
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್
ಬೆಂಗಳೂರು: ‘ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ವ್ಯಾಪ್ತಿಗೆ ಭವಿಷ್ಯದಲ್ಲಿ ಸೇರ್ಪಡೆ ಮಾಡಿಕೊಳ್ಳಬೇಕಾದ ಬೆಂಗಳೂರು ಹೊರವಲಯದ ಪ್ರದೇಶಗಳ ಸಮೀಕ್ಷೆ ನಡೆಸಲು ಸೂಚಿಸಲಾಗಿದೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯ 12 ಸ್ಥಳೀಯ ಸಂಸ್ಥೆಗಳ ಪ್ರಗತಿ ಪರಿಶೀಲನೆ ಸಭೆ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಬಿಎಂಆರ್‌ಡಿಎ ವ್ಯಾಪ್ತಿಯ ಪ್ರದೇಶಗಳು ಮುಂದೆ ಬೆಂಗಳೂರು ನಗರದ ಭಾಗವಾಗಲಿವೆ. ಹಾಗಾಗಿ, ಈಗಿನಿಂದಲೇ ರಸ್ತೆ ವಿಸ್ತರಣೆ ಮತ್ತಿತರ ಮೂಲಸೌಕರ್ಯಗಳ ಅಭಿವೃದ್ಧಿ ಮಾಡಲು ಸೂಕ್ತ ಯೋಜನೆ ರೂಪಿಸಬೇಕಿದೆ. ನಗರಸಭೆ, ಪಟ್ಟಣ ಪಂಚಾಯತಿ ಸೇರಿದಂತೆ ಒಂದಷ್ಟು ಪ್ರದೇಶಗಳಲ್ಲಿ ರಸ್ತೆಗಳು ಕಿರಿದಾಗಿವೆ. ಲೋಕೋಪಯೋಗಿ ಇಲಾಖೆ, ನಗರ ಯೋಜನೆ ಇಲಾಖೆಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ನೀಲನಕ್ಷೆ ಸಿದ್ಧಪಡಿಸಲು ಸೂಚನೆ ನೀಡಲಾಗಿದೆ’ ಎಂದರು.
ಬೆಂಗಳೂರು ವ್ಯಾಪ್ತಿಗೆ ಒಳಪಡದ, ಬೆಂಗಳೂರು ಸುತ್ತಲ ಪ್ರದೇಶಗಳ ಸ್ಥಳೀಯ ಸಂಸ್ಥೆಗಳಲ್ಲೂ ಬಿ–ಖಾತೆಯಿಂದ ಎ–ಖಾತೆಗೆ ಪರಿವರ್ತನೆ ಮಾಡಲು, ಬೆಂಗಳೂರು ನಗರದಲ್ಲಿ ಆಸ್ತಿಗಳ ಮೌಲ್ಯ ಆಧಾರಿತ ತೆರಿಗೆ ಸಂಗ್ರಹದಂತೆ ಏಕರೂಪತೆ ತರಲು ಹಾಗೂ ಅಕ್ರಮ ಕಟ್ಟಡ ನಿರ್ಮಾಣಕ್ಕೆ ಕಡಿವಾಣ ಹಾಕಲು ಸೂಚಿಸಿದ್ದೇನೆ’ ಎಂದು ಹೇಳಿದರು.
‘ಬೆಂಗಳೂರು ನಗರ ಮಾದರಿಯಲ್ಲಿಯೇ ಎಲ್ಲ ಆಸ್ತಿ ದಾಖಲೆಗಳನ್ನು ಡಿಜಿಟಲೀಕರಣ ಮಾಡಬೇಕು. ಈಗಾಗಲೇ 110 ಹಳ್ಳಿಗಳಿಗೆ ಮೂಲಸೌಕರ್ಯ ಒದಗಿಸಲಾಗುತ್ತಿದೆ. ಭವಿಷ್ಯದಲ್ಲಿ ಸೇರ್ಪಡೆಯಾಗುವ ಪ್ರದೇಶಗಳಲ್ಲಿ ನಾಗರಿಕ ಪ್ರಜ್ಞೆ ಮೂಡಿಸಬೇಕಿದೆ. ಕಸವನ್ನು ಎಲ್ಲೆಂದರಲ್ಲಿ ಬಿಸಾಡಲಾಗುತ್ತಿದೆ. ಬೆಂಗಳೂರು ನಗರದ ಮಾದರಿಯಲ್ಲಿ ಕಸ ಸಂಗ್ರಹ ವ್ಯವಸ್ಥೆ ಬಗ್ಗೆಯೂ ಸೂಚನೆ ನೀಡಲಾಗಿದೆ. ಬೆಂಗಳೂರು ದಕ್ಷಿಣ ಮಾತ್ರವಲ್ಲದೆ ಇತರೆ ಗಡಿ ಪ್ರದೇಶಗಳ ಸ್ಥಳೀಯ ಸಂಸ್ಥೆಗಳತ್ತ ಗಮನಹರಿಸಲಾಗುವುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.