬಡವರು ಸ್ವಂತ ಉದ್ಯೋಗ ಆರಂಭಿಸಲು ₹ 50 ಸಾವಿರದವರೆಗೆ ನೇರ ಸಾಲ ನೀಡುವ ನೂತನ ಯೋಜನೆಯನ್ನು ಸರ್ಕಾರ ಜಾರಿಗೆ ತರಲಿದೆ’ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ತಿಳಿಸಿದರು.

‘ಪ್ರಜಾವಾಣಿ’ ಕಚೇರಿಯಲ್ಲಿ ಬುಧವಾರ ನಡೆದ ಫೋನ್ ಇನ್ ಕಾರ್ಯಕ್ರಮದಲ್ಲಿ ಪ್ರತಿಕ್ರಿಯಿಸಿದ ಅವರು, ಈ ಯೋಜನೆ ವಿವರಿಸಿದರು.

‘ಸ್ವ ಉದ್ಯೋಗ ಆರಂಭಿಸಲು ಬ್ಯಾಂಕ್‌ ಸಾಲ ಪಡೆಯುವವರಿಗೆ ಇದುವರೆಗೆ ಸಮಾಜ ಕಲ್ಯಾಣ ಇಲಾಖೆ ಅಧೀನದ ವಿವಿಧ ನಿಗಮಗಳ ಮೂಲಕ ಸಹಾಯಧನ ನೀಡಲಾಗುತ್ತಿತ್ತು. ಸುಲಭವಾಗಿ ಸಾಲ ಸಿಗುವಂತಾಗಬೇಕು ಎಂಬ ಕಾರಣಕ್ಕೆ ನಿಗಮಗಳ ಮೂಲಕವೇ ನೇರ ಸಾಲ ನೀಡಲು ನಿರ್ಧರಿಸಿದ್ದೇವೆ. ಈ ಸಾಲದಲ್ಲಿ ಶೇ 50ರಷ್ಟು ಸಹಾಯಧನ’ ಎಂದರು.

ADVERTISEMENT

‘ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಕನಿಷ್ಠ 100 ಫಲಾನುಭವಿಗಳಿಗೆ ಈ ಸೌಲಭ್ಯ ಕಲ್ಪಿಸುವ ಚಿಂತನೆ ಇದೆ. ತರಕಾರಿ, ಹಣ್ಣು- ಹೂವು ಮಾರಾಟ, ಮೀನು–ಮಾಂಸ ಮಾರಾಟ, ಮೇಕೆ, ಕುರಿ ಸಾಕಣೆ ಮುಂತಾದ ಸ್ವಂತ ಉದ್ಯೋಗ ಮಾಡುವ ಮೂಲಕ ಬಡವರು ಬದುಕಿನ ದಾರಿ ಕಂಡುಕೊಳ್ಳುವಂತಾಗಬೇಕು ಎಂಬುದು ನಮ್ಮ ಆಶಯ’ ಎಂದರು.

‘ನೇರ ಸಾಲಕ್ಕೆ ಶೀಘ್ರವೇ ಅರ್ಜಿ ಆಹ್ವಾನಿಸಲಿದ್ದೇವೆ. ಸೌಲಭ್ಯ ಪಡೆಯಲು ಜನ ಬೆಂಗಳೂರಿಗೆ ಬರಬೇಕಿಲ್ಲ. ಅವರು ಇರುವ ತಾಲ್ಲೂಕುಗಳಲ್ಲೇ ಅರ್ಜಿ ಹಾಕಲು ವ್ಯವಸ್ಥೆ ಕಲ್ಪಿಸಲಾಗುತ್ತದೆ. ಅರ್ಹ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಯೂ ತಾಲ್ಲೂಕು ಮಟ್ಟದಲ್ಲೇ ನಡೆಯಲಿದೆ’ ಎಂದು ಅವರು ಸ್ಪಷ್ಟಪಡಿಸಿದರು.

‘ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ರಾಜ್ಯಮಟ್ಟದ ಅಭಿವೃದ್ಧಿ ಪರಿಷತ್ತು ಕೂಡಾ ನೇರ ಸಾಲ ನೀಡುವ ಯೋಜನೆಗೆ ಅನುಮೋದನೆ ನೀಡಿದೆ. ಬ್ಯಾಂಕ್‌ ಸಾಲ ಪಡೆದು ಸ್ವ–ಉದ್ಯೋಗ ಕೈಗೊಳ್ಳುವವರಿಗೆ ₹ 1 ಲಕ್ಷದವರೆಗೆ ಸಹಾಯಧನ ನೀಡುವ ಈ ಹಿಂದಿನ ಕಾರ್ಯಕ್ರಮವೂ ಮುಂದುವರಿಯಲಿದೆ’ ಎಂದು ಸಮಾಜ ಕಲ್ಯಾಣ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಯಾವ ನಿಗಮಗಳಲ್ಲಿ ಸಾಲ ವಿತರಣೆ

*ಡಾ.ಬಿ.ಆರ್‌.ಅಂಬೇಡ್ಕರ್ ಅಭಿವೃದ್ಧಿ ನಿಗಮ

*ತಾಂಡಾ ಅಭಿವೃದ್ಧಿ ನಿಗಮ

*ಭೋವಿ ಅಭಿವೃದ್ಧಿ ನಿಗಮ

*ಆದಿಜಾಂಬವ ಅಭಿವೃದ್ಧಿ ನಿಗಮ

*ಸಫಾಯಿ ಕರ್ಮಚಾರಿಗಳ ಅಭಿವೃದ್ಧಿ ನಿಗಮ

*ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ

*ಅಲೆಮಾರಿಗಳ ಅಭಿವೃದ್ಧಿ ಕೋಶ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.