ADVERTISEMENT

ಚರ್ಚೆ ಮಾಡಿ ಆದಷ್ಟು ಬೇಗ ಸೀಟು ಹಂಚಿಕೆ ಬಗ್ಗೆ ತೀರ್ಮಾನ ಮಾಡುತ್ತೇವೆ: ಪರಮೇಶ್ವರ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2019, 9:45 IST
Last Updated 25 ಫೆಬ್ರುವರಿ 2019, 9:45 IST
ಜಿ. ಪರಮೇಶ್ವರ
ಜಿ. ಪರಮೇಶ್ವರ   

ಬೆಂಗಳೂರು: ಲೋಕಸಭಾ ಚುನಾವಣೆಗೆ ಸೀಟು ಹಂಚಿಕೆ ಬಗ್ಗೆ ಮಾತನಾಡಿದ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರಹೈಕಮಾಂಡ್ ಸೂಚನೆ ಹಿನ್ನೆಲೆಯಲ್ಲಿ ಸಭೆ ನಡೆಸುತ್ತೇವೆ. ಜೆಡಿಎಸ್ ನಾಯಕರ ಜೊತೆ ಇಂದು ಸಭೆ ನಡೆಸುತ್ತೇವೆ. ಇದು ಆರಂಭಿಕ ಹಂತದ ಸಭೆ ಅಷ್ಟೇ ಎಂದಿದ್ದಾರೆ.

ಸಭೆಗೆ‌ ನಾನು ಹಾಗೂ ದಿನೇಶ್ ಗುಂಡೂರಾವ್ ಹೋಗುತ್ತಿದ್ದೇವೆ. ಇದುವರೆಗೂ ಇಷ್ಟೇ ಸೀಟು ಬೇಕೆಂದು ಜೆಡಿಎಸ್ ನಾಯಕರು ಕೇಳಿಲ್ಲ. ಹಾಗೇ ಎಲ್ಲರೂ ಒಂದೊಂದು ಮಾತು ಹೇಳುತ್ತಿದ್ದಾರೆ.‌ಇವತ್ತಿನ ಸಭೆಯೇ ಅಂತಿಮ ಅಲ್ಲ. ಚರ್ಚೆ ಮಾಡಿ ಆದಷ್ಟು ಬೇಗ ಸೀಟು ಹಂಚಿಕೆ ಅಂತಿಮ ಮಾಡುತ್ತೇವೆ. ಇವತ್ತಿನ ಸಭೆಯಲ್ಲಿ ಸೀಟು ಹಂಚಿಕೆ ಬಗ್ಗೆ ಫೈನಲ್ ಆದರೆ ಸಂತೋಷ. ಇಲ್ಲವಾದರೆ ಮುಂದೆ ಮತ್ತೆ ಸಭೆ ಸೇರಿ ನಿರ್ಧಾರ ಮಾಡುತ್ತೇವೆ.

ಸೀಟು ಹಂಚಿಕೆ ಕುರಿತು ಕಾಂಗ್ರೆಸ್- ಜೆಡಿಎಸ್‌ ದೋಸ್ತಿಗಳ ನಡುವೆ ಕುಮಾರಕೃಪಾ ಅತಿಥಿಗೃಹದಲ್ಲಿ ಸುಮಾರು ಒಂದೂಕಾಲು ಗಂಟೆ ನಡೆದ ಸಭೆ ನಡೆದಿದೆ. ಹತ್ತು ಸೀಟುಗಳಿಗೆ ಜೆಡಿಎಸ್ ಬೇಡಿಕೆ ಇಟ್ಟಿದ್ದು,ಕನಿಷ್ಠ ಎಂಟು ಕ್ಷೇತ್ರಗಳನ್ನಾದರೂ ಬಿಟ್ಟುಕೊಡುವಂತೆ ಷರತ್ತು ಹಾಕಿದೆ ಎನ್ನಲಾಗಿದೆ.

ADVERTISEMENT

ಪ್ರಾಥಮಿಕ ಹಂತದ ಸಭೆಯಲ್ಲಿಕೈ ನಾಯಕರ ಮುಂದೆ ಪಕ್ಷದ ಅಭಿಪ್ರಾಯವನ್ನು ಸ್ಪಷ್ಟವಾಗಿ ಹೇಳಿರುವ ಜೆಡಿಎಸ್ ಮುಖಂಡರು, ಕಾಂಗ್ರೆಸ್‌ನಇಬ್ಬರು ಹಾಲಿ ಸಂಸದರು ಇರುವ ಕ್ಷೇತ್ರಗಳಿಗೆ ಜೆಡಿಎಸ್‌ಪಟ್ಟು ಹಿಡಿದೆದೆ.ಹೈಕಮಾಂಡ್ ತೀರ್ಮಾನದಂತೆ ನಡೆದುಕೊಳ್ಳೋಣ ಎಂದು ಎರಡು ಪಕ್ಷಗಳುಅಂತಿಮವಾಗಿ ತೀರ್ಮಾನಿಸಿವೆ ಎಂದು ಮೂಲಗಳು ತಿಳಿಸಿವೆ.

ಸಭೆಯ ನಂತರ ಮಾತನಾಡಿದಸಚಿವ ಎಚ್. ಡಿ ರೇವಣ್ಣ, ‘ರಾಜ್ಯದಲ್ಲಿ ಕೋಮುವಾದಿ ಶಕ್ತಿಗಳನ್ನು ದೂರ ಇಡಬೇಕು ಎನ್ನುವುದಷ್ಟೇ ನಮ್ಮ ಉದ್ದೇಶ. ಅಷ್ಟು ಸೀಟು, ಇಷ್ಟು ಸೀಟು ಅನ್ನೋ ಪ್ರಶ್ನೆ ಇಲ್ಲ. ಎಲ್ಲ 28 ಕ್ಷೇತ್ರಗಳಲ್ಲೂ ನಾವು ಗೆಲ್ಲಬೇಕು ಎಂಬುದಷ್ಟೇ ನಮ್ಮ ಆಶಯ. ದೇವೇಗೌಡರು ಹಾಗೂಮುಖ್ಯಮಂತ್ರಿ ಅವರ ಮನಸ್ಥಿತಿನೂ ಇದೇ ಆಗಿದೆ. ನಮ್ಮಲ್ಲಿ ಯಾವ ವಿವಾದವೂ ಇಲ್ಲ. ಹಿರಿಯ ನಾಯಕರು ಅಂತಿಮ ಮಾಡುತ್ತಾರೆ’ ಎಂದರು.

ಕಾಂಗ್ರೆಸ್ ರಾಜ್ಯ ಘಟಕದ ಮುಖ್ಯಸ್ಥದಿನೇಶ್ ಗುಂಡೂರಾವ್, ‘28ಕ್ಷೇತ್ರಗಳ ಸೀಟಿನ ಬಗ್ಗೆ ಪ್ರಾಥಮಿಕ ಚರ್ಚೆ ಮಾಡಿದ್ದೇವೆ. ಯಾವ ಕ್ಷೇತ್ರದಲ್ಲಿ ಹೆಚ್ಚು ಗೆಲ್ಲುವ ಅವಕಾಶವಿದೆ ಅಂತ ಅಭ್ಯರ್ಥಿಗಳಿಗೆ ಅವಕಾಶ ನೀಡಲಾಗುವುದು.ಇನ್ನು ಎರಡು ಮೂರು ದಿನಗಳಲ್ಲಿ ಸಮನ್ವಯ ಸಮಿತಿ ಸಭೆ ನಡೆಸುತ್ತೇವೆ.ಆದಷ್ಟು ಬೇಗ ಸೀಟು ಹಂಚಿಕೆ ಅಂತಿಮವಾಗಲಿದೆ. ಇಂದು ನಡೆದ ಸಭೆತುಂಬಾ ಆಶಾದಾಯಕವಾಗಿತ್ತು. ಕೋಮುವಾದಿ‌ ಪಕ್ಷವನ್ನು ದೂರ ಇಡುವುದಷ್ಟೇ ನಮ್ಮ ಉದ್ದೇಶ. ಹೀಗಾಗಿ ಉಭಯ ಪಕ್ಷಗಳಲ್ಲಿ ಯಾವುದೇ ಪ್ರತಿಷ್ಠೆ ಇಲ್ಲದೆ ಹೊಂದಾಣಿಕೆ ಆಗಲಿದೆ’ ಎಂದು ಹೇಳಿದರು.

ಬಂಡೀಪುರ ಅರಣ್ಯ ಪ್ರದೇಶದಲ್ಲಿ ಬೆಂಕಿ ಅವಘಡ

ಎಂಟು ಸಾವಿರಕ್ಕೂ ಹೆಚ್ಚು ಪ್ರದೇಶಕ್ಕೆ ಬೆಂಕಿ ಬಿದ್ದಿದೆ. ಯಾರಾದರೂ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರಾ? ಎಂಬುದರ ಬಗ್ಗೆ ತಿಳಿಯಬೇಕಿದೆ.ಈಗಾಗಲೇ ಅರಣ್ಯ ಸಚಿವರು ಅಲ್ಲಿಗೆ ಹೋಗಿದ್ದಾರೆ. ಬೆಂಕಿ ನಂದಿಸಲು ಏನೆಲ್ಲಾ ಕ್ರಮ ಕೈಗೊಳ್ಳಬೇಕೋ ಅದನ್ನ ಸರ್ಕಾರ ತ್ವರಿತವಾಗಿ ಮಾಡುತ್ತಿದೆ.

ಕೃಷ್ಣ ಭೈರೇಗೌಡ ಟಿಫಿನ್ ವಿಚಾರ

‘ನಾವು ಒಂದು ಪದ್ಧತಿ ಮಾಡಿಕೊಂಡಿದ್ದೇವೆ. ಪ್ರತಿ ಕ್ಯಾಬಿನೆಟ್‌ನಲ್ಲಿ ಯಾರಾದರೂ ಒಬ್ಬ ಸಚಿವರು ತಿಂಡಿ ಮಾಡಿಸಬೇಕು ಅಂತಾ. ತಿಂಡಿಯ ಜೊತೆಗೆ ಕ್ಯಾಬಿನೆಟ್‌ನಲ್ಲಿ ಏನೆಲ್ಲಾ ವಿಷಯಗಳ ಬಗ್ಗೆ ಚರ್ಚೆ ಮಾಡಬೇಕು ಎನ್ನುವುದನ್ನು ತೀರ್ಮಾನಿಸಿದ್ದೇವೆ. ಕ್ಯಾಬಿನೆಟ್‌ನಲ್ಲಿ ಏನೆಲ್ಲಾ ಚರ್ಚೆ ಮಾಡಬೇಕು ಎಂಬುದರ ಬಗ್ಗೆ ಅಲ್ಲಿ ಚರ್ಚೆ ಮಾಡ್ತೀವಿ. ಕೆಲವೊಂದು ಕ್ಯಾಬಿನೆಟ್‌ನಲ್ಲಿ ಈ ರೀತಿ ತಿಂಡಿ ಜೊತೆಗೆ ಚರ್ಚೆಗಳು ಆಗಿಲ್ಲ. ಆದರೆ ಇನ್ನು ಮುಂದೆ ನಡೆಯುವ ಕ್ಯಾಬಿನೆಟ್‌ಗಳಲ್ಲಿ ಈ ಪದ್ಧತಿ ಮುಂದುವರೆಯಲಿದೆ’ ಎಂದು ಸಚಿವ ಕೃಷ್ಣ ಭೈರೇಗೌಡ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.