ADVERTISEMENT

ರಾಜ್ಯದಲ್ಲಿ ಅರಾಜಕತೆ ಸೃಷ್ಟಿ–ಶೆಟ್ಟರ್‌ ಟೀಕೆ

ಬರದಿಂದ ಹಾನಿಗೊಳಗಾದ ಪ್ರದೇಶಗಳಿಗೆ ಜಗದೀಶ ಶೆಟ್ಟರ್‌ ನೇತೃತ್ವದ ತಂಡ ಭೇಟಿ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2018, 10:16 IST
Last Updated 4 ಡಿಸೆಂಬರ್ 2018, 10:16 IST
ಶಾಸಕ ಜಗದೀಶ ಶೆಟ್ಟರ್‌ ಅವರು ಮಂಗಳವಾರ ಹೊಸಪೇಟೆ ತಾಲ್ಲೂಕಿನ ಕಾಕುಬಾಳು ಸಮೀಪದ ಮಲ್ಲಮ್ಮ ಎಂಬುವರ ಹೊಲಕ್ಕೆ ಭೇಟಿ ನೀಡಿ, ಮಳೆಯಿಲ್ಲದೇ ಒಣಗಿ ಹೋಗಿರುವ ಮೆಕ್ಕೆಜೋಳವನ್ನು ಪರಿಶೀಲನೆ ನಡೆಸಿದರು. ಪಕ್ಷದ ಹಿರಿಯ ಮುಖಂಡ ಡಾ. ಮಹಿಪಾಲ್‌ ರೆಡ್ಡಿ, ಶಾಸಕರಾದ ಹಾಲಪ್ಪ ಆಚಾರ್‌, ಬಿ. ಶ್ರೀರಾಮುಲು, ಎಂ.ಎಸ್‌. ಸೋಮಲಿಂಗಪ್ಪ, ಬಿಜೆಪಿ ಜಿಲ್ಲಾ ಅಧ್ಯಕ್ಷ ಚನ್ನಬಸವನಗೌಡ ಪಾಟೀಲ ಇದ್ದಾರೆ–ಪ್ರಜಾವಾಣಿ ಚಿತ್ರ
ಶಾಸಕ ಜಗದೀಶ ಶೆಟ್ಟರ್‌ ಅವರು ಮಂಗಳವಾರ ಹೊಸಪೇಟೆ ತಾಲ್ಲೂಕಿನ ಕಾಕುಬಾಳು ಸಮೀಪದ ಮಲ್ಲಮ್ಮ ಎಂಬುವರ ಹೊಲಕ್ಕೆ ಭೇಟಿ ನೀಡಿ, ಮಳೆಯಿಲ್ಲದೇ ಒಣಗಿ ಹೋಗಿರುವ ಮೆಕ್ಕೆಜೋಳವನ್ನು ಪರಿಶೀಲನೆ ನಡೆಸಿದರು. ಪಕ್ಷದ ಹಿರಿಯ ಮುಖಂಡ ಡಾ. ಮಹಿಪಾಲ್‌ ರೆಡ್ಡಿ, ಶಾಸಕರಾದ ಹಾಲಪ್ಪ ಆಚಾರ್‌, ಬಿ. ಶ್ರೀರಾಮುಲು, ಎಂ.ಎಸ್‌. ಸೋಮಲಿಂಗಪ್ಪ, ಬಿಜೆಪಿ ಜಿಲ್ಲಾ ಅಧ್ಯಕ್ಷ ಚನ್ನಬಸವನಗೌಡ ಪಾಟೀಲ ಇದ್ದಾರೆ–ಪ್ರಜಾವಾಣಿ ಚಿತ್ರ   

ಹೊಸಪೇಟೆ: ‘ರಾಜ್ಯದಲ್ಲಿ ನೂರಕ್ಕೂ ಹೆಚ್ಚು ತಾಲ್ಲೂಕುಗಳನ್ನು ಬರಪೀಡಿತ ಪ್ರದೇಶ ಎಂದು ಘೋಷಿಸಲಾಗಿದೆ. ಆದರೆ, ಇದುವರೆಗೆ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಒಂದೇ ಒಂದು ತಾಲ್ಲೂಕಿಗೆ ಭೇಟಿ ನೀಡಿಲ್ಲ. ಆಡಳಿತದ ಮೇಲೆ ಹಿಡಿತ ಕಳೆದುಕೊಂಡಿದ್ದಾರೆ. ಇಡೀ ರಾಜ್ಯದಲ್ಲಿ ಅರಾಜಕತೆ ಸೃಷ್ಟಿಯಾಗಿದೆ’ ಎಂದು ಶಾಸಕ ಜಗದೀಶ ಶೆಟ್ಟರ್‌ ಹೇಳಿದರು.

ಮಳೆ ಕೊರತೆಯಿಂದ ಬೆಳೆ ಹಾಳಾದ ತಾಲ್ಲೂಕಿನ ಕಾಕುಬಾಳು ಗ್ರಾಮ ಸಮೀಪದ ಮಲ್ಲಮ್ಮ ಎಂಬ ರೈತ ಮಹಿಳೆಯ ಹೊಲಕ್ಕೆ ಭೇಟಿ ನೀಡಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

‘ಬರದಿಂದ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ರಾಜ್ಯದಾದ್ಯಂತ ಸುತ್ತಾಡಿ ರೈತರಿಗೆ ಸಕಾಲಕ್ಕೆ ನೆರವು ಕೊಡಿಸುವ ಕೆಲಸ ಮಾಡಬೇಕು. ಆದರೆ, ಅವರು ಬೆಂಗಳೂರು, ಹಾಸನ, ಮಂಡ್ಯ, ರಾಮನಗರ ಬಿಟ್ಟರೆ ಬೇರೆಲ್ಲೂ ಹೋಗುತ್ತಿಲ್ಲ. ಶೇ 80ರಷ್ಟು ಅನುದಾನ ಆ ಜಿಲ್ಲೆಗಳಿಗಷ್ಟೇ ಬಿಡುಗಡೆ ಮಾಡುತ್ತಿದ್ದಾರೆ. ಉತ್ತರ ಕರ್ನಾಟಕ, ಕರಾವಳಿ ಕರ್ನಾಟಕ ರಾಜ್ಯದಲ್ಲಿದೆ ಎಂಬುದನ್ನು ಮರೆತು ಬಿಟ್ಟಿದ್ದಾರೆ. ಉತ್ತರ ಕರ್ನಾಟಕದ ಜನರ ಸಮಸ್ಯೆಗಳೆಂದರೆ ಸರ್ಕಾರಕ್ಕೆ ಅಲರ್ಜಿಯಾಗಿದೆ’ ಎಂದರು.

ADVERTISEMENT

‘ಬಿಜೆಪಿಯಿಂದ ಬರ ಅಧ್ಯಯನ ಪ್ರವಾಸ ಶುರು ಮಾಡಿದ ನಂತರ ಸರ್ಕಾರವು ಸಚಿವರಿಗೆ ಬರ ನಿರ್ವಹಣೆಯ ಜವಾಬ್ದಾರಿ ವಹಿಸಿದೆ. ಆದರೆ, ಆಯಾ ಜಿಲ್ಲಾ ಉಸ್ತುವಾರಿ ಸಚಿವರು ಇದುವರೆಗೆ ಬರಕ್ಕೆ ಸಂಬಂಧಿಸಿದಂತೆ ಒಂದೇ ಒಂದು ಸಭೆ ನಡೆಸಿಲ್ಲ. ಗದಗ ಜಿಲ್ಲೆಯಲ್ಲಿ ಉಸ್ತುವಾರಿ ಸಚಿವರೇ ಇಲ್ಲ. ಭೀಕರ ಬರಗಾಲದಿಂದ ಜನ ತೊಂದರೆ ಅನುಭವಿಸುತ್ತಿದ್ದಾರೆ. ಅವರ ಗೋಳು ಕೇಳುವವರೇ ಇಲ್ಲ. ಬರಕ್ಕಾಗಿಯೇ ವಿಶೇಷವಾಗಿ ನೇಮಕಗೊಂಡಿರುವ ಐ.ಎ.ಎಸ್‌. ಅಧಿಕಾರಿಗಳು ಕೂಡ ಇದುವರೆಗೆ ಜಿಲ್ಲಾಮಟ್ಟದಲ್ಲಿ ಸಭೆ ನಡೆಸಿಲ್ಲ’ ಎಂದು ಆರೋಪಿಸಿದರು.

‘ಬರದಿಂದ ತೀವ್ರ ಸಂಕಷ್ಟಕ್ಕೆ ಒಳಗಾಗಿರುವ ತಾಲ್ಲೂಕುಗಳಲ್ಲಿ ಮೇವಿನ ಬ್ಯಾಂಕ್‌, ಗೋಶಾಲೆ, ಕುಡಿಯುವ ನೀರಿಗೆ ವ್ಯವಸ್ಥೆ ಮಾಡಿಲ್ಲ. ಇದರಿಂದ ಹಾಹಾಕಾರ ಸೃಷ್ಟಿಯಾಗಿದೆ. ಇಂತಹ ಸಮಯದಲ್ಲಿ ಯುದ್ಧೋಪಾದಿಯಲ್ಲಿ ಸರ್ಕಾರ ಕೆಲಸ ಮಾಡಬೇಕು. ಆದರೆ, ಮಾಡುತ್ತಿಲ್ಲ. ಉದ್ಯೋಗ ಖಾತ್ರಿ ಯೋಜನೆ ಅಡಿ ಕಾಮಗಾರಿ ಕೈಗೆತ್ತಿಕೊಂಡು, ಜನರಿಗೆ ಉದ್ಯೋಗ ಕೊಟ್ಟು ಗುಳೇ ತಪ್ಪಿಸಬೇಕು. ಆದರೆ, ಈ ಕೆಲಸ ಆಗುತ್ತಿಲ್ಲ. ಜನ ಗುಳೇ ಹೋಗುತ್ತಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.