ADVERTISEMENT

‘ಅನುದಾನ ಕಡಿತ: ಕೇಂದ್ರದಿಂದ ನ್ಯಾಯದ ವಿಶ್ವಾಸ: ಯಡಿಯೂರಪ್ಪ

ಬಜೆಟ್‌ ಮೇಲಿನ ಚರ್ಚೆಗೆ ಮುಖ್ಯಮಂತ್ರಿ ಉತ್ತರ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2020, 20:02 IST
Last Updated 24 ಮಾರ್ಚ್ 2020, 20:02 IST
ಬಿ.ಎಸ್.ಯಡಿಯೂರಪ್ಪ
ಬಿ.ಎಸ್.ಯಡಿಯೂರಪ್ಪ   

ಬೆಂಗಳೂರು: ’ರಾಜ್ಯಕ್ಕೆ ಬರಬೇಕಾದ ತೆರಿಗೆ ಪಾಲು ಹಾಗೂ ಅನುದಾನದಲ್ಲಿ ಕಡಿತದ ವಿಚಾರದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಜತೆಗೆ ಮಾತುಕತೆ ನಡೆಸಿದ್ದು, ನಮ್ಮ ಪಾಲಿನ ಹಣ ನಮಗೆ ಬರಲಿದೆ‘ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ವಿಧಾನಸಭೆಯಲ್ಲಿ ಮಂಗಳವಾರ ಬಜೆಟ್‌ ಮೇಲಿನ ಚರ್ಚೆಗೆ ಉತ್ತರ ನೀಡಿದ ಅವರು, ವಿರೋಧ ಪಕ್ಷದ ಸದಸ್ಯರ ಆರೋಪಗಳಿಗೆ ತಿರುಗೇಟು ನೀಡಿದರು.

15ನೇ ಹಣಕಾಸು ಆಯೋಗದಲ್ಲಿ ರಾಜ್ಯದ ಪಾಲನ್ನು ಶೇ 4.7ರಿಂದ 3.6ಕ್ಕೆ ಇಳಿಸಲಾಗಿದೆ. ಆದರೆ, ಬಿಹಾರಕ್ಕೆ ಶೇ 10 ಹಾಗೂ ಉತ್ತರ ಪ್ರದೇಶಕ್ಕೆ ಶೇ 17 ಪಾಲು ನೀಡಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಈ ಬಗ್ಗೆಯೂ ಸಚಿವರ ಜತೆಗೆ ಮಾತನಾಡುತ್ತೇನೆ‘ ಎಂದು ಅವರು ಹೇಳಿದರು.

ADVERTISEMENT

ನೋಟು ರದ್ದತಿ ಹಾಗೂ ಜಿಎಸ್‌ಟಿ ಜಾರಿಯಿಂದ ಅಭಿವೃದ್ಧಿಗೆ ಹೊಡೆತ ಬಿದ್ದಿದೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸಾಧನೆಯನ್ನು ಜಗತ್ತಿನ ಹಲವು ರಾಷ್ಟ್ರಗಳು ಮೆಚ್ಚುಗೆ ವ್ಯಕ್ತಪಡಿಸಿವೆ. ಆರು ವರ್ಷಗಳಿಂದ ಯಾವುದೇ ಕಪ್ಪುಚುಕ್ಕೆ ಇಲ್ಲದೆ ಆಡಳಿತ ನಡೆಸಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ನಮ್ಮ ಪಕ್ಷಕ್ಕೆ 303 ಸ್ಥಾನಗಳನ್ನು ಜನರು ನೀಡಿದ್ದಾರೆ ಎಂದು ಸಮರ್ಥಿಸಿಕೊಂಡರು.

‘ಹಸಿರು ಶಾಲು ಹಾಕಿಕೊಂಡು ಮಂಡಿಸಿರುವ ಬಜೆಟ್‌ ಕೇಸರಿಮಯವಾಗಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಕೇಸರಿ ತ್ಯಾಗದ ಸಂಕೇತ. ಬಡವರಿಗೆ, ಕೃಷಿಕರಿಗೆ, ಹಿಂದುಳಿದವರ ಬದುಕನ್ನು ಹಸನುಗೊಳಿಸುವುದು ನಮ್ಮ ಸರ್ಕಾರದ ಉದ್ದೇಶ’ ಎಂದರು.

‘ಮೂರು ತಿಂಗಳ ಅವಧಿಗೆ ಲೇಖಾನುದಾನ ಪಡೆಯುವ ಅವಶ್ಯಕತೆ ಇಲ್ಲ. ಒಂದು ವರ್ಷದ ಅವಧಿಗೆ ಲೇಖಾನುದಾನ ಪಡೆದರೂ ತಪ್ಪಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಅವರ ಪ್ರಶ್ನೆಗೆ ಅವರೇ ಉತ್ತರ ಹೇಳಿದ್ದಾರೆ’ ಎಂದು ವ್ಯಂಗ್ಯವಾಡಿದರು.

ಈ ಸಲದ ಕೇಂದ್ರ ಬಜೆಟ್‌ನಲ್ಲಿ ಕೃಷಿ ಕ್ಷೇತ್ರಕ್ಕೆ ಶೇ 9.5 ಅನುದಾನ ಮೀಸಲಿಡಲಾಗಿದೆ. ಇದರಿಂದಾಗಿ, ರಾಜ್ಯದ ಕೃಷಿ ಕ್ಷೇತ್ರಕ್ಕೂ ಹೆಚ್ಚಿನ ಅನುದಾನ ಸಿಗಲಿದೆ. ಪ್ರಧಾನಮಂತ್ರಿ ಕೃಷಿ ಸಮ್ಮಾನ್‌ ಯೋಜನೆಯಡಿ ರಾಜ್ಯದ ಪಾಲಿನ ₹825 ಕೋಟಿಯನ್ನು 41 ಲಕ್ಷ ಫಲಾನುಭವಿಗಳ ಖಾತೆಗಳಿಗೆ ಹಾಕಲಾಗಿದೆ. 2020–21ರಲ್ಲಿ ₹2600 ಕೋಟಿ ಒದಗಿಸಲಾಗುವುದು ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.