ಬೆಂಗಳೂರು: ಅರಣ್ಯ ವ್ಯಾಪ್ತಿಯಲ್ಲಿ ಸಿನಿಮಾ, ಧಾರಾವಾಹಿ ಹಾಗೂ ಸಾಕ್ಷ್ಯಚಿತ್ರಗಳ ಚಿತ್ರೀಕರಣಕ್ಕೆ ಸರ್ಕಾರದ ಅನುಮತಿ ಕಡ್ಡಾಯಗೊಳಿಸಲಾಗುವುದು ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ.
ಈ ಕುರಿತು ಆದೇಶ ಹೊರಡಿಸುವಂತೆ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಸಚಿವರು ಸೂಚಿಸಿದ್ದಾರೆ.
ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ನಿಗದಿತ ಶುಲ್ಕ ಕಟ್ಟಿಸಿಕೊಂಡು ಚಿತ್ರೀಕರಣಕ್ಕೆ ಅನುಮತಿ ನೀಡುತ್ತಿದ್ದಾರೆ. ಸ್ಥಳೀಯ ಮಟ್ಟದಲ್ಲೂ ಅಧಿಕಾರಿಗಳು ಅನುಮತಿ ನೀಡುತ್ತಿರುವುದರಿಂದ ಅರಣ್ಯ ಪ್ರದೇಶದ ಗೌಪ್ಯ ಮಾಹಿತಿ ಹೊರ ಜಗತ್ತಿಗೆ ಲಭಿಸುವ ಸಂಭವ ಇರುತ್ತದೆ. ಇದು ಪರಿಸರ ಹಾಗೂ ಜೀವವೈವಿಧ್ಯಕ್ಕೂ ಧಕ್ಕೆ ತರುತ್ತದೆ ಎಂದು ಅವರು ಟಿಪ್ಪಣಿಯಲ್ಲಿ ಪ್ರತಿಪಾದಿಸಿದ್ದಾರೆ.
ಅರಣ್ಯ ಹಾಗೂ ವನ್ಯ ಜೀವಿಗಳನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಹಸ್ತಾಂತರಿಸಬೇಕಾಗಿದೆ. ಹೀಗಾಗಿ, ರಾಜ್ಯದ ಯಾವುದೇ ಅರಣ್ಯ ಪ್ರದೇಶದಲ್ಲಿ ಯಾವುದೇ ಬಗೆಯ ಚಿತ್ರೀಕರಣಕ್ಕೆ ಕಡ್ಡಾಯವಾಗಿ ಸರ್ಕಾರದ ವತಿಯಿಂದ ಅನುಮತಿ ಪಡೆಯಲು ಸೂಕ್ತ ಆದೇಶ ಹೊರಡಿಸುವಂತೆ ನಿರ್ದೇಶನ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.