ADVERTISEMENT

ಕಾಲೇಜು ಪ್ರವೇಶ: ಆನ್‌ಲೈನ್‌ನಲ್ಲೇ ಅವಕಾಶ

ಸರ್ಕಾರಿ ಕಾಲೇಜುಗಳಲ್ಲಿ ಪ್ರವೇಶ ಪ್ರಕ್ರಿಯೆ ಅನುಷ್ಠಾನ * ಮೊಬೈಲ್‌ನಲ್ಲಿಯೇ ಅರ್ಜಿ ಸಲ್ಲಿಸಿ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2020, 21:01 IST
Last Updated 10 ಆಗಸ್ಟ್ 2020, 21:01 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಕೋರ್ಸ್‌ಗಳ ವಿಚಾರಣೆಗೆ ಒಮ್ಮೆ, ಅರ್ಜಿ ತರಲು ಮತ್ತೊಮ್ಮೆ, ಭರ್ತಿ ಮಾಡಿದ ಅರ್ಜಿಗಳನ್ನು ದಾಖಲೆಗಳೊಂದಿಗೆ ಸಲ್ಲಿಸಲು ಮತ್ತೊಮ್ಮೆ... ಹೀಗೆ ಪದೇ ಪದೇ ಕಾಲೇಜಿಗೆ ಅಲೆದಾಡುವ ಕಷ್ಟದಿಂದ ವಿದ್ಯಾರ್ಥಿಗಳಿಗೆ ಮುಕ್ತಿ ನೀಡಿದೆ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ.

ರಾಜ್ಯದ ಸರ್ಕಾರಿ ಪದವಿ ಕಾಲೇಜುಗಳಲ್ಲಿ ದಾಖಲಾತಿ ಪಡೆಯಲು ಮೊಬೈಲ್‌ ಮೂಲಕವೇ ಸುಲಭವಾಗಿ ಅರ್ಜಿ ಸಲ್ಲಿಸಬಹುದಾಗಿದೆ.

‘ಪ್ರವೇಶ ಸಿಕ್ಕಿದೆಯೋ ಇಲ್ಲವೋ ಎಂದು ತಿಳಿದುಕೊಳ್ಳಲು ವಿದ್ಯಾರ್ಥಿಗಳು ಕಾಲೇಜಿಗೆ ಮೂರು–ನಾಲ್ಕು ಬಾರಿ ಓಡಾಡಬೇಕಾಗುತ್ತಿತ್ತು. ಸೋಂಕು ಹರಡುತ್ತಿರುವ ಈ ಸಂದರ್ಭದಲ್ಲಿ ಅಲೆದಾಡುವುದನ್ನು ತಪ್ಪಿಸಲು ಹಾಗೂ ಶ್ರಮ, ಸಮಯ ಉಳಿಸಲು ಆನ್‌ಲೈನ್‌ ಪ್ರವೇಶ ಪ್ರಕ್ರಿಯೆ ಅನುಷ್ಠಾನಗೊಳಿಸಲಾಗುತ್ತಿದೆ’ ಎಂದು ಇಲಾಖೆಯ ಆಯುಕ್ತ ಪಿ. ಪ್ರದೀಪ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಪ್ರಸಕ್ತ ಸಾಲಿನಲ್ಲಿ (2020–21) ರಾಜ್ಯದ 430 ಸರ್ಕಾರಿ ಕಾಲೇಜುಗಳಿಗೆ ಮೊಬೈಲ್‌ನಲ್ಲಿಯೇ ಅರ್ಜಿ ಸಲ್ಲಿಸಬಹುದಾಗಿದೆ. ಇದಕ್ಕೆ ಯಾವುದೇ ಶುಲ್ಕವಿಲ್ಲ. ವಾರದ ಕೊನೆಯಲ್ಲಿ ಅಂದರೆ, ಶನಿವಾರ ವಿದ್ಯಾರ್ಥಿಗಳಿಗೆ ಮೊಬೈಲ್‌ನಲ್ಲಿ ಎಸ್‌ಎಂಎಸ್‌ ಕಳುಹಿಸಲಾಗುತ್ತದೆ. ಅವರು ಯಾವ ಕಾಲೇಜಿಗೆ, ಯಾವ ಕೋರ್ಸ್‌ಗೆ ಆಯ್ಕೆಯಾಗಿದ್ದಾರೆ. ದಾಖಲಾತಿಗೆ ಕೊನೆಯ ದಿನ ಯಾವುದು ಎಂಬ ಮಾಹಿತಿ ಅದರಲ್ಲಿರುತ್ತದೆ. ದಾಖಲೆಗಳೊಂದಿಗೆ ವಿದ್ಯಾರ್ಥಿಗಳು ನಿರ್ದಿಷ್ಟ ಕಾಲೇಜಿಗೆ ತೆರಳಿ, ಶುಲ್ಕ ಪಾವತಿಸಿ ಪ್ರವೇಶ ಪಡೆಯಬಹುದು’ ಎಂದರು.

ಬೆಂಗಳೂರಿನ ಎನ್‌ಐಸಿ ಸಂಸ್ಥೆಯ ಸಹಯೋಗದೊಂದಿಗೆ ಈ ತಂತ್ರಾಂಶ ಅಭಿವೃದ್ಧಿಪಡಿಸಲಾಗಿದೆ. ಮಾಹಿತಿಗೆ, ಆನ್‌ಲೈನ್‌ ಪ್ರವೇಶ ಸಹಾಯವಾಣಿ– 8277735113, 8277573373 ಸಂಪರ್ಕಿಸಬಹುದು. ಇ–ಮೇಲ್‌ ವಿಳಾಸ– dceadmissions2020@gmai*.com

ಅರ್ಜಿ ಸಲ್ಲಿಕೆ ವಿವರ

*ಇಲಾಖೆಯ ವೆಬ್‌ಸೈಟ್‌ನ ‌ http:dce.kar.nic.in/DCEadmissions/Admissionform.aspx ಈ ಲಿಂಕ್‌ನಲ್ಲಿ ಅರ್ಜಿಗಳು ಲಭ್ಯ ಇವೆ.

*ದ್ವಿತೀಯ ಪಿಯು ದೃಢೀಕೃತ ಅಂಕಪಟ್ಟಿಯನ್ನು ಸ್ಕ್ಯಾನ್‌ ಮಾಡಿ, ಅರ್ಜಿ ಜೊತೆಗೆ ಅಪ್‌ಲೋಡ್‌ ಮಾಡಬೇಕು

*ವಿದ್ಯಾರ್ಥಿಗಳು ತಾವು ಇಚ್ಚಿಸುವ 10 ಕಾಲೇಜು-ಕೋರ್ಸು/ ಕಾಂಬಿನೇಷನ್‍ಗಳನ್ನು ಆದ್ಯತೆ ಮೇರೆಗೆ ಆಯ್ಕೆ ಮಾಡಿಕೊಳ್ಳಬಹುದು.

*ವಿದ್ಯಾರ್ಥಿಯ ಆದ್ಯತೆ ಹಾಗೂ ಮೆರಿಟ್-ರೋಸ್ಟರ್ ಆಧಾರದ ಮೇಲೆ ಆಯ್ಕೆ ಪಟ್ಟಿಯನ್ನು ತಂತ್ರಾಂಶದಲ್ಲಿ ಸಿದ್ಧಪಡಿಸಿ ಸಂಬಂಧಿಸಿದ ವಿದ್ಯಾರ್ಥಿಗೆ ಎಸ್.ಎಂ.ಎಸ್. ಕಳುಹಿಸಲಾಗುವುದು

*ವಿದ್ಯಾರ್ಥಿಗಳು ಕಾಲೇಜಿಗೆ ಪ್ರವೇಶ ಪಡೆಯಲು ತೆರಳುವಾಗ, ಎರಡು ಭಾವಚಿತ್ರ, ಎಸ್‌ಎಸ್‌ಎಲ್‌ಸಿ, ಪಿಯುಸಿ ಮೂಲ ಅಂಕಪಟ್ಟಿ, ಆದಾಯ ಮತ್ತು ಜಾತಿ ಪ್ರಮಾಣಪತ್ರ, ವರ್ಗಾವಣೆ ಪತ್ರ ತೆಗೆದುಕೊಂಡು ಹೋಗಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.