
ಬೆಂಗಳೂರು: ಅವಧಿ ಮುಗಿಯುತ್ತಿರುವ ಗ್ರಾಮ ಪಂಚಾಯಿತಿಗಳಿಗೆ ಈಗಿರುವ ಆಡಳಿತ ಸಮಿತಿಯನ್ನೇ ಮುಂದಿನ ಆರು ತಿಂಗಳು ಮುಂದುವರಿಸಬೇಕು ಎಂದು ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ಸದಸ್ಯರ ಮಹಾ ಒಕ್ಕೂಟ ಸರ್ಕಾರವನ್ನು ಒತ್ತಾಯಿಸಿದೆ.
ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಗುರುವಾರ ಒಕ್ಕೂಟದ ರಾಜ್ಯ ಪ್ರಧಾನ ಕಾರ್ಯದರ್ಶಿ ಎ.ಎಂ.ಚಲಪತಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಿದ್ದ ಸದಸ್ಯರು ಭಾಗವಹಿಸಿದ್ದರು.
ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ಕಾಡಶೆಟ್ಟಿಹಳ್ಳಿ ಸತೀಶ್ ಮಾತನಾಡಿ, ‘ಗ್ರಾಮ ಪಂಚಾಯಿತಿಗಳ ಅವಧಿಯು 2026ರ ಜನವರಿಯಿಂದ ಮಾರ್ಚ್ ತಿಂಗಳಲ್ಲಿ ಮುಕ್ತಾಯಗೊಳ್ಳುತ್ತದೆ. ರಾಜ್ಯ ಸರ್ಕಾರ ಚುನಾವಣೆಗಳನ್ನು ನಡೆಸಲು ಕ್ರಮ ಕೈಗೊಳ್ಳದೇ ಆಡಳಿತಾಧಿಕಾರಿಯನ್ನು ನೇಮಿಸಲು ಆದೇಶಿಸಿದೆ’ ಎಂದರು.
‘ಆಡಳಿತಾಧಿಕಾರಿ ನೇಮಿಸುವ ಆದೇಶವನ್ನು ಸರ್ಕಾರ ಕೂಡಲೇ ಹಿಂಪಡೆದು, ಈಗಿರುವ ಆಡಳಿತ ಸಮಿತಿಯನ್ನೇ, ನೂತನ ಆಡಳಿತ ಸಮಿತಿಯಾಗಿ ಮುಂದಿನ ಆರು ತಿಂಗಳು ನೇಮಕ ಮಾಡಬೇಕು. 90ರ ದಶಕದಲ್ಲಿ ಗ್ರಾಮ ಪಂಚಾಯಿತಿಗಳ ಅವಧಿಯನ್ನು ವಿಸ್ತರಿಸಿದ್ದನ್ನು ಗಮನಿಸಬಹುದು’ ಎಂದರು.
‘2020ರಲ್ಲಿ ಕೋವಿಡ್ ಕಾರಣದಿಂದ ಚುನಾವಣೆ ನಡೆಸಲು ಸಾಧ್ಯವಾಗದೇ, ಗ್ರಾಮ ಪಂಚಾಯಿತಿ ಅವಧಿ ಮುಕ್ತಾಯವಾದ ಸಂದರ್ಭದಲ್ಲಿ, ಆಗ ವಿರೋಧ ಪಕ್ಷದಲ್ಲಿದ್ದ ಡಿ.ಕೆ.ಶಿವಕುಮಾರ್ ಅವರು ಆಡಳಿತ ಸಮಿತಿಯ ಅವಧಿಯನ್ನೇ ಆರು ತಿಂಗಳು ವಿಸ್ತರಿಸಬೇಕು ಎಂದು ಅಂದಿನ ಸರ್ಕಾರವನ್ನು ಒತ್ತಾಯಿಸಿದ್ದರು. ಹಾಗಾಗಿ ಪಂಚಾಯಿತಿಗಳ ಅವಧಿಯನ್ನು ಆರು ತಿಂಗಳು ವಿಸ್ತರಿಸುವ ಮೂಲಕ ಪ್ರಜಾಪ್ರಭುತ್ವದ ಅಡಿಪಾಯ ಗಟ್ಟಿಗೊಳಿಸಬೇಕು’ ಎಂದು ಸರ್ಕಾರಕ್ಕೆ ಮನವಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.