ADVERTISEMENT

ಗೋಕರ್ಣ ದೇಗುಲದ ಆಡಳಿತ ರಾಮಚಂದ್ರಾಪುರ ಮಠಕ್ಕೆ ಮರಳಿ ಹಸ್ತಾಂತರ

ಸುಪ್ರೀಂಕೋರ್ಟ್ ಆದೇಶ ಪಾಲನೆ ಸಂಬಂಧ ಪ್ರಕ್ರಿಯೆ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2018, 7:58 IST
Last Updated 3 ನವೆಂಬರ್ 2018, 7:58 IST
ಗೋಕರ್ಣದ ಮಹಾಬಲೇಶ್ವರ ದೇವಸ್ಥಾನದ ಆಡಳಿತವನ್ನು ಕಾರ್ಯನಿರ್ವಹಣಾ ಅಧಿಕಾರಿಯಾಗಿದ್ದ ಎಚ್.ಹಾಲಪ್ಪ ಅವರು ರಾಮಚಂದ್ರಾಪುರ ಮಠದಿಂದ ನೇಮಕವಾಗಿರುವ ಆಡಳಿತಾಧಿಕಾರಿ ಜಿ.ಕೆ.ಹೆಗಡೆ ಅವರಿಗೆ ಶನಿವಾರ ಪುನಃ ಹಸ್ತಾಂತರಿಸಿದರು
ಗೋಕರ್ಣದ ಮಹಾಬಲೇಶ್ವರ ದೇವಸ್ಥಾನದ ಆಡಳಿತವನ್ನು ಕಾರ್ಯನಿರ್ವಹಣಾ ಅಧಿಕಾರಿಯಾಗಿದ್ದ ಎಚ್.ಹಾಲಪ್ಪ ಅವರು ರಾಮಚಂದ್ರಾಪುರ ಮಠದಿಂದ ನೇಮಕವಾಗಿರುವ ಆಡಳಿತಾಧಿಕಾರಿ ಜಿ.ಕೆ.ಹೆಗಡೆ ಅವರಿಗೆ ಶನಿವಾರ ಪುನಃ ಹಸ್ತಾಂತರಿಸಿದರು   

ಗೋಕರ್ಣ (ಉತ್ತರ ಕನ್ನಡ):ಇಲ್ಲಿನ ಮಹಾಬಲೇಶ್ವರ ದೇವಸ್ಥಾನದ ಆಡಳಿತವನ್ನು ಸುಪ್ರೀಂಕೋರ್ಟ್ ನೀಡಿದ ಮಧ್ಯಂತರ ಆದೇಶದ ಕಾರಣ ಮುಜರಾಯಿ ಇಲಾಖೆಯು ರಾಮಚಂದ್ರಾಪುರ ಮಠಕ್ಕೆ ಶನಿವಾರ ಮರಳಿ ಹಸ್ತಾಂತರಿಸಿತು.‌

ದೇವಾಲಯದ ಕಾರ್ಯನಿರ್ವಹಣಾ ಅಧಿಕಾರಿಯಾಗಿದ್ದ ಎಚ್.ಹಾಲಪ್ಪ ಅವರು ರಾಮಚಂದ್ರಾಪುರ ಮಠದಿಂದ ನೇಮಕವಾದ ದೇಗುಲದ ಆಡಳಿತಾಧಿಕಾರಿ ಜಿ.ಕೆ.ಹೆಗಡೆ ಅವರಿಗೆ ಕಾಗದ ಪತ್ರಗಳನ್ನು ವಾಪಸ್ ನೀಡಿದರು. ಇದೇವೇಳೆ, ದೇವಸ್ಥಾನಕ್ಕೆ ಸಂಬಂಧಿಸಿದ ಚರ, ಸ್ಥಿರ ಆಸ್ತಿಗಳು, ವಿವಿಧ ಆಭರಣಗಳನ್ನೂ ಮಠಕ್ಕೆ ವರ್ಗಾವಣೆ ಮಾಡಿದರು. ಈ ಮೂಲಕ ಆಡಳಿತದ ಸಂಪೂರ್ಣ ಅಧಿಕಾರವನ್ನು ವರ್ಗಾವಣೆ ಮಾಡಲಾಯಿತು.

ಈ ಸಂದರ್ಭದಲ್ಲಿಕಂದಾಯಅಧಿಕಾರಿಗಳಾದ ಕೆ.ಎಸ್.ಗೊಂಡ, ಗ್ರಾಮ ಲೆಕ್ಕಾಧಿಕಾರಿ, ರಾಮಚಂದ್ರಾಪುರ ಮಠದ ಪರವಾಗಿರುವ ಉಪಾಧಿವಂತ ಮಂಡಳದ ಸದಸ್ಯರು ಉಪಸ್ಥಿತರಿದ್ದರು.

ADVERTISEMENT

‘ಮುಂದಿನ ಆದೇಶದವರೆಗೆ ಯಥಾಸ್ಥಿತಿ ಕಾಯ್ದುಕೊಳ್ಳಬೇಕು’ ಎಂದು ಸುಪ್ರೀಂಕೋರ್ಟ್ ಈ ಹಿಂದೆ ನೀಡಿದ್ದ ಆದೇಶಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಅದನ್ನು ನ.1ರಂದು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕುರಿಯನ್ ಜೋಸೆಫ್ ಅವರ ನೇತೃತ್ವದ ಪೀಠವು, ದೇವಸ್ಥಾನದ ಆಡಳಿತವು ಮಠದ ಬಳಿಯೇ ಇರಲಿದೆ. ಹಸ್ತಾಂತರ ಪ್ರಕ್ರಿಯೆ ಸೋಮವಾರದೊಳಗೆ (ನ.5) ಪೂರ್ಣಗೊಳ್ಳಬೇಕು ಎಂದು ಆದೇಶ ನೀಡಿತ್ತು.

ಸುಪ್ರೀಂಕೋರ್ಟ್‌ನ ಆದೇಶವನ್ನು ಮೀರಿ ಸರ್ಕಾರವು ದೇವಸ್ಥಾನದ ಆಡಳಿತವನ್ನು ತನ್ನ ಸುಪರ್ದಿಗೆ ತೆಗೆದುಕೊಂಡಿದೆ ಎಂದು ರಾಮಚಂದ್ರಾಪುರ ಮಠವು ನ್ಯಾಯಾಂಗ ನಿಂದನೆಯ ದೂರು ನೀಡಿತ್ತು. ಇದೇವೇಳೆಸರ್ಕಾರವು ಆದೇಶದ ಕುರಿತು ಸ್ಪಷ್ಟನೆ ಕೋರಿ ಅರ್ಜಿ ಸಲ್ಲಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.