ಬೆಂಗಳೂರು: ಚಾಮರಾಜನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರ ಆಪ್ತ ಸಹಾಯಕನ ಬಳಿ ₹25.75 ಲಕ್ಷ ಲಂಚದ ಹಣ ಪತ್ತೆಯಾಗಿದ್ದ ಪ್ರಕರಣದಲ್ಲಿ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಮತ್ತು ಲೋಕಾಯುಕ್ತ ಪೊಲೀಸರು ಸರಿಯಾಗಿ ತನಿಖೆ ನಡೆಸಿಲ್ಲ ಎಂದು ಹೇಳಿರುವ ಲೋಕಾಯುಕ್ತ ವಿಶೇಷ ನ್ಯಾಯಾಲಯ, ಮತ್ತೆ ತನಿಖೆ ನಡೆಸುವಂತೆ ಆದೇಶಿಸಿದೆ.
ಪುಟ್ಟರಂಗಶೆಟ್ಟಿ ಅವರು 2019ರಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾಗಿದ್ದರು. ಅದೇ, 2019ರ ಜನವರಿ 4ರಂದು ಪುಟ್ಟರಂಗಶೆಟ್ಟಿ ಅವರ ಆಪ್ತ ಸಹಾಯಕ ಮೋಹನ್ ಕುಮಾರ್ ವಿಧಾನಸೌಧದಲ್ಲೇ, ₹25.76 ಲಕ್ಷ ನಗದಿನೊಂದಿಗೆ ವಿಧಾನಸೌಧ ಪೊಲೀಸರಿಗೆ ಸಿಕ್ಕಿಬಿದ್ದಿದ್ದರು.
ತಮ್ಮ ವಿರುದ್ಧದ ಪ್ರಕರಣ ಕೈಬಿಡುವಂತೆ ಮೋಹನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶ ರಾಧಾಕೃಷ್ಣ ಅವರು, ಅರ್ಜಿಯನ್ನು ತಿರಸ್ಕರಿಸಿದ್ದಾರೆ. ಲಂಚ ನೀಡಿದ ಗುತ್ತಿಗೆದಾರರನ್ನೂ ಒಳಗೊಂಡು ತನಿಖೆ ನಡೆಸಿ ಎಂದು ಆದೇಶಿಸಿದ್ದಾರೆ.
‘ಈ ಪ್ರಕರಣದಲ್ಲಿ ಮೋಹನ್ ಕುಮಾರ್ ಅವರಿಗೆ ಲಂಚದ ಹಣ ನೀಡಿದ್ದ ಅನಂತಕೃಷ್ಣ, ಶ್ರೀನಿಧಿ, ನಂದನ, ಮಂಜುನಾಥ, ಕೃಷ್ಣಮೂರ್ತಿ ಅವರನ್ನು ಎಫ್‌ಐಆರ್‌ನಲ್ಲಿ ಆರೋಪಿಗಳನ್ನಾಗಿ ಉಲ್ಲೇಖಿಸಲಾಗಿತ್ತು. ಆದರೆ ಅವರ ವಿರುದ್ಧ ಸಾಕ್ಷ್ಯ ಇಲ್ಲ ಎಂದು ಆರೋಪ ಪಟ್ಟಿಯಲ್ಲಿ ತಿಳಿಸಲಾಗಿದೆ. ಇದು ಎಷ್ಟು ಸರಿ’ ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿದೆ.
‘ತಾನು ಹಣ ಪಡೆದುಕೊಂಡಿದ್ದಕ್ಕೆ ಮತ್ತು ಹಣವನ್ನು ಪಡೆದುಕೊಂಡಿದ್ದು ಏತಕ್ಕೆ ಎಂಬುದಕ್ಕೆ ಸಾಕ್ಷ್ಯಗಳಿಲ್ಲ. ಇವೆಲ್ಲವನ್ನೂ ಪರಸ್ಪರ ಸಮೀಕರಿಸುವ ಸಾಕ್ಷ್ಯಗಳಿಲ್ಲ. ಹೀಗಾಗಿ ಆರೋಪದಿಂದ ನನ್ನನ್ನು ಕೈಬಿಡಬೇಕು ಎಂದು ಆರೋಪಿ ಕೋರಿದ್ದಾರೆ. ಈ ಪ್ರತಿಯೊಂದಕ್ಕೂ ಪರಸ್ಪರ ಸಂಬಂಧವಿದೆ ಎಂಬುದನ್ನು ಲಭ್ಯವಿರುವ ಸಾಕ್ಷ್ಯಗಳು ಮತ್ತು ಆರೋಪಿಗಳ ಹೇಳಿಕೆಗಳು ತೋರಿಸುತ್ತವೆ. ತನಿಖೆಯ ಅಪೂರ್ಣ ಎಂಬುದನ್ನು ಸೂಚಿಸುತ್ತದೆ’ ಎಂದಿದೆ.
‘ಇಲ್ಲಿ ಲಂಚ ನೀಡುವ ಮೂಲಕ ಗುತ್ತಿಗೆದಾರರೂ ಅಪರಾಧದಲ್ಲಿ ಭಾಗಿಯಾಗಿದ್ದಾರೆ ಎಂಬುದರಲ್ಲಿ ಅನುಮಾನವಿಲ್ಲ. ಹೀಗಿರುವಾಗ ತನಿಖೆಯ ಯಾವ ಹಂತದಲ್ಲೂ ಅವರನ್ನು ವಿಚಾರಣೆಗೆ ಒಳಪಡಿಸಿಲ್ಲ. ಈ ಕಾರಣದಿಂದಲೂ ತನಿಖೆ ಅಪೂರ್ಣ. ಮತ್ತೆ ತನಿಖೆ ನಡೆಸಿ, ಮೂರು ತಿಂಗಳಲ್ಲಿ ವರದಿ ಸಲ್ಲಿಸಿ’ ಎಂದು ಆದೇಶಿಸಿದೆ.
‘ಸಚಿವರಿಗೆ ಸಂಬಂಧವಿಲ್ಲವೆನ್ನುವುದು ಅಸಾಧ್ಯ’
ಸಚಿವರ ಕಚೇರಿಯಲ್ಲಿ ಅವರ ಹೆಸರಿನಲ್ಲಿ ಅವರ ಅಧಿಕೃತ ಆಪ್ತ ಸಹಾಯಕ ಲಂಚದ ಹಣ ಪಡೆದುಕೊಂಡಿದ್ದಾರೆ ಎಂಬುದು ತನಿಖೆಯಲ್ಲಿ ಗೊತ್ತಾಗಿದೆ. ಆರೋಪಿಗಳ ಹೇಳಿಕೆಗಳೂ ಇದನ್ನೇ ಹೇಳುತ್ತವೆ. ಸಚಿವರಿಗೆ ಅರಿವಿಲ್ಲದ ಹಾಗೆ ಇವೆಲ್ಲಾ ನಡೆಯುವುದು ಅಸಾಧ್ಯ ಎಂದು ನ್ಯಾಯಾಲಯದ ಆದೇಶ ಪ್ರತಿಪಾದಿಸಿದೆ.
‘ಪ್ರತಿ ಕಾಮಗಾರಿಗೆ ಕಾರ್ಯಕ್ರಮದಲ್ಲಿ ಸಚಿವರಿಗೆ ಶೇ 6ರಷ್ಟು ಕಮಿಷನ್ ನೀಡಬೇಕು ಎಂದು ಆರೋಪಿ ಮೋಹನ್ ಇತರ ಆರೋಪಿಗಳಿಗೆ ತಿಳಿಸಿದ್ದಾನೆ. ಸಚಿವರ ಆಪ್ತ ಸಹಾಯಕರಾಗಿ ಗುತ್ತಿಗೆ ಆಧಾರದಲ್ಲಿ ನೇಮಕವಾಗಿರುವ ಆರೋಪಿ ಸ್ವತಃ ತಾನೇ ಲಂಚದ ಹಣ ಪಡೆದುಕೊಂಡಿದ್ದಾನೆ. ಹೀಗಿರುವಾಗ ಲಂಚ ಪಡೆದುಕೊಂಡಿದ್ದರಲ್ಲಿ ಸಚಿವರಿಗೂ ಆರೋಪಿಗೂ ಸಂಬಂಧವೇ ಇಲ್ಲ ಎಂದು ಹೇಳುವುದು ಅಸಾಧ್ಯ’ ಎಂದೂ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.