ADVERTISEMENT

ಗ್ರಾಮ ಸಂಗ್ರಾಮ: ಶೇ 80 ಮತದಾನ?

ಮೊದಲ ಹಂತದ ಮತದಾನ ಶಾಂತಿಯುತ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2020, 20:04 IST
Last Updated 22 ಡಿಸೆಂಬರ್ 2020, 20:04 IST
ದಾವಣಗೆರೆ ಜಿಲ್ಲೆಯ ಬಿಳಿಚೋಡು ಗ್ರಾಮದ ಮತದಾನ ಕೇಂದ್ರದಲ್ಲಿ ಮತ ಚಲಾಯಿಸಲು ಆಗಮಿಸಿದ್ದ ಮತದಾರರೊಬ್ಬರ ಜೊತೆ ಅವರು ಸಾಕಿದ ನಾಯಿಯೂ ಬಂದು ಸಾಲಿನಲ್ಲಿ ನಿಂತಿತ್ತು –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್
ದಾವಣಗೆರೆ ಜಿಲ್ಲೆಯ ಬಿಳಿಚೋಡು ಗ್ರಾಮದ ಮತದಾನ ಕೇಂದ್ರದಲ್ಲಿ ಮತ ಚಲಾಯಿಸಲು ಆಗಮಿಸಿದ್ದ ಮತದಾರರೊಬ್ಬರ ಜೊತೆ ಅವರು ಸಾಕಿದ ನಾಯಿಯೂ ಬಂದು ಸಾಲಿನಲ್ಲಿ ನಿಂತಿತ್ತು –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್   

ಬೆಂಗಳೂರು: ರಾಜ್ಯದ 117 ತಾಲ್ಲೂಕುಗಳ 3,019 ಗ್ರಾಮ ಪಂಚಾಯಿತಿಗಳ 43,238 ಸ್ಥಾನಗಳಿಗೆ ಸದಸ್ಯರ ಆಯ್ಕೆಗೆ ಮಂಗಳವಾರ ಶಾಂತಿಯುತವಾಗಿ ಮತದಾನ ನಡೆದಿದೆ. ಪ್ರಾಥಮಿಕ ಅಂದಾಜಿನ ಪ್ರಕಾರ ಶೇ 80ರಷ್ಟು ಮಂದಿ ಮತ ಚಲಾಯಿಸಿದ್ದಾರೆ.

ಕೆಲವೆಡೆ ಸಣ್ಣಪುಟ್ಟ ಘಟನೆಗಳು, ಮತ ಪತ್ರದಲ್ಲಿನ ದೋಷಗಳಿಂದಾಗಿ ಗೊಂದಲ ಉಂಟಾಗಿತ್ತು. ಕೋವಿಡ್‌ ನಡುವೆಯೂ ಹೆಚ್ಚಿನ ಸಂಖ್ಯೆಯ ಮತದಾರರು ಮತಗಟ್ಟೆಗೆ ಬಂದು ತಮ್ಮ ಹಕ್ಕು ಚಲಾಯಿಸಿದ್ದಾರೆ. ಒಟ್ಟು 1.53 ಕೋಟಿ ಮತದಾರರ ಪೈಕಿ ಶೇ 80ರಷ್ಟು ಮತದಾರರು ಹಕ್ಕು ಚಲಾಯಿಸಿರುವ ಮಾಹಿತಿ ಲಭ್ಯವಾಗಿದೆ ಎಂದು ರಾಜ್ಯ ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ.

‘ಬುಧವಾರ ಬೆಳಿಗ್ಗೆಯ ವೇಳೆಗೆ ಮತದಾನ ಪ್ರಮಾಣದ ಅಧಿಕೃತ ಮಾಹಿತಿ ಲಭ್ಯವಾಗಬಹುದು’ ಎಂದು ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ರಿವಾಲ್ವರ್‌ ತಂದ ಅಧಿಕಾರಿ: ಬೆಳಗಾವಿ ಜಿಲ್ಲೆಯ ದೇಸೂರು ಗ್ರಾಮದಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜಿತರಾಗಿದ್ದ ಅಧಿಕಾರಿಯೊಬ್ಬರು ರಿವಾಲ್ವರ್‌ ತಂದಿದ್ದರು. ಮತಗಟ್ಟೆ ಸಿಬ್ಬಂದಿ ನೀಡಿದ ಮಾಹಿತಿ ಆಧರಿಸಿ ತಕ್ಷಣವೇ ಸ್ಥಳಕ್ಕೆ ಬಂದ ಪೊಲೀಸರು ರಿವಾಲ್ವರ್‌ ವಶಕ್ಕೆ ಪಡೆದರು. ಬಳಿಕ ಮತಗಟ್ಟೆ ಅಧಿಕಾರಿ ಸುಲೇಮಾನ್‌ ಸನದಿ ಅವರನ್ನು ಹೊರಕ್ಕೆ ಕಳುಹಿಸಿ ಬೇರೊಬ್ಬರನ್ನು ಕರ್ತವ್ಯಕ್ಕೆ ನಿಯೋಜಿಸಲಾಯಿತು.

ಚಿತ್ರದುರ್ಗ ಜಿಲ್ಲೆಯ ಭರಮಸಾಗರ ಹೋಬಳಿಯ ಆಝಾದ್‌ ನಗರ ಮತಗಟ್ಟೆ ಬಳಿ ಸೇರಿದ್ದ ಎರಡು ಗುಂಪುಗಳ ನಡುವೆ ಮತದಾರರನ್ನು ಕರೆತರುವ ವಿಚಾರದಲ್ಲಿ ಘರ್ಷಣೆ ನಡೆದಿದೆ. ಕಲ್ಲು ತೂರಾಟದಲ್ಲಿ ಹಲವರಿಗೆ ಗಾಯಗಳಾಗಿವೆ. ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಅರಕೇರಾ ಗ್ರಾಮದ ಮತಗಟ್ಟೆ ಬಳಿ ಹಣ ಹಂಚುತ್ತಿದ್ದ ವಿಡಿಯೊ ತುಣುಕು ವೈರಲ್‌ ಆಗಿದೆ. ದೇವದುರ್ಗ ತಾಲ್ಲೂಕಿನ ಜೂಟರಡಿ ಗ್ರಾಮದ ಮತಗಟ್ಟೆಯಲ್ಲಿ ಭದ್ರತೆಗೆ ನಿಯೋಜಿಸಿದ್ದ ಹೆಡ್ ಕಾನ್‌ಸ್ಟೆಬಲ್‌ ಮೇಲೆ ಹಲ್ಲೆ ನಡೆದಿದೆ.

ಕಲಬುರ್ಗಿ ಜಿಲ್ಲೆಯ ಕಮಲಾಪುರ ತಾಲ್ಲೂಕಿನ ಕಿಣ್ಣಿ ಸಡಕ್‌ ಗ್ರಾಮ ಪಂಚಾಯಿತಿಯ 1ನೇ ವಾರ್ಡ್‌ನಲ್ಲಿ ಮತ ಪತ್ರದಲ್ಲಿ ಚಿಹ್ನೆ ಬದಲಾವಣೆ ಕಾರಣದಿಂದ ಮತದಾನ ಮುಂದೂಡಲಾಗಿದೆ. ಡಿಸೆಂಬರ್‌ 24ರಂದು ಅಲ್ಲಿ ಮತದಾನ ನಡೆಯಲಿದೆ.

ಎರಡನೇ ಹಂತ: 3,697 ಮಂದಿ ಅವಿರೋಧ ಆಯ್ಕೆ
ಎರಡನೇ ಹಂತದ ಮತದಾನ ನಡೆಯಲಿರುವ 109 ತಾಲ್ಲೂಕುಗಳಲ್ಲಿ 3,697 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ರಾಜ್ಯ ಚುನಾವಣಾ ಆಯೋಗ ತಿಳಿಸಿದೆ.

2,709 ಗ್ರಾಮ ಪಂಚಾಯಿತಿಗಳ 43,291 ಸ್ಥಾನಗಳಿಗೆ ಎರಡನೇ ಹಂತದಲ್ಲಿ ಚುನಾವಣೆ ನಡೆಯಲಿದೆ. 1,47,649 ನಾಮಪತ್ರಗಳು ಸಲ್ಲಿಕೆಯಾಗಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.