ADVERTISEMENT

ಕೊಳವೆಬಾವಿ ಹಗರಣ ಮುಚ್ಚಿಹಾಕಲು ಯತ್ನ: ಶಾಸಕ ಪ್ರಿಯಾಂಕ್‌ ಖರ್ಗೆ

​ಪ್ರಜಾವಾಣಿ ವಾರ್ತೆ
Published 17 ಮೇ 2022, 15:56 IST
Last Updated 17 ಮೇ 2022, 15:56 IST
ಪ್ರಿಯಾಂಕ್ ಖರ್ಗೆ
ಪ್ರಿಯಾಂಕ್ ಖರ್ಗೆ   

ಬೆಂಗಳೂರು: ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ಡಾ.ಬಿ.ಆರ್‌. ಅಂಬೇಡ್ಕರ್‌ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಕೊಳವೆಬಾವಿ ಹಗರಣವನ್ನು ಮುಚ್ಚಿಹಾಕಲು ಬಿಜೆಪಿ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಕಾಂಗ್ರೆಸ್‌ ಶಾಸಕ ಪ್ರಿಯಾಂಕ್‌ ಖರ್ಗೆ ಆರೋಪಿಸಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘₹ 431 ಕೋಟಿ ಮೊತ್ತದಲ್ಲಿ ಕೊಳವೆಬಾವಿಗಳನ್ನು ಕೊರೆಯುವ ಕಾಮಗಾರಿಗಳ ಟೆಂಡರ್‌ನಲ್ಲಿ ಅವ್ಯವಹಾರ ನಡೆದಿರುವುದನ್ನು ದಾಖಲೆಸಮೇತ ಬಹಿರಂಗಪಡಿಸಿದ್ದೆ. ₹ 173 ಕೋಟಿಯಷ್ಟು ಅವ್ಯವಹಾರ ನಡೆದಿರುವುದನ್ನೂ ತಿಳಿಸಿದ್ದೆ. ತನಿಖೆಗೆ ಆದೇಶಿಸಿದ್ದ ಸಮಾಜ ಕಲ್ಯಾಣ ಇಲಾಖೆ, ಈಗ ಷರತ್ತುಬದ್ಧವಾಗಿ ಕಾಮಗಾರಿ ಪೂರ್ಣಗೊಳಿಸಲು ಅನುಮತಿ ನೀಡಿದೆ’ ಎಂದು ದೂರಿದರು.

ಗ್ರಾಮೀಣಾಭಿವೃದ್ಧಿ ಮತ್ತು ‍ಪಂಚಾಯತ್‌ ರಾಜ್‌ ಇಲಾಖೆ ಮುಖ್ಯ ಎಂಜಿನಿಯರ್‌ಗೆ ತನಿಖೆಯ ನೇತೃತ್ವ ವಹಿಸಲಾಗಿತ್ತು. 15 ದಿನಗಳೊಳಗೆ ವರದಿ ಸಲ್ಲಿಸುವಂತೆ ಸೂಚಿಸಲಾಗಿತ್ತು. ವಾಣಿಜ್ಯ ತೆರಿಗೆ ಇಲಾಖೆಯ ಆಯುಕ್ತರಿಗೆ ಪತ್ರ ಬರೆದು ಗುತ್ತಿಗೆದಾರರು ಸಲ್ಲಿಸಿರುವ ದಾಖಲೆಗಳ ನೈಜತೆ ಕುರಿತು ವಿವರ ಕೇಳಿದ್ದರು. ಜಲಜೀವನ್‌ ಮಿಷನ್‌ ಯೋಜನೆಯ ಕಾಮಗಾರಿಯ ಕಾರಣ ನೀಡಿ ಏಪ್ರಿಲ್‌ 25ರಂದು ಪತ್ರ ಬರೆದು ತನಿಖಾಧಿಕಾರಿ ಸ್ಥಾನದಿಂದ ನಿರ್ಗಮಿಸಿದ್ದಾರೆ. ಈಗ ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆಗೆ ತನಿಖೆಯನ್ನು ವಹಿಸಿರುವುದಾಗಿ ಮಾಹಿತಿ ನೀಡಿದ್ದಾರೆ ಎಂದರು.

ADVERTISEMENT

‘ತನಿಖೆಯ ಕುರಿತು ಯಾವುದೇ ಸ್ಪಷ್ಟವಾದ ಮಾಹಿತಿ ಲಭ್ಯವಾಗುತ್ತಿಲ್ಲ. ಆದರೆ, ನಕಲಿ ದಾಖಲೆಗಳನ್ನು ಸಲ್ಲಿಸಿ ಗುತ್ತಿಗೆ ಪಡೆದಿರುವವರೇ ಕೆಲಸ ಮುಂದುವರಿಸಲು ಅವಕಾಶ ನೀಡಲಾಗಿದೆ. ಪರಿಶಿಷ್ಟ ಜಾತಿಯ ಜನರ ಅಭಿವೃದ್ಧಿಗೆ ಮೀಸಲಾದ ಅನುದಾನದ ದುರ್ಬಳಕೆ ಪ್ರಯತ್ನವನ್ನು ವ್ಯವಸ್ಥಿತವಾಗಿ ಮುಚ್ಚಿಹಾಕಲಾಗುತ್ತಿದೆ’ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.